ಕೊರಟಗೆರೆಯಲ್ಲಿ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಕೊರಟಗೆರೆ, ಮಾ.11- ಕೊರಟಗೆರೆ ಕ್ಷೇತ್ರದಲ್ಲಿಂದು ಕಾಂಗ್ರೆಸ್ ಕಲರವ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಂಗ್ರೆಸ್‍ನ ಬೃಹತ್ ಸಮಾವೇಶ, ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ರಣಕಹಳೆ ಮೊಳಗಿಸಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಇಂದು ನಡೆದ ಜನಾಶೀರ್ವಾದ ಯಾತ್ರೆ, ಬೃಹತ್ ಕಾಂಗ್ರೆಸ್ ಸಮಾವೇಶಕ್ಕೆ ಭಾರೀ ಸಂಖ್ಯೆಯಲ್ಲಿ ಜನಸಾಗರ ಹರಿದು ಬಂದಿತ್ತು.

ಕಳೆದ ಬಾರಿಯ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದ ಉಸ್ತುವಾರಿ ನೋಡಿಕೊಳ್ಳುವ ಭರದಲ್ಲಿ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಮಾಡದ ಪರಮೇಶ್ವರ್‍ಗೆ ಕಳೆದ ಚುನಾವಣೆಯಲ್ಲಿ ಸೋಲುಂಟಾಗಿತ್ತು. ಇದನ್ನು ಮನಗಂಡ ಅವರು ಈ ಬಾರಿ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಪ್ರತಿಯೊಂದು ಸಮುದಾಯದ ಓಲೈಕೆ ಮಾಡಿ, ಪ್ರತಿ ಮುಖಂಡರ, ಸಾಮಾನ್ಯ ಜನರ ಪ್ರತಿನಿಧಿಯಾಗಿ ಕ್ಷೇತ್ರದೆಲ್ಲೆಡೆ ಓಡಾಡುತ್ತಿದ್ದು, ಕಳೆದ ಬಾರಿಗಿಂತ ಪರಂ ಅವರ ಅಲೆ ಈ ಬಾರಿ ಹೆಚ್ಚಾಗಿದೆ.

ಕೊರಟಗೆರೆಯಲ್ಲಿ ಗ್ರಾಮ ವಾಸ್ತವ್ಯ, ಹಲವಾರು ಕಾರ್ಯಕ್ರಮಗಳನ್ನು ನೆರವೇರಿಸಿರುವ ಅವರು, ಇಂದು ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ ಹಾಗೂ ಜನಾಶೀರ್ವಾದ ಯಾತ್ರೆ, ಬೃಹತ್ ಸಮಾವೇಶವನ್ನು ತಾವೇ ಖುದ್ದು ನಿಂತು ಅದ್ಧೂರಿ ವ್ಯವಸ್ಥೆ ಮಾಡಿದ್ದು ಯಶಸ್ವಿಯೂ ಆಯಿತು. ಸಿಎಂ ಆದ ಮೇಲೆ ಸಿದ್ದರಾಮಯ್ಯನವರು ಮೊದಲ ಬಾರಿಗೆ ಕೊರಟಗೆರೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದರಿಂದ ಅವರ ಅದ್ಧೂರಿ ಸ್ವಾಗತ ತಯಾರಿಗಳನ್ನು ಖುದ್ದು ಪರಮೇಶ್ವರ್ ಅವರೇ ಮಾಡಿದ್ದು ವಿಶೇಷವಾಗಿತ್ತು. ಭಾರೀ ಪ್ರಮಾಣದ ಫ್ಲೆಕ್ಸ್‍ಗಳು, ಕಟೌಟ್‍ಗಳು, ಸ್ವಾಗತದ ಕಮಾನುಗಳು ಕೊರಟಗೆರೆ ಕ್ಷೇತ್ರಾದ್ಯಂತ ರಾರಾಜಿಸುತ್ತಿದ್ದವು.

ಯಾರೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಡಬಾರದು. ಈ ಬಾರಿ ಕೊರಟಗೆರೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಬೇಕು ಎಂಬ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದಲೇ ಪರಮೇಶ್ವರ್ ಅವರು ಹೆಚ್ಚಿನ ತಯಾರಿ ಮಾಡಿದ್ದಾರೆ. ತಮ್ಮ ಬೆಂಬಲಿಗರು, ಕಾರ್ಯಕರ್ತರು ಕೂಡ ಇವರಿಗೆ ಕೈ ಜೋಡಿಸಿದ್ದು, ಇಂದಿನ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಯಾಗಲು ಕಾರಣವಾಯಿತು. ಇಂದು ಬೆಳಗ್ಗೆ ಕೊರಟಗೆರೆಗೆ ಆಗಮಿಸಿದ ಸಿದ್ದರಾಮಯ್ಯನವರು ಮೊದಲು ಇಂದಿರಾ ಕ್ಯಾಂಟಿನ್ ಉದ್ಘಾಟನೆ ನೆರವೇರಿಸಿದರು. ನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇವರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಚಿವ ಟಿ.ಬಿ.ಜಯಚಂದ್ರ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸೇರಿದಂತೆ ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಒಟ್ಟಾರೆ ಕೊರಟಗೆರೆ ಕ್ಷೇತ್ರದ ಜನರಲ್ಲಿ ಪರಮೇಶ್ವರ್ ಬಗ್ಗೆ ಒಂದು ಹೊಸ ವಿಶ್ವಾಸ ಮೂಡಿದಂತಹ ಕಾರ್ಯಕ್ರಮ ಇದಾಗಿತ್ತು. ಎಲ್ಲ ಮುಖಂಡರ ನೇತೃತ್ವದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲೂ ಕೂಡ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಪರಮೇಶ್ವರ್ ಅವರು ಪಕ್ಷದ ಶಕ್ತಿ ಪ್ರದರ್ಶನದ ಜತೆಗೆ ಕೊರಟಗೆರೆಯಲ್ಲಿನ ಈ ಕಾರ್ಯಕ್ರಮದ ಮೂಲಕ ತಮ್ಮ ವೈಯಕ್ತಿಕ ಶಕ್ತಿ ಪ್ರದರ್ಶನ ಮಾಡಿದರು.

Facebook Comments

Sri Raghav

Admin