ಕೋಟ್ಪಾ ಕಾಯ್ದೆ : ಅನಿರೀಕ್ಷಿತ ದಾಳಿ ನಡೆಸಿ 30 ಪ್ರಕರಣ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

TUMAKURU

ತುಮಕೂರು, ಅ.4- ಕೋಟ್ಪಾ ಕಾಯ್ದೆಯ ತಾಲೂಕು ಮಟ್ಟದ ಜಾರಿ ಸಮಿತಿಯು ನಗರದ ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಿರೀಕ್ಷಿತ ದಾಳಿ ನಡೆಸಿ ತಂಬಾಕು ನಿಯಂತ್ರಣ ಕಾನೂನು ಉಲ್ಲಂಘನೆ ಮಾಡಿದವರಿಂದ 5740 ರೂ.ಗಳ ದಂಡ ವಸೂಲಿ ಮಾಡಿತು.ಬಸ್‍ನಿಲ್ದಾಣ ಹಾಗೂ ಅಶೋಕ ರಸ್ತೆಯಲ್ಲಿದ್ದ ಕಾಂಡಿಮೆಂಟ್ಸ್, ಚಿಲ್ಲರೆ ವ್ಯಾಪಾರಿಗಳು, ಬೇಕರಿ ಹಾಗೂ ಬಾರ್‍ಗಳಿಗೆ ದಿಢೀರ್ ದಾಳಿ ಮಾಡಿ ಒಟ್ಟು 30 ಪ್ರಕರಣಗಳನ್ನು ದಾಖಲಿಸಿಕೊಂಡು ದಂಡ ವಸೂಲಿ ಮಾಡಲಾಯಿತು.

 

ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುವ ವರ್ತಕರು ತಮ್ಮ ಅಂಗಡಿಗಳಲ್ಲಿ ಧೂಮಪಾನ ನಿಷೇಧಿತ ಪ್ರದೇಶ ಧೂಮಪಾನ ಮಾಡುವುದು ಅಪರಾಧ ಎಂಬ ಎಚ್ಚರಿಕೆ ನಾಮಫಲಕ ಅಳವಡಿಸದೆ ಇರುವ ಶಾಲೆಯಿಂದ ನೂರು ಗಜಗಳ ಅಂತರದೊಳಗಿನ ಪ್ರದೇಶದಲ್ಲಿ ಬೀಡಿ ಸಿಗರೇಟ್, ಗುಟಕಾ ಮತ್ತಿತರ ತಂಬಾಕುಯುಕ್ತ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ತಲಾ 200 ರೂ. ದಂಡ ಹಾಗೂ ಈ ಎರಡೂ ನಿಯಮಗಳನ್ನು ಉಲ್ಲಂಘಿಸಿದವರಿಂದ 500 ರೂ. ದಂಡ ವಸೂಲಿ ಮಾಡಲಾಯಿತಲ್ಲದೆ ಇನ್ನು ಮುಂದೆ ನಾಮಫಲಕಗಳನ್ನು ಪ್ರದರ್ಶಿಸಲು ಎಚ್ಚರಿಕೆ ನೀಡಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ತುಮಕೂರು ತಾಲೂಕು ಆರೋಗ್ಯಾಧಿಕಾರಿ ಶರತ್‍ಚಂದ್ರ ತಾಲೂಕು ಮಟ್ಟದಲ್ಲಿ ಇದೇ ಮೊದಲ ಹಂತದ ದಾಳಿಯಾಗಿರುವುದರಿಂದ ಮಾನವೀಯ ದೃಷ್ಟಿಯಿಂದ ನಿಯಮ ಉಲ್ಲಂಘಿಸಿದವರಿಗೆ ಕಡಿಮೆ ಪ್ರಮಾಣದ ದಂಡ ವಿಧಿಸಲಾಗುತ್ತದೆ. ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹಿರಾತು, ಉತ್ತೇಜನ ನೀಡುವವರಿಗೆ 1000ರೂ.ಗಳ ದಂಡ ವಿಧಿಸಲಾಗುವುದು. ಕೋಟ್ಪಾ ಕಾಯ್ದೆಯಡಿ ಸಾರ್ವಜನಿಕ ಸ್ಥಳಗಳಲ್ಲಿರುವ ವರ್ತಕರು ಬೆಂಕಿಪೊಟ್ಟಣ, ಲೈಟರ್, ಅಶ್‍ಟ್ರಿ ಮತ್ತಿತರ ಧುಮಪಾನಕ್ಕೆ ಉತ್ತೇಜಿಸುವ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕ್ಯಾನ್ಸರ್ ರೋಗಿಗಳ ಹೆಚ್ಚಳ: ಜಿಲ್ಲೆಯಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ತಂಬಾಕು ಉತ್ಪನ್ನಗಳನ್ನು ಬಳಕೆಯಿಂದಲೂ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದ್ದು, ಜನರು ಆದಷ್ಟು ಬೀಡಿ, ಸಿಗರೇಟ್, ಗುಟಕಾ ಮತ್ತಿತರ ತಂಬಾಕು ಉತ್ಪನ್ನಗಳಿಂದ ದೂರವಿರಬೇಕೆಂದು ಮನವಿ ಮಾಡಿದರು. ಶಿಕ್ಷಣ ಸಂಯೋಜಕ ಸಿ.ಜೆ. ಕೇಶವಮೂರ್ತಿ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಹರೀಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್. ಜಯಣ್ಣ, ತಂಬಾಕು ನಿಯಂತ್ರಣ ಘಟಕದ ಸಮಾಲೋಜಕರಾದ ರುಕ್ಷಿಣಿ, ಪುಂಡಲೀಕ್ ಲಕಾಟಿ, ರವಿಪ್ರಕಾಶ್, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಕ ನಾಗೇಶ್, ಮುಖ್ಯ ಪೇದೆ ರಾಜಣ್ಣ, ಪೊಲೀಸ್ ಪೇದೆ ಪ್ರಕಾಶ್, ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin