ಕೊಲೆ ಆರೋಪಿ ರಾಜಕಾರಣಿಗೆ ಆಶ್ರಯ ನೀಡಿದ ವೈದ್ಯರಿಗೆ 1.40 ಕೋಟಿ ರೂ. ದಂಡ..!
ನವದೆಹಲಿ, ಏ.26-ಕೊಲೆ ಆರೋಪಿ ಎಂಬುದು ತಿಳಿದಿದ್ದರೂ ರಾಜಕಾರಣಿಗೆ ವೈದ್ಯಕೀಯ ಆಶ್ರಯ ನೀಡಿದ್ದ ಗುರುಗಾಂವ್ ಆಸ್ಪತ್ರೆಯೊಂದರ ಇಬ್ಬರು ವೈದ್ಯರಿಗೆ ಸುಪ್ರೀಂಕೋರ್ಟ್ 1.40 ಕೋಟಿ ರೂ. ದಂಡ ವಿಧಿಸಿದೆ. ಈ ಮೂಲಕ ಅಪರಾಧ ಕೃತ್ಯಗಳ ಪ್ರಭಾವಿಗಳು ಆಸ್ಪತ್ರೆಗೆ ದಾಖಲಾಗಿ ಆರಾಮವಾಗಿರುವ ವ್ಯವಸ್ಥೆಗೆ ಕಡಿವಾಣ ಬಿದ್ದಿದೆ. ಆಲ್ಲದೇ ಆಶ್ರಯ ನೀಡುವ ವೈದ್ಯರಿಗೂ ಸ್ಪಷ್ಟ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಹತ್ಯೆ ಆರೋಪ ಹೊತ್ತಿರುವ ಹರ್ಯಾಣದ ವಿರೋಧಪಕ್ಷ ಐಎನ್ಎಲ್ಡಿ ಮಾಜಿ ಶಾಸಕ ಬಲ್ಬೀರ್ ಸಿಂಗ್ ಜಾಮೀನುನ್ನು 2013ರ ಅ.24ರಂದು ತಿರಸ್ಕರಿಸಿದ್ದ ಸುಪ್ರೀಂಕೋರ್ಟ್ ಶರಣಾಗುವಂತೆ ಸೂಚಿಸಿತ್ತು. ಆದರೆ ಸಿಂಗ್ ಹೃದ್ರೋಗದ ನೆಪವೊಡ್ಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆ ಆತನನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯವು ಈ ಕುರಿತು ವಿವರಣೆ ನೀಡುವಂತೆ ಆದೇಶಿಸಿತ್ತು. 527 ದಿನಗಳ ಬಳಿಕ ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿತ್ತು.
ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡಲಾಗಿತ್ತು. ಸಿಂಗ್ಗೆ ಯಾವುದೇ ಗಂಭೀರ ರೋಗ ಇರಲಿಲ್ಲ ಹಾಗೂ ಬಂಧನವನ್ನು ತಪ್ಪಿಸಿಕೊಳ್ಳುವ ಏಕಮಾತ್ರ ಉದ್ದೇಶದಿಂದ ಆತ ಆಸ್ಪತ್ರೆಗೆ ದಾಖಲಾಗಿದ್ದ ಎಂದು ಸಿಬಿಐ ತನ್ನ ತನಿಖಾ ವರದಿಯಲ್ಲಿ ತಿಳಿಸಿತ್ತು. ಕಳೆದ ವರ್ಷ ಡಿಸೆಂಬರ್ನಲ್ಲಿ ಖಾಸಗಿ ಆಸ್ಪತ್ರೆಯೊಂದರ ಹಿರಿಯ ವೈದ್ಯರಾದ ಡಾ. ಮನೀಷ್ ಪ್ರಭಾಕರ್ ಮತ್ತು ಡಾ. ಕೆ.ಎಸ್.ಸಚ್ದೇವ್ ಅವರನ್ನು ದೋಷಿಗಳೆಂದು ಕೋರ್ಟ್ ನಿರ್ಣಯಿಸಿತ್ತು. ಅವರಿಗೆ ತಲಾ 70 ಲಕ್ಷ ರೂ. ದಂಡವನ್ನು(ಇಬ್ಬರಿಗೆ ಸೇರಿ 1.40 ಕೋಟಿ ರೂ. ಜುಲ್ಮಾನೆ) ಈಗ ವಿಧಿಸಲಾಗಿದೆ.
ಹರ್ಯಾಣದ ರೋಹ್ಟಕ್ ಆಹಾರಧಾನ್ಯ ಮಾರುಕಟ್ಟೆಯಲ್ಲಿ 2013ರ ಮೇ ತಿಂಗಳಿನಲ್ಲಿ ಸಿಂಗ್ ಕ್ಷುಲ್ಲಕ ಕಾರಣಕ್ಕಾಗಿ ಗುಂಡು ಹಾರಿಸಿ ಒಬ್ಬ ವ್ಯಕ್ತಿಯನ್ನು ಕೊಂದು ಇತರ ಎಂಟು ಮಂದಿಯನ್ನು ಗಾಯಗೊಳಿಸಿದ್ದರು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊದಲು ಆತನಿಗೆ ಜಾಮೀನು ನೀಡಿತ್ತು. ಆದರೆ ಕೊಲೆಯಾದ ವ್ಯಕ್ತಿಯ ಕುಟುಂಬದವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ನಂತರ ಸರ್ವೋನ್ನತ ನ್ಯಾಯಾಲಯ ಸಿಂಗ್ ಜಾಮೀನನ್ನು ರದ್ದುಗೊಳಿಸಿತ್ತು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS