ಕೊನೆಗೂ ತಮಿಳುನಾಡು ಹೈಡ್ರಾಮಕ್ಕೆ ತೆರೆ : ಶಶಿಕಲಾ ಆಪ್ತ ಪಳನಿಸ್ವಾಮಿ ಸಿಎಂ, ಸೆಲ್ವಂ ಸೈಲೆಂಟ್

ಈ ಸುದ್ದಿಯನ್ನು ಶೇರ್ ಮಾಡಿ

Paneerselvam-Palaniswamy

ಚೆನ್ನೈ, ಫೆ.16- ತಮಿಳುನಾಡು ರಾಜಕೀಯ ರಂಗದಲ್ಲಿ ಅಲ್ಲೋಲ-ಕಲ್ಲೋಲಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟದ ಹೈಡ್ರಾಮಕ್ಕೆ ಕೊನೆಗೂ ತೆರೆಬಿದ್ದಿದ್ದು, ರಾಜ್ಯಪಾಲ ವಿದ್ಯಾಸಾಗರ ರಾವ್ ಸರ್ಕಾರ ರಚಿಸಲು ಲೋಕೋಪಯೋಗಿ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಯಡಪ್ಪಾಡಿ ಪಳನಿಸ್ವಾಮಿ ಅವರನ್ನು ಆಹ್ವಾನಿಸಿದ್ದಾರೆ. ಇದರೊಂದಿಗೆ ಜೈಲುಪಾಲಾಗಿರುವ ಶಶಿಕಲಾ ನಟರಾಜನ್ ಪರಮಾಪ್ತ ಪಳನಿಸ್ವಾಮಿ ಅವರಿಗೆ ಮುಖ್ಯಮಂತ್ರಿ ಪಟ್ಟ ಲಭಿಸಿದಂತಾಗಿದ್ದು, ಮತ್ತು ಸಿಎಂ ಆಗಬೇಕೆಂಬ ಪನ್ನೀರ್ ಸೆಲ್ವಂ ಕನಸು ಭಗ್ನಗೊಂಡಿದೆ.
ಶಶಿಕಲಾ ಭಂಟ ಪಳನಿ ಸ್ವಾಮಿ ಮುಖ್ಯಮಂತ್ರಿಯಾಗಿ ಇಂದು ಸಂಜೆಯೇ ಪ್ರಮಾಣ ವಚನ ಸ್ವೀಕರಿಸಲಿದ್ದು, ಮುಂದಿನ 15 ದಿನಗಳೊಳಗೆ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲರು ಪಳನಿ ಸ್ವಾಮಿಗೆ ಗಡುವು ನೀಡಿದ್ದಾರೆ.

ಯಡಪ್ಪಾಡಿ ಪಳನಿ ಸ್ವಾಮಿ ರಾಜಭವನದಲ್ಲಿ ಸಂಜೆ 4.30ಕ್ಕೆ ನಡೆಯಲಿರುವ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.   ಪಳನಿಸ್ವಾಮಿ ಜೊತೆ ಈ ಹಿಂದೆ ದಿ.ಜಯಲಲಿತಾ ಹಾಗೂ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸಂಪುಟಲ್ಲಿದ್ದ ಕೆಲ ಹಿರಿಯ ಸಚಿವರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.  ರಾಜ್ಯಪಾಲರು ತಮ್ಮನ್ನು ಭೇಟಿ ಮಾಡಲು ಇಂದು ಬೆಳಗ್ಗೆ 11.30ಕ್ಕೆ ಪಳನಿ ಸ್ವಾಮಿ ಅವರಿಗೆ ಸಮಯ  ನಿಗದಿಗೊಳಿಸಿದರು. ವಿದ್ಯಾಸಾಗರ ರಾವ್ ಅವರನ್ನು ಭೇಟಿ ಮಾಡಿದ ಪಳನಿಸ್ವಾಮಿಗೆ ಪಕ್ಷದ ಹಿರಿಯ ಮುಖಂಡರಾದ ಸೆಂಗೊಟ್ಟಿಯನ್, ದಿನಕರನ್, ಟಿ.ಜಯಕುಮಾರ್, ಅನ್ಬಳಗನ್, ತಂಗಮಣಿ, ವೇಲುಮಣಿ, ದಿಂಡಿಗಲ್ ಶ್ರೀನಿವಾಸನ್ ಸೇರಿದಂತೆ ಹಲವರು ಸಾಥ್ ನೀಡಿದರು.

ರಾಜ್ಯಪಾಲರ ಸೂಚನೆ ಮೇರೆಗೆ ತಮಗೆ ಬೆಂಬಲ ನೀಡುವ 124 ಶಾಸಕರ ಸಹಿಗಳು ಇರುವ ಹೊಸ ಪತ್ರವನ್ನು ಅವರು ಸಲ್ಲಿಸಿದರು. ಶಾಸಕರ ಪಟ್ಟಿ ನೀಡುತ್ತಿದ್ದಂತೆ ರಾಜ್ಯಪಾಲರು ಅಧಿಕೃತವಾಗಿ ಸರ್ಕಾರ ರಚನೆಗೆ ಆಹ್ವಾನ ನೀಡಿ ಬಹುಮತ ಸಾಬೀತಿಗೆ 15 ದಿನಗಳ ಗಡುವನ್ನೂ ನಿಗದಿಗೊಳಿಸಿದರು.

ಪಳನಿ ಬಣದ ಸಂಭ್ರಮಾಚರಣೆ :

ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡುತ್ತಿದ್ದಂತೆ ರಾಜಭವನದ ಹೊರಗೆ ಎಐಎಡಿಎಂಕೆ ಕಾರ್ಯಕರ್ತರು ಮತ್ತು ಬೆಂಬಲಿಗರು ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.   ಇನ್ನೊಂದೆಡೆ, ಪನ್ನೀರ್ ಸೆಲ್ವಂ ಬಣದ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಗುಂಪಿನ ಬೆಂಬಲ ಸಾಬೀತುಪಡಿಸಲು ಸಮಯ ನೀಡುವಂತೆ ಮನವಿ ಮಾಡಿದ್ದಾರೆ ಎಂದು ರಾಜಭವನದ ಉನ್ನತ ಮೂಲಗಳು ತಿಳಿಸಿವೆ.

ರಾಜ್ಯಪಾಲರ ಜಾಣ ನಡೆ :

ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೇಂದ್ರದಿಂದ ರಾಜ್ಯಪಾಲರಿಗೆ ನಿರ್ದೇಶನ ಬಂದಿತ್ತು ಎನ್ನಲಾಗಿದೆ. ಪದೇ ಪದೇ ವಿಳಂಬ ಮಾಡಿದರೆ ಜನತೆ ಆಕ್ರೋಶಗೊಂಡು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಸಾಧ್ಯತೆ ಇದೆ. ಹೀಗಾಗಿ ವಿಳಂಬ ಮಾಡಿದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕೆ ರಾಜ್ಯಪಾಲರು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.   ಕಳೆದ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿದ ಯಡಪ್ಪಾಡಿ ಪಳನಿಸ್ವಾಮಿ ತಮಗೆ 124 ಮಂದಿ ಶಾಸಕರ ಬೆಂಬಲವಿದೆ ಎಂಬ ಪತ್ರವನ್ನು ನೀಡಿದ್ದರು. ಸರ್ಕಾರ ರಚನೆಗೆ ಅವಕಾಶ ನೀಡುವಂತೆಯೂ ನಿನ್ನೆ ರಾತ್ರಿ ಮನವಿ ಮಾಡಿದ್ದರು.

ಕುದುರೆ ವ್ಯಾಪಾರ ನಡೆಯುವುದನ್ನು ತಪ್ಪಿಸುವ ಕಾರಣಕ್ಕಾಗಿಯೇ ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಳ್ಳದೆ ಸಂವಿಧಾನದ ಚೌಕ್ಕಟ್ಟಿನಲ್ಲೇ ಬಿಕ್ಕಟ್ಟನ್ನು ಪರಿಹರಿಸುವ ಕಾರ್ಯ ರಾಜ್ಯಪಾಲರಿಂದ ನಡೆದಿದೆ.   ಪನ್ನೀರ್ ಸೆಲ್ವಂ ತಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ನಾನು ಒತ್ತಡದಲ್ಲಿ ರಾಜೀನಾಮೆ ನೀಡಿದ್ದೆ. ನನಗೆ ಪಕ್ಷದ ಎಲ್ಲ ಶಾಸಕರ ಬೆಂಬಲವಿದೆ ಎಂದು ಪತ್ರ ನೀಡಿದ್ದರು.  ಆದರೆ, ಮೂಲಗಳ ಪ್ರಕಾರ ಪನ್ನೀರ್ ಸೆಲ್ವಂಗೆ 11 ಮಂದಿ ಶಾಸಕರು ಹಾಗೂ ಅಷ್ಟೇ ಸಂಖ್ಯೆಯ ಲೋಕಸಭಾ ಸದಸ್ಯರ ಬೆಂಬಲವಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಅಮ್ಮನ ಆಸೆಯಂತೆ ಪಕ್ಷವನ್ನು ಉಳಿಸಬೇಕು. ಯಾವುದೇ ಕಾರಣಕ್ಕೂ ಆಮಿಷಗಳಿಗೆ ಬಲಿಯಾಗದೆ ಶಾಸಕರು ತಮ್ಮ ನಿರ್ಧಾರವನ್ನು ಬದಲಿಸಬಾರದು. ಪಳನಿಸ್ವಾಮಿಗೆ ನಿಮ್ಮ ನಿಷ್ಠೆ ಇರಲಿ ಎಂದು ಸದ್ಯಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಶಾಸಕರಿಗೆ ಸೂಚಿಸಿದ್ದರು.  ಹೀಗಾಗಿ ಬಹುತೇಕ ಶಾಸಕರು ಪನ್ನೀರ್ ಸೆಲ್ವಂ ಬದಲಿಗೆ ಪಳನಿ ಸ್ವಾಮಿ  ನಾಯಕತ್ವಕ್ಕೆ ಜೈ ಎಂದಿದ್ದಾರೆ.   ತಮಿಳುನಾಡಿನ ವಿಧಾನಸಭೆಯಲ್ಲಿ ಒಟ್ಟು 234 ಮಂದಿ ಸದಸ್ಯರಿದ್ದಾರೆ. ಯಾವುದೇ ಸರ್ಕಾರ ಬಹುಮತ ಸಾಬೀತುಪಡಿಸಲು ಸರಳ ಬಹುಮತವಾಗಿ 118 ಸದಸ್ಯರ ಬೆಂಬಲ ಬೇಕು. ಎಐಎಡಿಎಂಕೆ 135 ಶಾಸಕರನ್ನು ಹೊಂದಿದೆ. ಇದರಲ್ಲಿ ಪನ್ನೀರ್ ಸೆಲ್ವಂ ಗುಂಪಿನಲ್ಲಿ 11 ಮಂದಿ ಶಾಸಕರು ಗುರುತಿಸಿಕೊಂಡಿದ್ದಾರೆ. ಉಳಿದಂತ 124 ಮಂದಿ ಶಾಸಕರು ಪಳನಿಸ್ವಾಮಿ ಗುಂಪಿನಲ್ಲಿದ್ದಾರೆ.

ಪರಪ್ಪನ ಅಗ್ರಹಾರಕ್ಕೆ ಭೇಟಿ..?:

ಯಡಪ್ಪಾಡಿ ಪಳನಿಸ್ವಾಮಿ ಇಂದು ಸಂಜೆ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ತಮ್ಮ ಗಾಡ್ ಮದರ್ ಶಶಿಕಲಾ ಅವರ ಆಶೀರ್ವಾದ ಪಡೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin