ಕೋಟಿ ಕೋಟಿ ನುಂಗಿ ಬೆಚ್ಚಗೆ ಮಲಗಿದ್ದ ಭ್ರಷ್ಟರಿಗೆ ಬೆಳ್ಳಂಬೆಳಿಗ್ಗೆ ಎಸಿಬಿ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ACB-Attack

ಬೆಂಗಳೂರು, ಮೇ 10-ಕೋಟಿ ಕೋಟಿ ಹಣ ಲೂಟಿ ಮಾಡಿ ಬೆಚ್ಚಗೆ ಹೊದ್ದು ಮಲಗಿದ್ದ ನಾಲ್ವರು ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲು ಬಡಿದಿರುವ ಭ್ರಷ್ಟಾಚಾರ ನಿಗ್ರಹ(ಎಸಿಬಿ)ದಳದ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆ ಹಚ್ಚಿದ್ದಾರೆ.  ಬಿಬಿಎಂಪಿ ಪೂರ್ವವಲಯದ ಜಂಟಿ ಆಯುಕ್ತ ಡಾ.ಯತೀಶ್‍ಕುಮಾರ್, ರಾಮನಗರ ತಹಶೀಲ್ದಾರ್ ಎನ್.ರಘುಮೂರ್ತಿ, ಕೆಪಿಟಿಸಿಎಲ್ ನಿರ್ದೇಶಕ ಎಚ್.ನಾಗೇಶ್ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಸೂಪರಿಂಡೆಂಟ್ ರಾಮಕೃಷ್ಣಾರೆಡ್ಡಿ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು.ನಾಗರಬಾವಿಯಲ್ಲಿರುವ ಬಿಬಿಎಂಪಿ ಜಂಟಿ ಆಯುಕ್ತ ಡಾ.ಯತೀಶ್‍ಕುಮಾರ್, ತಹಶೀಲ್ದಾರ್ ಎನ್.ರಘುಮೂರ್ತಿ ಅವರ ನಿವಾಸಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಎಸಿಬಿ ಪೊಲೀಸರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.  2011ರಲ್ಲಿ ಮೈಸೂರಿನ ಮಾದಹಳ್ಳಿಯಲ್ಲಿ ಶಿರಸ್ತೇದಾರರಾಗಿದ್ದ ಸಂದರ್ಭದಲ್ಲಿ ರಘುಮೂರ್ತಿ ವ್ಯಕ್ತಿಯೊಬ್ಬರಿಗೆ ಖಾತೆ ಮಾಡಿಕೊಡಲು 5 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಸೆಷನ್ ನ್ಯಾಯಾಲಯ ಅವರಿಗೆ ನಾಲ್ಕು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು.

ಎನ್.ರಘುಮೂರ್ತಿ ಜೈಲಿನಲ್ಲಿದ್ದರೂ ಅವರ ವಿರುದ್ಧ ಸಾರ್ವಜನಿಕರು ನೀಡಿದ್ದ 20ಕ್ಕೂ ಹೆಚ್ಚು ದೂರುಗಳನ್ನಾಧರಿಸಿ ಕಾರ್ಯಾಚರಣೆಗಿಳಿದ ಎಸಿಬಿ ಪೊಲೀಸರು ನಾಗರಬಾವಿಯ ವಿನಾಯಕ ಬಡಾವಣೆಯಲ್ಲಿರುವ ಅವರ ನಿವಾಸ ಹಾಗೂ ತರೀಕೆರೆ ತಾಲೂಕಿನ ಗಡಿಹಳ್ಳಿಯಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.   ಸಿಎಂ ಆಪ್ತ ವಲಯದಲ್ಲಿ ಪ್ರಭಾವಿ ಅಧಿಕಾರಿ ಎಂದೇ ಬಿಂಬಿಸಿಕೊಂಡಿರುವ ಬಿಬಿಎಂಪಿ ಜಂಟಿ ಆಯುಕ್ತ ಡಾ.ಕೆ.ಸಿ.ಯತೀಶ್ ಕುಮಾರ್ ಅವರಿಗೂ ಬಿಸಿ ಮುಟ್ಟಿಸಿರುವ ಪೊಲೀಸರು, ನಾವು ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಅದೇ ರೀತಿ ಬ್ಯಾಟರಾಯನಪುರದಲ್ಲಿರುವ ತಾಂತ್ರಿಕ ಶಿಕ್ಷಣ ಇಲಾಖೆ ನಿರೀಕ್ಷಕ ರಾಮಕೃಷ್ಣಾರೆಡ್ಡಿ ಹಾಗೂ ಕಾವೇರಿ ಭವನದ ಕೆಪಿಟಿಸಿಎಲ್ ಕಚೇರಿಯಲ್ಲಿ ನಿರ್ದೇಶಕರಾಗಿರುವ ಎಚ್.ನಾಗೇಶ್ ಅವರ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ.

ಈ ನಾಲ್ವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಬಂದ ಸಾರ್ವಜನಿಕರ 20ಕ್ಕೂ ಹೆಚ್ಚು ದೂರುಗಳನ್ನ್ನಾಧರಿಸಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಎಸಿಬಿ ಎಸ್ಪಿ ಗಿರೀಶ್ ತಿಳಿಸಿದ್ದಾರೆ.
ಭ್ರಷ್ಟ ಅಧಿಕಾರಿಗಳಿಗೆ ಸಂಬಂಧಿಸಿದ ಇತರ ಸ್ಥಳಗಳಲ್ಲೂ ದಾಳಿ ನಡೆಸಲಾಗಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗಿರೀಶ್ ವಿವರಣೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin