ಕೊನೆಗೂ ಪೊಲೀಸ್ ಪೇದೆಗಳ ಆರ್ಡರ್ಲಿ ಪದ್ಧತಿ ರದ್ದುಗೊಳಿಸಿದ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Police-01

ಬೆಂಗಳೂರು,ಮಾ.30-ಬ್ರಿಟಿಷರ ಕಾಲದಿಂದಲೇ ಜಾರಿಗೆ ಬಂದಿದ್ದ ಪೊಲೀಸ್ ಪೇದೆಗಳ ಆರ್ಡರ್ಲಿಪದ್ಧತಿಯನ್ನು ಸರ್ಕಾರ ಕೊನೆಗೂ ರದ್ದುಗೊಳಿಸಿದೆ. ಅಪರಾಧ ನಿಯಂತ್ರಣ, ಕ್ರಿಮಿನಲ್‍ಗಳ ಬಂಧನ, ಕಾನೂನು ಸುವ್ಯವಸ್ಥೆ ಪರಿಪಾಲನೆ ವಿಷಯಗಳ ಬಗ್ಗೆ ಒಂದು ವರ್ಷ ತರಬೇತಿ ಪಡೆದು ಹಗಲಿರುಳು ಐಪಿಎಸ್ ಅಧಿಕಾರಿಗಳ ಮನೆ ಕಾಯುತ್ತಿದ್ದ ಈ ವ್ಯವಸ್ಥೆಗೆ ಬ್ರೇಕ್ ಹಾಕಿದ ಸರ್ಕಾರ ಇತ್ತೀಚೆಗೆ ಅಧಿಕೃತ ಆದೇಶ ಹೊರಡಿಸಿದೆ.  ರಾಜ್ಯ ಸರ್ಕಾರ ಆರ್ಡರ್ಲಿ ಪದ್ಧತಿಯನ್ನು ಪರಿಷ್ಕೃತಗೊಳಿಸಿ ಆದೇಶ ಹೊರಡಿಸಿದ್ದು, ಈ ಪ್ರಕಾರ ಪೊಲೀಸ್ ಸಿಬ್ಬಂದಿಯನ್ನು ಈ ಸೇವೆಗೆ ಬಳಸುವಂತಿಲ್ಲ. ಬದಲಿಗೆ ಇಲಾಖೆಯಲ್ಲಿರುವ ಅನುಯಾಯಿಗಳನ್ನು (ಸಹಾಯಕರು) ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಜತೆಗೆ ಆರ್ಡರ್ಲಿ ವೇತನ ಬಿಡುಗಡೆ ಮಾಡಲಾಗುತ್ತದೆ. ಅದನ್ನು ಬಳಸಿಕೊಂಡು ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕಚೇರಿಗಳಲ್ಲಿ ಆರ್ಡರ್ಲಿ ಸೇವೆಗೆ ಪೊಲೀಸರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಇದೆ. ಆದರೆ, ಮನೆಯಲ್ಲಿ ಅಥವಾ ಜವಾನನ ಕೆಲಸಕ್ಕೆ ಪೊಲೀಸರನ್ನು ನೇಮಕ ಮಾಡಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಧಿಕಾರಿ ದರ್ಜೆಗೆ ತಕ್ಕಂತೆ ಆರ್ಡರ್ಲಿ ಸಿಬ್ಬಂದಿ ನೇಮಕ ಮತ್ತು ವೇತನ ನಿಗದಿಪಡಿಸಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಸಿಬ್ಬಂದಿ ಬಗ್ಗೆ ಪ್ರಮಾಣಪತ್ರ ಸಲ್ಲಿಸಿ ವೇತನದ ಅನುದಾನ ಪಡೆಯಬಹುದು.
ತರಬೇತಿ, ಪ್ರವಾಸ ಇನ್ನಿತರ ಕಾರಣಕ್ಕೆ 1 ತಿಂಗಳು ಪೂರ್ಣ ರಜೆ ಪಡೆಯುವ ಅಧಿಕಾರಿಯೂ ಆರ್ಡರ್ಲಿ ಭತ್ಯೆ ಪಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೊಲೀಸರಿಂದ ಪ್ರತಿಭಟನೆ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಆರ್ಡರ್ಲಿ ಪದ್ಧತಿ ರದ್ದುಗೊಳಿಸಿ, ಐಪಿಎಸ್ ಅಧಿಕಾರಿಗಳ ಬಳಿ ಕೆಲಸ ಮಾಡಲು ಪ್ರತ್ಯೇಕ ಸಿಬ್ಬಂದಿ ನೇಮಿಸುವ ಭರವಸೆ ನೀಡಿತ್ತು. ಈ ಪದ್ಧತಿ ರದ್ದಾದ ಹಿನ್ನೆಲೆಯಲ್ಲಿ ಕೆಳಹಂತದ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಆರ್ಡರ್ಲಿಗಳ ಸೇವೆಗೆ ಕತ್ತರಿ:

ಪೊಲೀಸ್ ಮ್ಯಾನ್ಯುಯಲ್ ಪ್ರಕಾರ ನೀಡಲಾಗುತ್ತಿದ್ದ (ಡಿಜಿ-ಐಜಿಪಿ ಹೊರತುಪಡಿಸಿ) ಆರ್ಡರ್ಲಿಗಳ ಸಂಖ್ಯೆಯನ್ನು ಶೇ.50 ಕಡಿತ ಮಾಡಿ, ಆರ್ಡರ್ಲಿ ಭತ್ಯೆ ನೀಡಲಾಗುತ್ತದೆ. ಡಿಜಿ-ಐಜಿಪಿ ದರ್ಜೆಯಿಂದ ಇನ್ಸ್‍ಸ್ಪೆಕ್ಟರ್‍ವರೆಗೆ 2,447 ಅಧಿಕಾರಿಗಳು ಆರ್ಡರ್ಲಿ ಸೇವೆಗೆ ಅರ್ಹತೆ ಪಡೆದಿದ್ದು, ಪೇದೆಗಳ ಬದಲಿಗೆ 373 ಸಹಾಯಕರನ್ನು ನೇಮಕ ಮಾಡಲಾಗಿದೆ. ಉಳಿದಂತೆ 3,320 ಸಹಾಯಕರುಗಳ ವೇತನ ಅನುದಾನ ಬಿಡುಗಡೆ ಮಾಡಿದ್ದು, ಈ ವೇತನದಲ್ಲಿ ಹೊರಗಿನವರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆರ್ಡರ್ಲಿಗಳ ಕೆಲಸವೇನು:

ಅಧಿಕಾರಿಗಳಿಗೆ ಬರುವ ದೂರವಾಣಿ ಕರೆ ಸ್ವೀಕರಿಸುವುದು, ತುರ್ತು ಸಂದೇಶಗಳಿದ್ದಲ್ಲಿ ಅಧಿಕಾರಿಗಳಿಗೆ ತಿಳಿಸುವುದು, ವಿದೇಶ ಪ್ರವಾಸ ಕೈಗೊಂಡಾಗ ಸಹಾಯಕ್ಕೆ ಜತೆಗೆ ಹೋಗುವುದು, ಅಧಿಕಾರಿಗಳ ಪತ್ನಿಯರು ಹೇಳುವ ಕೆಲಸ ನಿರ್ವಹಿಸುವುದು, ತರಕಾರಿ, ದಿನಸಿ ತರುವುದು, ಅಧಿಕಾರಿಗಳ ಮಕ್ಕಳನ್ನು ಶಾಲೆಗೆ ಕರೆದೊಯ್ದು, ವಾಪಸ್ ಕರೆ ತರುವುದು ಆರ್ಡರ್ಲಿಗಳ ಕೆಲಸವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin