ಕೋರಂ ಅಭಾವ : ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಸಭೆಯಲ್ಲಿ ಗದ್ದಲ

ಈ ಸುದ್ದಿಯನ್ನು ಶೇರ್ ಮಾಡಿ

t--narasipura

ತಿ.ನರಸೀಪುರ, ಸೆ.19- ತಾಲ್ಲೂಕು ಕೃಷಿ ಪತ್ತಿನ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ನ  2015-16 ನೇ ಸಾಲಿನ ವಾರ್ಷಿಕ ಮಹಾ ಸಭೆಯಲ್ಲಿ ಕೋರಂ ಅಭಾವ ಹಾಗೂ ಬೈಲಾ ತಯಾರಿಸದ ಕಾರ್ಯದರ್ಶಿ ವಿರುದ್ದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸದಸ್ಯರು ಹಾಗೂ ಆಡಳಿತ ಮಂಡಳಿ ನಡುವೆ ಮಾತಿನ ಚಕಮಕಿ ನಡೆದು ಭಾರಿ ಗದ್ದಲ ಉಂಟಾಗಿ ಅಧ್ಯಕ್ಷರ ಕ್ಷಮೆಯಾಚನೆ ಬಳಿಕ ಸಭೆ ಪ್ರಾರಂಭಗೊಂಡಿತು. ಸಭೆಯಲ್ಲಿ ಸದಸ್ಯ ಬಿ.ಮರಯ್ಯ ಮಾತನಾಡಿ ಸಭೆಗೆ ಕಾರ್ಯದರ್ಶಿ ಎನ್.ಎಸ್.ದೇವರಾಜೇಅರಸುರವರು ಬೈಲಾ(ಅಜೆಂಡಾ)ವನ್ನು ತಯಾರಿಸದೆ ಸಹಕಾರ ಸಂಘದ ನಿಯಮವನ್ನು ಉಲ್ಲಂಘಿಸಿ ಸರ್ವಾಧಿಕಾರಿ ಧೋರಣೆ ತೋರಿದ್ದು, ಅಧ್ಯಕ್ಷರು ಇವರನ್ನು ಅಮಾನತುಪಡಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು.
ರೈತರು ಪರಿಶಿಷ್ಟ ಜಾತಿ, ಪಂಗಡದ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡುವ ಮೂಲಕ ರೈತ ಮಕ್ಕಳ ಏಳ್ಗಿಗೆಗೆ ಶ್ರಮಿಸಬೇಕು ಎಂದರು. ಸದಸ್ಯ ಲಿಂಗಪ್ಪಾಜಿ ಮಾತನಾಡಿ, ಸಂಘದಲ್ಲಿ ಇರುವ ಒಟ್ಟು ಸದಸ್ಯರ ಸಂಖ್ಯೆಯೇ ಕಾರ್ಯದರ್ಶಿಯವರಿಗೆ ಗೊತ್ತಿಲ್ಲ. ಕೇವಲ ಅಂದಾಜು ಸಂಖ್ಯೆ ಹೇಳುತ್ತಿದ್ದಾರೆ, ಎಸ್ಸಿ-ಎಸ್ಟಿ ಪಂಗಡದ ಸದಸ್ಯರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಈ ಜನಾಂಗದವರ ಸದಸ್ಯತ್ವಕ್ಕೆ ತಾರತಮ್ಯ ಎಸಗಲಾಗುತ್ತಿದೆ. ಸರ್ಕಾರ ಈಗಾಗಲೇ ಸಹಕಾರ ಸಂಘಗಳಿಗೆ ಎಸ್ಸಿ ಎಸ್ಟಿ ಸಮುದಾಯದವರ ಸದಸ್ಯತ್ವ ಹೊಂದಲು ಷೇರಿನ ಹಣ ನೀಡುತ್ತಿದ್ದರೂ, ಸದಸ್ಯತ್ವ ನೀಡುವಲ್ಲಿ ವಿಫಲರಾಗಿದ್ದೀರಿ ಎಂದು ಆರೋಪ ಮಾಡಿದರು.
ಕುಪ್ಯ ಜಯರಾಂ ಮಾತನಾಡಿ, ಬ್ಯಾಂಕಿನಲ್ಲಿ ರೈತರಿಗೆ ದೊರಕುವ ಸಾಲ ಸೌಲಭ್ಯಗಳ ಯೋಜನೆಯನ್ನು ಸೂಚನಾ ಫಲಕದಲ್ಲಿ ಹಾಕಿರುವುದಿಲ್ಲ. ಯಾವ ಸಾಲ ಸೌಲಭ್ಯ ರೈತರಿಗೆ ಸಿಗುತ್ತದೆ ಮತ್ತು ಆ ಸಾಲಕ್ಕೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂಬ ಮಾಹಿತಿ ಪಡೆಯಲು ಸಿಬ್ಬಂದಿಯವರನ್ನು ವಿಚಾರಿಸಿದರೆ ವ್ಯವಸ್ಥಾಪಕರು, ಅಧ್ಯಕ್ಷರು ಬರಲಿ ಎಂದು ಅಲೆದಾಡಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬ್ಯಾಂಕಿನಲ್ಲಿ ಎತ್ತುಗಾಡಿ, ಕುರಿ ಮತ್ತು ಇನ್ನಿತರ ಜಾನುವಾರಗಳ ಸಾಕಾಣಿಕೆಗೆ ಸಾಲ ತೆಗೆದುಕೊಂಡರೆ ಒಟ್ಟಿಗೆ 3 ವರ್ಷದ ವಿಮಾ ಕಂತನ್ನು ಮೊಟಕುಗೊಳಿಸುವುದರ ಮೂಲಕ ನಮಗೆ ತೊಂದರೆ ನೀಡಲಾಗುತ್ತಿದೆ ಎಂದು ರೈತರೊಬ್ಬರು ದೂರಿದರು.
ಕಾರ್ಯದರ್ಶಿ ಎನ್.ಎಸ್.ದೇವರಾಜೇಅರಸು ಮಾತನಾಡಿ, ಈ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸಂಬಂಧಪಟ್ಟವರ ಗಮನಕ್ಕೆ ತಂದು 1 ವರ್ಷಕ್ಕೆ ವಿಮಾ ಕಂತನ್ನು ಕಟ್ಟಿಸಿಕೊಳ್ಳಲು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.ಅಧ್ಯಕ್ಷ ವಜ್ರೇಗೌಡ ಮಾತನಾಡಿ, ಸಭೆಯಲ್ಲಿ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗದವರ ತಪ್ಪಿನ ಬಗ್ಗೆ ಸಾಕಷ್ಟು ವಿವರವಾಗಿ ತಿಳಿಸಿದ್ದಾರೆ. ಮುಂದಿನ ಸಭೆಗಳಲ್ಲಿ ಇಂತಹ ತಪ್ಪುಗಳು ಬಾರದಂತೆ ಕ್ರಮವಹಿಸಲಾಗುದೆಂದು ಭರವಸೆ ನೀಡಿದರು. ಉಪಾಧ್ಯಕ್ಷ ಶಿವಮೂರ್ತಿ, ನಿರ್ದೇಶಕರಾದ ಮಲ್ಲೇಗೌಡ, ರುದ್ರಸ್ವಾಮಿ, ಮಹದೇವ, ಎನ್.ಮಹದೇವಸ್ವಾಮಿ, ಕಗ್ಗಲೀಪುರ ರಾಜಣ್ಣ, ಸುಮೀತ್ರಾ, ವರದರಾಜು, ರಾಮಲಿಂಗೂ, ಜಯಲಕ್ಷ್ಮಮ್ಮ, ಮಲ್ಲಣ್ಣ, ಉಮೇಶ್ ಮುಂತಾದವರು ಹಾಜರಿದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin