ಕೊನೆಗೂ ಬಯಲಾಯ್ತು ಬರ್ಮುಡಾ ಟ್ರಯಾಂಗಲ್ ರಹಸ್ಯ..?

ಈ ಸುದ್ದಿಯನ್ನು ಶೇರ್ ಮಾಡಿ

Barumuda-Triangle

ನ್ಯೂಯಾರ್ಕ್, ಅ.22-ನೂರಾರು ನೌಕೆಗಳು ಮತ್ತು ವಿಮಾನಗಳನ್ನು ಆಪೋಶನ ತೆಗೆದುಕೊಂಡು ವಿಜ್ಞಾನಕ್ಕೆ ದೊಡ್ಡ ಸವಾಲಾಗಿ ಪರಿಣಿಮಿಸಿರುವ ಅತ್ಯಂತ ಭಯಾನಕ ಬರ್ಮುಡಾ ಟ್ರಯಾಂಗಲ್‍ನ ಚಿದಂಬರ ರಹಸ್ಯದ ಮೇಲೆ ಬೆಳಕು ಚೆಲ್ಲುವ ಅನ್ವೇಷಣೆಯೊಂದು ನಡೆದಿದೆ.  ಬರ್ಮುಡಾ ತ್ರಿಕೋನದ ಮೇಲೆ ಆವರಿಸಿರುವ ಅಪರಿಚಿತ ಕಾರ್ಮೋಡಗಳಿಂದಲೇ ಸಾಗರದ ಈ ಮೃತ್ಯುಕೂಪದಲ್ಲಿ ಅನೇಕ ಹಡಗುಗಳು ಮತ್ತು ವಿಮಾನಗಳು ನಿಗೂಢ ನಾಪತ್ತೆಯಾಗಿ ನೂರಾರು ಮಂದಿ ಕಣ್ಮರೆಯಾಗಿದ್ದಾರೆ ಎಂಬ ಹೊಸ ಸಿದ್ದಾಂತದ ಸಂಗತಿಯೊಂದು ಜಗತ್ತಿನ ಗಮನಸೆಳೆದಿದೆ.ಬೃಹತ್ ಹಡಗುಗಳು ಮತ್ತು ವಿಮಾನಗಳನ್ನು ಸಮುದ್ರಾದಳಕ್ಕೆ ಸೆಳೆದೊಯ್ಯುವ ಅಗಾಧ ಗುರುತ್ವಾಕರ್ಷಣೆಯ ಸಾಮಥ್ರ್ಯವನ್ನು ಈ ಕಾರ್ಮೋಡಗಳು ಹೊಂದಿವೆ ಎಂಬುದು ಈ ಸಿದ್ಧಾಂತದ ವಾದವಾಗಿದೆ. ಗಂಟೆಗೆ 170 ಮೈಲಿ ವೇಗದ ಏರ್‍ಬಾರ್‍ಗಳ ತೀವ್ರ ಪ್ರಬಲತೆಗೆ ಈ ಮೋಡಗಳನ್ನು ಹೋಲಿಕೆ ಮಾಡಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

ಭೂಗರ್ಭ ಮತ್ತು ಸಾಗರಗರ್ಭ ಶಾಸ್ತ್ರಜ್ಞರ ತಂಡವೊಂದು ವಿಲಕ್ಷಣ ರೀತಿಯ ಷಟ್ಕೋನಾಕೃತಿಯ ಮೋಡಗಳನ್ನು ಪತ್ತೆ ಮಾಡಿದ್ದು ಸಾಗರದ ಮೇಲ್ಮೈ ಮೇಲೆ ಇವು ಮೃತ್ಯಕೂಪಗಳಂತೆ ತೇಲಾಡುತ್ತಿರುತ್ತವೆ ಎಂದು ವಿವರಿಸಿದ್ದಾರೆ.  ಈ ಮೋಡಗಳು ಸಮುದ್ರದ ಮೇಲ್ಮೈ ಮೇಲೆ 20 ರಿಂದ 50 ಮೈಲಿಗಳವರೆಗೆ ಹಠಾತ್ತನೆ ವಿಸ್ತರಿಸಿ ಸಾಗರದಲ್ಲಿ ಆಳವಾದ ಕಂದಕವನ್ನು ನಿರ್ಮಿಸಿ ನೌಕೆಗಳು ಮತ್ತು ವಿಮಾನಗಳನ್ನು ಆಪೊಶನ ತೆಗೆದುಕೊಳ್ಳುತ್ತವೆ ಎಂಬುದನ್ನು ವಿವರಿಸುವ ಉಪಗ್ರಹ ಪ್ರತಿಬಿಂಬ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಉಪಗ್ರಹ ಚಿತ್ರವು ನಿಜಕ್ಕೂ ಅತ್ಯಂತ ವಿಲಕ್ಷಣ ಮತ್ತು ಭಯಾನಕವಾಗಿದೆ.. ಮೋಡಗಳು ಷಟ್ಕೋನಾಕೃತಿಯಲ್ಲಿ ಸಾಗರದ ಮಧ್ಯೆ ಬಾಯ್ತೆರೆದುಕೊಂಡು ಬಲಿಗಾಗಿ ಕಾಯುತ್ತವೆ ಎಂದು ಭೂಗರ್ಭ ಶಾಸ್ತ್ರಜ್ಞ ರ್ಯಾಂಡಿ ಸೆರ್ವೆನಿ ಹೇಳಿದ್ದಾರೆ.

ಸಾಗರದಲ್ಲಿನ ಈ ರೀತಿಯ ಷಟ್ಕೋನಾಕೃತಿ ಮೋಡಗಳು ವಾಯು ಬಾಂಬ್‍ಗಳಿಗೆ ಕಾರಣವಾಗುತ್ತವೆ.. ಇದರಿಂದ ಸೂಕ್ಷ್ಮ ಸ್ಫೋಟಗಳು ಸಂಭವಿಸುತ್ತವೆ. ಗಾಳಿಯಲ್ಲಿ ಇದರ ಸ್ಫೋಟದ ತೀವ್ರತೆ ಎಷ್ಟು ಪ್ರಬಲವಾಗಿರುತ್ತದೆ ಎಂದರೆ ಗಂಟೆಗೆ 170 ಮೈಲಿ ವೇಗದ ಚಂಡಮಾರುತದಂತೆ ಆ ಪ್ರದೇಶದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸುತ್ತವೆ. ಇದರಿಂದ ನೌಕೆಗಳು ಮತ್ತು ವಿಮಾನಗಳು ತರಗೆಲೆಗಳಂತೆ ಸಾಗರದ ಪಾಲಾಗುತ್ತವೆ ಎಂಬ ಸಂಗತಿಯನ್ನು ವಿಜ್ಞಾನಿಗಳು ವಿವರಿಸಿದ್ದಾರೆ.  ಮಿಯಾಮಿ, ಪ್ಯುಟೋರಿಕೊ ಮತ್ತು ಬರ್ಮುಡಾ ದ್ವೀಪದ ಮಧ್ಯದಲ್ಲಿ ತ್ರಿಕೋನಾಕೃತಿಯಲ್ಲಿರುವ ಬರ್ಮುಡಾ ಟ್ರಯಾಂಗಲ್‍ನ ರಹಸ್ಯವು ಶತಶತಮಾನಗಳಿಂದಲೂ ಇಡೀ ವಿಶ್ವಕ್ಕೆ ಸವಾಲಾಗಿದೆ. ಇಲ್ಲಿ ಕಣ್ಮರೆಯಾದ ಹಡಗುಗಳು ಮತ್ತು ನೌಕೆಗಳಿಗೆ ಲೆಕ್ಕವೇ ಇಲ್ಲ..!

► Follow us on –  Facebook / Twitter  / Google+

Facebook Comments

Sri Raghav

Admin