ಕೊಹ್ಲಿ ಪಡೆಗೆ ನಾಳೆ ಅಗ್ನಿಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Teadm-India--021

ಲಂಡನ್, ಜೂ.10- ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಶ್ರೀಲಂಕಾ ವಿರುದ್ಧ ಹೀನಾಯವಾಗಿ ಸೋಲು ಅನುಭವಿಸಿದ ಹಾಲಿ ಚಾಂಪಿಯನ್ ಭಾರತ ನಾಳೆ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.   ಕೆನಿಂಗ್‍ಟನ್ ಮೈದಾನದಲ್ಲಿ ನಾಳೆ ಮಧ್ಯಾಹ್ನ 3 ಗಂಟೆಗೆ ಅರಂಭವಾಗಲಿರುವ ಪಂದ್ಯದಲ್ಲಿ ಕೊಹ್ಲಿ ಬಳಗ ಹಾಗೂ ಹರಿಣ ತಂಡಗಳು ಮುಖಾಮುಖಿಯಾಗಲಿವೆ.   ಈ ಪಂದ್ಯವು ಕೊಹ್ಲಿ ಬಳಗಕ್ಕೆ ಮಾಡು ಇಲ್ಲವೇ ಮಡಿ ಎಂಬಾಂತಾಗಿದ್ದು , ಪಂದ್ಯ ಗೆದ್ದರೆ ನೇರ ಸೆಮಿಫೈನಲ್ ಪ್ರವೇಶಿಸಲಿದೆ. ಇಲ್ಲವಾದರೆ ಗಂಟುಮೂಟೆ ಕಟ್ಟಿಕೊಂಡು ತವರಿಗೆ ಹಿಂದುರಬೇಕಿದೆ. ಬಿ ಗುಂಪಿನ ಆರಂಭಿಕ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡವನ್ನು 124 ರನ್‍ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿತ್ತು. ಅದೇ ಹುಮ್ಮಸ್ಸಿನಲ್ಲಿದ್ದ ಕೊಹ್ಲಿ ಪಡೆ 2ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರೂ ಕಳಪೆ ಬೌಲಿಂಗ್‍ನಿಂದ ಸೋಲು ಕಾಣಬೇಕಾಗಿತ್ತು.ಈಗಾಗಲೇ ಎರಡು ಪಂದ್ಯದಲ್ಲಿ ಒಂದು ಸೋಲು , ಒಂದು ಗೆಲುವು ಸಾಧಿಸಿರುವ ಭಾರತ ಉತ್ತಮ ರನ್ ರೇಟ್‍ನಲ್ಲಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ತಂಡ ಕೂಡ ಎರಡು ಪಂದ್ಯಗಳಲ್ಲಿ ಒಂದು ಸೋಲು, ಒಂದು ಗೆಲುವು ಸಾಧಿಸಿ ನಾಳೆ ಭಾರತದ ವಿರುದ್ಧ ನಡೆಯಲಿರುವ ಪಂದ್ಯವನ್ನು ಗೆಲ್ಲಲೇ ಬೇಕೆಂಬ ತವಕದಲ್ಲಿದೆ. ಕ್ರಿಕೆಟ್ ಇತಿಹಾಸದಲ್ಲಿ ಹರಿಣ ಪಡೆಗೆ ಚೋಕರ್ಸ್ ತಂಡ ಎಂಬ ಹಣೆಪಟ್ಟಿ ಇದ್ದು , ನಾಳಿನ ಪಂದ್ಯದಲ್ಲಿ ಈ ಸಮಸ್ಯೆ ಹರಿಣಗಳನ್ನು ಕಾಡಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸುಲಭ ಜಯ ಸಾಧಿಸಿದ ಹರಿಣ ಪಡೆ 2ನೇ ಪಂದ್ಯದಲ್ಲಿ ಪಾಕ್ ವಿರುದ್ದ ಡೆಕ್‍ವರ್ತ್ ನಿಯಮದಲ್ಲಿ 19ರನ್‍ಗಳಿಂದ ಪರಾಜಯವಾಯಿತು.

ಸಮಬಲ ಸಾಧಿಸಿರುವ ಉಭಯ ತಂಡಗಳಿಗೆ ನಾಳಿನ ಪಂದ್ಯ ನಿರ್ಣಾಯಕವಾಗಲಿದ್ದು , ಎರಡೂ ತಂಡಗಳಿಗೆ ನಾಳಿನ ಪಂದ್ಯ ತೀವ್ರ ಹಣಾಹಣಿಯಿಂದ ಕೂಡಿದೆ.  ಬ್ಯಾಟಿಂಗ್‍ನಲ್ಲಿ ಪ್ರಬಲ ಸಾಧಿಸಿರುವ ಭಾರತ ಎರಡು ಪಂದ್ಯಗಳಲ್ಲೂ 300 ರ ರನ್ ಪೇರಿಸಿದೆ. ಪಾಕ್ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿ ಕೊಹ್ಲಿ ಪಡೆ ಆ ಪಂದ್ಯದಲ್ಲಿ ಗೆಲುವು ಸಾಧಿಸಿತು. ಆದರೆ ಶ್ರೀಲಂಕಾ ವಿರುದ್ಧ ಕಳಪೆ ಕ್ಷೇತ್ರ ರಕ್ಷಣೆ ಹಾಗೂ ಬೌಲಿಂಗ್ ವಿಭಾಗದ ವೈಫಲ್ಯದಿಂದ ಸೋಲು ಒಪ್ಪಿಕೊಳ್ಳಬೇಕಾಯಿತು.

ಆರಂಭಿಕರಾದ ಶಿಖರ್ ಧವನ್, ರೋಹಿತ್ ಶರ್ಮ ಅದ್ಭುತ ಫಾರ್ಮ್‍ನಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಮಿಂಚಿದರೆ 2ನೇ ಪಂದ್ಯದಲ್ಲಿ ಶೂನ್ಯ ಸಂಪಾದಿಸಿ ಔಟಾಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಲ್‍ರೌಂಡರ್ ಯುವರಾಜ್ ಸಿಂಗ್, ಧೋನಿ, ಕೇದರ್ ಜಾದವ್, ಹಾರ್ದಿಕ್ ಪಾಂಡ್ಯ ಯಾವುದೇ ಕ್ಷಣದಲ್ಲಿ ಸ್ಪೋಟಕ ಆಟವಾಡಿ ತಂಡಕ್ಕೆ ನೆರವಾಗಲಿದ್ದಾರೆ.   ಆದರೆ ಬೌಲಿಂಗ್ ವಿಭಾಗದಲ್ಲೀ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಸ್ಪಿನ್ ಮಾಂತ್ರಿಕ ಅಶ್ವಿನ್ ಕಣಕ್ಕಿಳಿದರೆ ಭಾರತಕ್ಕೆ ಲಾಭವಾಗಲಿದೆ.  ವೇಗದ ಬೌಲರ್‍ಗಳಾದ ಉಮೇಶ್ ಯಾದವ್, ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡಿದರೆ ಭಾರತ ತಂಡಕ್ಕೆ ನೆರವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin