ಕೊಳವೆಬಾವಿ ದುರಂತಗಳಿಗೆ ಕಡಿವಾಣ ಹಾಕಲು ಕಾಯ್ದೆ ತಿದ್ದುಪಡಿ, 2 ಲಕ್ಷ ದಂಡ, 1 ವರ್ಷ ಜೈಲು

ಈ ಸುದ್ದಿಯನ್ನು ಶೇರ್ ಮಾಡಿ

Borewell-01

ಬೆಂಗಳೂರು,ಏ.25-ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಳವೆಬಾವಿ ದುರಂತಗಳಿಗೆ ಶಾಶ್ವತ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲು ತೀರ್ಮಾನಿಸಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಮುಂದುವರೆದ ಬಜೆಟ್ ಅಧಿವೇಶನದಲ್ಲಿ 2014ರ ಕಾಯ್ದೆಗೆ ತಿದ್ದುಪಡಿ ಮಾಡಿ ಬೋರ್‍ವೆಲ್ ಕೊರೆಸಿದ ನಂತರ ಮುಚ್ಚದೇ ಇರುವ ಮಾಲೀಕರಿಗೆ ಎರಡು ಲಕ್ಷ ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವ ಕಾಯ್ದೆಯನ್ನು ಜಾರಿ ಮಾಡಲಿದೆ.   ಅಲ್ಲದೆ ಇನ್ನು ಮುಂದೆ ಗ್ರಾಮಗಳ ವ್ಯಾಪ್ತಿಯಲ್ಲಿ ಬೋರ್‍ವೆಲ್ ಕೊರೆಸುವ ಮುನ್ನ ಕಡ್ಡಾಯವಾಗಿ ಪ್ರತಿಯೊಬ್ಬರು ಪಂಚಾಯತ್ ಅಭಿವೃದ್ದಿ ಅಧಿಕಾರಿ(ಪಿಡಿಒ) ಅವರಿಂದ ಅನುಮತಿ ಪಡೆಯಬೇಕು.ಇದನ್ನು ಕಡೆಗಣಿಸಿದರೆ ಅವರ ವಿರುದ್ದ ಕಾನೂನು ಕ್ರಮ ಜರುಗಿಸುವ ಅವಕಾಶ ಕಾಯ್ದೆಯಲ್ಲಿರುತ್ತದೆ. 2014ರಲ್ಲಿ ಕೆಲ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿತ್ತಾದರೂ ಇದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.   ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಜಂಜಡವಾಡ ಗ್ರಾಮದಲ್ಲಿ 6 ವರ್ಷದ ಬಾಲಕಿ ಕಾವೇರಿ ಸಾವಿನ ಪ್ರಕರಣದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು , ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹೊಸ ನಿಯಮಾವಳಿಯನ್ನು ಸಿದ್ದಪಡಿಸಲು ಸೂಚಿಸಿದೆ.  ಇನ್ನು ಮುಂದೆ ಜಮೀನು ಮಾಲೀಕರು ಬೋರ್‍ವೆಲ್  ಕೊರೆಸುವ ಮುನ್ನ ಜಿಲ್ಲಾಮಟ್ಟದಲ್ಲಿ ಡಿಸಿ, ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರ್ ಹಾಗೂ ಗ್ರಾಮೀಣ ಭಾಗಗಳಲ್ಲಿ ಪಿಡಿಒಗಳಿಂದ ಅನುಮತಿ ಪತ್ರವನ್ನು ಪಡೆಯಬೇಕು.

ಬೋರ್‍ವೆಲ್ ಕೊರೆಸಿದ ನಂತರ ನೀರು ಬಾರದಿದ್ದರೆ ಕೂಡಲೇ ಅದನ್ನು ಮುಚ್ಚಬೇಕು. ಇಲ್ಲದಿದ್ದರೆ ಜಮೀನು ಮಾಲೀಕರಿಗೆ ಎರಡು ಲಕ್ಷ ರೂ. ದಂಡ, ಒಂದು ವರ್ಷ ಜೈಲು ಶಿಕ್ಷೆ ಜೊತೆಗೆ ಬೋರ್‍ವೆಲ್ ಏಜೆನ್ಸಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು.  ಮುಂದಿನ ದಿನಗಳಲ್ಲಿ ಬೋರ್‍ವೆಲ್ ಏಜೆನ್ಸಿಗಳು ಕಂಡ ಕಂಡ ಕಡೆ ಬೋರ್‍ವೆಲ್ ಕೊರೆಯುವಂತಿಲ್ಲ. ಸಂಬಂಧಪಟ್ಟ ವ್ಯಾಪ್ತಿಯಲ್ಲಿ ಅನುಮತಿ ಪತ್ರದ ನಂತರವೇ ಒಪ್ಪಿಗೆ ಪಡೆದು ಕೊರೆಯಬೇಕು. ಇಲ್ಲದಿದ್ದರೆ ಏಜೆನ್ಸಿಗಳ ವಿರುದ್ಧ ಒಂದು ಲಕ್ಷ ರೂ. ದಂಡ ಹಾಗೂ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಇದರ ಜೊತೆಗೆ ಬೋರ್‍ವೆಲ್‍ನಲ್ಲಿ ನೀರು ಕಂಡುಬಂದರೆ ಒಂದು ತಿಂಗಳೊಳಗೆ ಅದನ್ನು ಉಪಯೋಗಿಸಿಕೊಳ್ಳತಕ್ಕದ್ದು . ಹೆಚ್ಚು ದಿನ ಬಳಕೆ ಮಾಡದೆ ಬಿಡುವಂತಿಲ್ಲ.

ಪಿಡಿಒಗಳೇ ಹೊಣೆಗಾರರು: ಇನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಿಡಿಒಗಳು ಬೋರ್‍ವೆಲ್ ಕೊರೆಸುವ ಮುನ್ನ ಜಮೀನುಗಳಿಗೆ ಭೇಟಿ ನೀಡಿ ನಿರಪೇಕ್ಷಣ ಪತ್ರ ನೀಡಬೇಕು. ಕಚೇರಿಯಲ್ಲಿ ಕುಳಿತು ಮನಬಂದಂತೆ ನೀಡಿದರೆ ಅಮಾನತಿನ ಶಿಕ್ಷೆ ಜೊತೆಗೆ ದಂಡ ಹಾಗೂ ಜೈಲು ಸೇರಬೇಕಾಗುತ್ತದೆ.   ರಾಜ್ಯದಲ್ಲಿ ಇತ್ತೀಚೆಗೆ ಬೋರ್‍ವೆಲ್‍ನಲ್ಲಿ ಬಿದ್ದು ಚಿಕ್ಕಪುಟ್ಟ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚುತ್ತಿರುವ ಕಾರಣ ಸರ್ಕಾರ ಇಂತಹ ಕಠಿಣ ಕ್ರಮ ಜರುಗಿಸಲು ಮುಂದಾಗಿದೆ.   ಕೇವಲ ಪಿಡಿಒ ಮಾತ್ರವಲ್ಲದೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್, ಗ್ರಾಮ ಲೆಕ್ಕಾಧಿಕಾರಿಗಳು, ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರು ಕೂಡ ತಮ್ಮ ತಮ್ಮ ವ್ಯಾಪ್ತಿಗಳಲ್ಲಿ ಕೊಳವೆ ಬಾವಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ತಿಂಗಳಿಗೊಮ್ಮೆ ಹಮ್ಮಿಕೊಳ್ಳಬೇಕು.

ಮೃತ್ಯುಕೂಪದ ಘಟನೆಗಳು : 

+ 2000ದ ಮಾರ್ಚ್ ತಿಂಗಳಿನಲ್ಲಿ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯಲ್ಲಿ 4 ವರ್ಷದ ಕರಿಯ ಸಾವು.
+ 2002ರಲ್ಲಿ ಚಿತ್ರದುರ್ಗದ ಚಳ್ಳಕೆರೆಯ ನಾಯಕನಹಟ್ಟಿಯಲ್ಲಿ ರವಿಕುಮಾರ್ ಮರಣ.
+ 2007 ಏಪ್ರಿಲ್‍ನಲ್ಲಿ ರಾಯಚೂರಿನ ವೀರಾಮಾನ್ವಿಯಲ್ಲಿ ಸಂದೀಪ್ ಸಾವು.
+ 2009 ವಿಜಯಪುರ ತಾಲ್ಲೂಕಿನ ಕಾಂಚನ ಪೂಜಾರಿ ಸಾವು.
+ 2014 ವಿಜಯಪುರದಲ್ಲಿ ಅಕ್ಷತಾ ಮಾಲಿಪಟ್ಟಿ ಬಾವಿಗೆ ಬಿದ್ದು ಕೊನೆಯುಸಿರು.
+ 2014ರ ಆಗಸ್ಟ್‍ನಲ್ಲಿ ಬಾಗಲಕೋಟೆಯಲ್ಲಿ ತಿಮ್ಮನಹಟ್ಟಿ ಮರಣ.
+ 2017 ಏ.24ರಂದು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನಲ್ಲಿ ಕಾವೇರಿ ಕೊನೆಯುಸಿರು.ಹೊಸ ನಿಯಮಗಳು : 
+ ಮುಂದಿನ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ
+ ಕೊರೆಸಿದ ಬೋರ್‍ವೆಲ್‍ಗಳನ್ನು ಕಡ್ಡಾಯವಾಗಿ ಮುಚ್ಚಬೇಕು
+ಬೋರ್‍ವೆಲ್ ಕೊರೆಸುವ ಮುನ್ನ ಪಿಡಿಒಗಳಿಂದ ಅನುಮತಿ ಕಡ್ಡಾಯ
+ ನಿರ್ಲಕ್ಷಿಸಿದರೆ ಎರಡು ಲಕ್ಷ ದಂಡ, ಒಂದು ವರ್ಷ ಜೈಲು ಶಿಕ್ಷೆ
+ ಅನುಮತಿ ನೀಡದೆ ಬೋರ್‍ವೆಲ್ ಕೊರೆದರೆ ಏಜೆನ್ಸಿಗಳಿಗೂ ದಂಡ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin