ಕೋಟ್ಲಾದಲ್ಲೂ ‘ವಿರಾಟ್’ ವೈಭವ ನಿರೀಕ್ಷೆ : ಸರಣಿ ಮುನ್ನಡೆಯತ್ತ ಕೂಲ್ ಕ್ಯಾಪ್ಟನ್ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

Vira-01
ನವದೆಹಲಿ, ಅ. 19- ಸತತ ಗೆಲುವಿನಿಂದ ಮುನ್ನುಗ್ಗುತ್ತಿರುವ ಟೀಂ ಇಂಡಿಯಾಗೆ ಎರಡನೆ ಏಕದಿನ ಪಂದ್ಯದಲ್ಲಿ ಲಗಾಮು ಹಾಕಲು ಕಿವೀಸ್ ರಣ ತಂತ್ರ ಹೆಣೆದಿದ್ದಾರೆ. ತವರಿನ ಪಿಚ್‍ನಲ್ಲಿ ಬ್ಯಾಟಿಂಗ್ ವೈಭವ ಮೆರೆಯಲು ಸ್ಫೋಟಕ ಆಟಗಾರ ವಿರಾಟ್ ಕೊಹ್ಲಿ ಕಾತರದಿಂದಿದ್ದಾರೆ.
ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ನಂತರ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೂಡ ತಮ್ಮ ಬ್ಯಾಟಿಂಗ್ ವೈಭವ ಮೆರೆದಿರುವ ವಿರಾಟ್ ಕೊಹ್ಲಿ ನಾಳೆ ತನ್ನ ತವರೂರಿನ ಪಿರೋಜ್ ಷಾ ಕೋಟ್ಲಾದಲ್ಲಿ ಮಿಂಚುವ ಮೂಲಕ ಟೀಂ ಇಂಡಿಯಾಕ್ಕೆ ಮುನ್ನಡೆ ದೊರಕಿಸಿಕೊಡಲು ಕಾತುರರಾಗಿದ್ದಾರೆ.

ಭವಿಷ್ಯ ತಂಡ ರೂಪಿಸಲು ಧೋನಿ ಸಜ್ಜು:
ಮುಂಬರುವ ವಿಶ್ವಕಪ್‍ನ ವೇಳೆಗೆ ಯುವ ತಂಡವನ್ನು ಸಜ್ಜುಗೊಳಿಸಲು ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಕೂಲ್‍ಕ್ಯಾಪ್ಟನ್ ಧೋನಿ, ಕೇದಾರ್ ಜಾಧವ್, ಅಕ್ಷರ್‍ಪಟೇಲ್, ಮನೀಷ್‍ಪಾಂಡೆ ಯಂತಹ ಯುವ ಪಡೆಗೇ ನಾಳಿನ ಪಂದ್ಯದಲ್ಲೂ ಹೆಚ್ಚಿನ ಒತ್ತು ನೀಡಲು ಚಿಂತನೆ ನಡೆಸಿದ್ದಾರೆ.

ಜಯದತ್ತ ಮರಳುವರೇ ಬ್ಲಾಕ್ ಕ್ಯಾಪ್ಸ್:
ಮೂರು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಕೇನ್ ವಿಲಿಯಮ್ಸ್‍ರ ಸಾರಥ್ಯದ ನ್ಯೂಜಿಲೆಂಡ್, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದರೂ ಕೂಡ ದೆಹಲಿಯಲ್ಲಿ ಜಯದತ್ತ ಮರಳಲು ಕಸರತ್ತು ನಡೆಸಿದೆ.ತಂಡದಲ್ಲಿರುವ ಹಿರಿಯ ಆಟಗಾರರಾದ ರಾಸ್‍ಟೇಲರ್, ಮಾರ್ಟಿಲ್ ಗುಪ್ಟಿಲ್‍ರ ಕಳಪೆ ಫಾರ್ಮ್ ವಿಲಿಯಮ್ಸ್‍ಗೆ ತಲೆನೋವಾಗಿದ್ದರೂ ಕೂಡ ಕಳೆದ ಪಂದ್ಯದಲ್ಲಿ ಮಿಂಚಿದ್ದ ಟೀಮ್ ಸೌಥಿ ಹಾಗೂ ಟಾಮ್ ಲಾಥಮ್‍ರ ಜೊತೆಗೆ ಕೋರಿ ಆಂಡ್ರಸನ್, ಲೋಕ್ ರುಚಿ ಮಿಂಚಿದರೆ ನ್ಯೂಜಿಲೆಂಡ್ ಬ್ಯಾಟಿಂಗ್ ಬಲ ಹೆಚ್ಚಲಿದೆ.
ರೈನಾ ಔಟ್: ವೈರೆಲ್ ಜ್ವರದಿಂದ ಬಳಲುತ್ತಿರುವ ಸುರೇಶ್‍ರೈನಾರವರು ಧರ್ಮಶಾಲಾದ ಮೊದಲ ಏಕದಿನ ಪಂದ್ಯದಲ್ಲಿ ಆಡದಿದ್ದರೂ ಕೂಡ ಎರಡನೇ ಏಕದಿನ ಪಂದ್ಯದಲ್ಲಿ 11ರ ತಂಡದ ಸ್ಥಾನ ಪಡೆಯಲು ಕಾತುರರಾಗಿದ್ದರೂ ನಾಳೆಯ ಪಂದ್ಯದಿಂದಲೂ ಅವರು ಬಹುತೇಕ ಹೊರಗುಳಿಯಲಿದ್ದಾರೆ.

ಅದೃಷ್ಟದ ಪಿಚ್:

ಫಿರೋಜ್‍ಶಾ ಮೈದಾನವು ಟೀಂ ಇಂಡಿಯಾ ಪಾಲಿಗೆ ಅದೃಷ್ಟ ಪಿಚ್ ಎಂದೇ ಬಿಂಬಿಸಿಕೊಂಡಿದೆ. ಇಲ್ಲಿ ಆಡಿರುವ 12 ಪಂದ್ಯಗಳ ಪೈಕಿ ಭಾರತ ತಂಡವು 7ರಲ್ಲಿ ಜಯ ಗಳಿಸಿದರೆ , 5 ಪಂದ್ಯಗಳಲ್ಲಿ ಸೋಲು ಕಂಡಿದೆ. ಆದರೆ ನ್ಯೂಜಿಲೆಂಡ್ ಈ ಪಿಚ್‍ನಲ್ಲಿ ಆಡಿರುವ 2 ಪಂದ್ಯಗಳಲ್ಲೂ ಕೂಡ ಹೀನಾಯವಾಗಿ ಸೋತಿರುವುದನ್ನು ಗಮನಿಸಿದರೆ ನಾಳೆಯ ಪಂದ್ಯವೂ ಕೂಲ್ ಕ್ಯಾಪ್ಟನ್ ಧೋನಿ ಬಳಗದ ಕಡೆಗೇ ವಾಲುವುದು ಬಹುತೇಕ ಖಚಿತವಾಗಿದೆ.

ರೋಹಿತ್‍ಗೆ 150 ನೆ ಪಂದ್ಯ:
ಕಳೆದ ಪಂದ್ಯದಲ್ಲಿ ಭಾರತ ತಂಡವು 900 ಪಂದ್ಯಗಳನ್ನು ಆಡಿದ ಸಂಭ್ರಮವನ್ನು ಆಚರಿಸಿಕೊಂಡರೆ ಈ ಪಂದ್ಯದಲ್ಲಿ ಆಡುವ ಮೂಲಕ ಏಕದಿನ ಇತಿಹಾಸದಲ್ಲಿ ಎರಡು ದ್ವಿಶತಕ ಗಳಿಸಿರುವ ಏಕಮೇವ ಆಟಗಾರ ಎಂದು ಬಿಂಬಿಸಿಕೊಂಡಿರುವ ರೋಹಿತ್ ಶರ್ಮಾ 150 ಏಕದಿನ ಪಂದ್ಯಗಳನ್ನು ಆಡುವ ಹುಮ್ಮಸ್ಸಿನಲ್ಲಿದ್ದಾರೆ.ಇದುವರೆಗೂ 149 ಏಕದಿನ ಪಂದ್ಯಗಳನ್ನು ಆಡಿರುವ ರೋಹಿತ್‍ಶರ್ಮಾ 41.85ರ ಸರಾಸರಿಯಲ್ಲಿ 10 ಶತಕಗಳನ್ನೊಳಗೊಂಡಂತೆ 5022ರನ್‍ಗಳನ್ನು ಗಳಿಸಿದ್ದು ನಾಳಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ತಂದುಕೊಡುವತ್ತ ಚಿತ್ತ ಹರಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin