ಕೊನೆಗೂ ನಿಗದಿಯಾಯ್ತು ಮಹದಾಯಿ ಮುಹೂರ್ತ : ನ. 3ರಂದು 3 ರಾಜ್ಯಗಳ ಸಿಎಂಗಳ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

CM-Mahadayi-Siddaramaiah-Pa

ಬೆಂಗಳೂರು,ಅ.21-ಗೋವಾ ಮುಖ್ಯಮಂತ್ರಿ ಕೊನೆ ಕ್ಷಣದಲ್ಲಿ ಕೈ ಕೊಟ್ಟ ಕಾರಣ ದಿಢೀರನೆ ರದ್ದಾಗಿದ್ದ ಮಹದಾಯಿ ನದಿ ನೀರು ಹಂಚಿಕೆ ಸಭೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.
ನವೆಂಬರ್ 3ರಂದು ಮುಂಬೈನಲ್ಲಿ ಕರ್ನಾಟಕ-ಮಹಾರಾಷ್ಟ್ರ ಮತ್ತು ಗೋವಾ ಮುಖ್ಯಮಂತ್ರಿಗಳ ಸಭೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆಯಲಿದೆ. ಈ ಮೂಲಕ ಮಹದಾಯಿ ನದಿ ನೀರು ವಿವಾದದ ಮೇಲೆ ಆವರಿಸಿದ್ದ ಆತಂಕ ಸದ್ಯಕ್ಕೆ ನಿವಾರಣೆಯಾಗಿದೆ.  ನವೆಂಬರ್ 3ರಂದು ಮುಂಬೈನಲ್ಲಿ ಸಭೆ ನಡೆಸಲು ನನ್ನ ಅಭ್ಯಂತರವಿಲ್ಲ. ನಾನು ಸಭೆಗೆ ಹಾಜರಾಗುತ್ತೇನೆಂದು ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‍ಗೆ ಹೇಳಿದ್ದಾರೆ.

ಇಂದು ನಡೆಯಬೇಕಿದ್ದ ಸಭೆಗೆ ಅನಾರೋಗ್ಯದ ಕಾರಣ ನಾನು ಭಾಗವಹಿಸಲು ಸಾಧ್ಯವಾಗಲಿಲ್ಲ. ನವೆಂಬರ್ 3ರಂದು ಸಭೆಗೆ ಯಾವುದೇ ಕಾರಣ ಹೇಳದೆ ಹಾಜರಾಗುತ್ತೇನೆ. ಕರ್ನಾಟಕದ ಮುಖ್ಯಮಂತ್ರಿಗೂ ಮಾಹಿತಿ ನೀಡಿ ಎಂದು ಫಡ್ನವೀಸ್‍ಗೆ ಪರ್ಸೇಕರ್ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.  ಈ ಹಿಂದೆ ನಿಗದಿಯಾಗಿದ್ದಂತೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮುಖ್ಯಮಂತ್ರಿಗಳ ಸಭೆ ಇಂದು ಮುಂಬೈನಲ್ಲಿ ನಡೆಯಬೇಕಿತ್ತು. ಬುಧವಾರ ರಾತ್ರಿ ಇದ್ದಕ್ಕಿದ್ದಂತೆ ಸಭೆಗೆ ಭಾಗವಹಿಸಲು ಸಾಧ್ಯವಿಲ್ಲ ಎಂದು ಗೋವಾ ಮುಖ್ಯಮಂತ್ರಿ ಅನಾರೋಗ್ಯದ ಕಾರಣ ಹೇಳಿ ಸಭೆಯಿಂದ ಹಿಂದೆ ಸರಿದ ಕಾರಣ ರದ್ದಾಗಿತ್ತು.

ಮೂಲಗಳ ಪ್ರಕಾರ ಗೋವಾದಲ್ಲೂ ಕೂಡ ಅಲ್ಲಿನ ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್ ಕೂಡ ಮಹದಾಯಿ ನದಿಯಿಂದ ಕರ್ನಾಟಕಕ್ಕೆ ನೀರು ಹರಿಸಲು ವಿರೋಧ ವ್ಯಕ್ತಪಡಿಸಿತ್ತು.
ಇತ್ತೀಚೆಗೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಲುಜಿನೊ ಫಲೆರೊ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಪ್ರತಾಪ್ ಸಿಂಗ್ ರಾಣೆ ಮತ್ತಿತರ ನಾಯಕರು ಕರ್ನಾಟಕಕ್ಕೆ ಒಂದೇ ಒಂದು ಹನಿ ನೀರು ಹರಿಸಬಾರದೆಂದು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿದ್ದರು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ಕಾರಣಕ್ಕಾಗಿ ಸಭೆಯಿಂದ ದೂರ ಉಳಿದಿದ್ದರು.

ಸಭೆಯಲ್ಲಿ ಭಾಗವಹಿಸಿದ ತಕ್ಷಣ ಎಲ್ಲ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಅಲ್ಲದೆ ಇದು ಪೂರ್ವಭಾವಿ ಸಭೆಯಾಗಿರುವುದರಿಂದ ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ನೀವು ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಖಾತ್ರಿಪಡಿಸಿ ಎಂದು ಕೇಂದ್ರದ ಪ್ರಭಾವಿ ಸಚಿವರೊಬ್ಬರು ಪರ್ಸೇಕರ್‍ಗೆ ಮನವರಿಕೆ ಮಾಡಿಕೊಟ್ಟರು.  ಹೀಗೆ ಕೇಂದ್ರ ಸಚಿವರಿಂದ ಅಭಯಹಸ್ತ ಸಿಕ್ಕ ಬಳಿಕ ಪರ್ಸೇಕರ್ ನವೆಂಬರ್ 3ರಂದು ಸಭೆ ನಿಗದಿಪಡಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾಗಿ ತಿಳಿದುಬಂದಿದೆ.  ಇನ್ನೊಂದೆಡೆ ಕರ್ನಾಟಕದ ಕೆಲ ಬಿಜೆಪಿ ನಾಯಕರು ಕೂಡ ಇದು ಅತ್ಯಂತ ಸೂಕ್ಷ್ಮ ವಿಷಯವಾಗಿರುವುದರಿಂದ ಸಭೆಯನ್ನು ಬಹಿಷ್ಕರಿಸಿದರೆ ಬಿಜೆಪಿಗೆ ಹಿನ್ನೆಡೆಯಾಗುತ್ತದೆ. ನಮ್ಮ ಪಕ್ಷ ಪ್ರಬಲ ಸಂಘಟನೆ ಹೊಂದಿರುವುದೇ ಉತ್ತರ ಕರ್ನಾಟಕದಲ್ಲಿ. ಇದು ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಮನವರಿಕೆ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin