ಕೋಲಾರ,ಚಿಕ್ಕಬಳ್ಳಾಪುರ, ಹುಬ್ಬಳ್ಳಿಯಲ್ಲಿ ಮಾತ್ರ ಬಂದ್ ಬಿಸಿ,

ಈ ಸುದ್ದಿಯನ್ನು ಶೇರ್ ಮಾಡಿ

Vatal--001245

ಬೆಂಗಳೂರು,ಜೂ.12- ಸಾಲಮನ್ನಾ , ಮಹದಾಯಿ ಹಾಗೂ ಎತ್ತಿನಹೊಳೆ ನೀರಾವರಿ ಯೋಜನೆ  ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕನ್ನಡ  ಸಂಘಟನೆಗಳ ಒಕ್ಕೂಟ ಇಂದು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ, ಕೋಲಾರ, ಹುಬ್ಬಳ್ಳಿ, ಬೆಂಗಳೂರು ಗ್ರಾಮಾಂತರ ಹೊರತುಪಡಿಸಿದರೆ ಉಳಿದ ಕಡೆ ಜನಜೀವನ ಎಂದಿನಂತೆ ಇತ್ತು. ಕೆಲವು ಸಂಘಟನೆಗಳು ಬೆಂಬಲ ನೀಡದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಬಂದ್‍ಗೆ ಪ್ರತಿಕ್ರಿಯೆ ಕಂಡುಬರಲಿಲ್ಲ.  ರಾಜಧಾನಿ ಬೆಂಗಳೂರು, ತುಮಕೂರು, ಚಿತ್ರದುರ್ಗ, ಮೈಸೂರು, ಚಾಮರಾಜನಗರ,   ಮಂಗಳೂರು, ಶಿವಮೊಗ್ಗ , ದಾವಣಗೆರೆ, ಬಳ್ಳಾರಿ ಸೇರಿದಂತೆ ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕದಲ್ಲೂ ಬಂದ್‍ನಿಂದ ಜನರು ದೂರ ಉಳಿದಿದ್ದರು.

 

ಕೆಲವು ಕಡೆ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಕಡೆ ಬಂದ್ ಶಾಂತಿಯುತವಾಗಿತ್ತು. ಎಲ್ಲಿಯೂ ಹಿಂಸಾಚಾರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ.   ಆನೇಕಲ್‍ನಲ್ಲಿ ಕೆಲ ಸಂಘಟನೆಗಳ ಕಾರ್ಯಕರ್ತರು ಟೈರ್‍ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರೆ, ಮುಳಬಾಗಿಲು ತಾಲ್ಲೂಕಿನ ಕೊಂಡರಾಜನ ಬಳಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಸುಗಳು ಹೊಸೂರಿನವರೆಗೂ ಮಾತ್ರ ಸಂಚರಿಸಿದವು.

ಕೆಲವು ಕಡೆ ಟೋಲ್‍ಗಳಲ್ಲಿ ವಾಹನಗಳನ್ನು ತಡೆಯಲು ಯತ್ನಿಸಿದರಾದರೂ ತಕ್ಷಣವೇ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಉಳಿದಂತೆ ರಾಜ್ಯದ ಇತರೆ ಭಾಗಗಳಲ್ಲಿ ಜನಜೀವನ ಸಹಜವಾಗಿತ್ತು.
ರಾಮನಗರದಲ್ಲಿ ಶಾಶ್ವತ ನೀರಾವರಿಗಾಗಿ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬೆಳಗ್ಗೆಯಿಂದಲೇ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಕರುನಾಡ ಸೇನೆ, ರೈತ ಸಂಘಟನೆ, ಕರವೇ ಪ್ರವೀಣ್ ಶೆಟ್ಟಿ ಬಣ ಸೇರಿದಂತೆ ವಿವಿಧ ಸಂಘಟನೆಗಳಿಂದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಪ್ರಧಾನಿ ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.   ಅನುದಾನ ರಹಿತ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಸರ್ಕಾರಿ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ಹಿಸಲಿವೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಆರ್.ಮಮತ ತಿಳಿಸಿದ್ದಾರೆ.
ಬಲವಂತವಾಗಿ ಅಂಗಡಿಯನ್ನು ಮುಚ್ಚಿಸಲು ಯತ್ನಿಸುತ್ತಿದ್ದ ಕನ್ನಡ ಸಂಘಟನೆಯ ಕಾರ್ಯಕರ್ತನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಕ್ಕರೆ ಜಿಲ್ಲೆ ಮಂಡ್ಯದಲ್ಲೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇನ್ನು ಗಡಿ ಜಿಲ್ಲೆಯಾದ ಚಾಮರಾಜನಗರದಲ್ಲೂ ಇದೇ ಪರಿಸ್ಥಿತಿ ಕಂಡುಬಂದಿತು.
ಬಂದ್ ಯಶಸ್ವಿ: ಪ್ರತಿಭಟನೆಯ ಕೇಂದ್ರಬಿಂದುವಾದ ಕೋಲಾರ, ಚಿಕ್ಕಬಳ್ಳಾಪುರಗಳಲ್ಲಂತೂ ನಿರೀಕ್ಷೆ ಮಾಡಿದ್ದಕ್ಕಿಂತಲೂ ಯಶಸ್ವಿಯಾಗಿದೆ. ಬೆಳಗ್ಗೆ 5 ಗಂಟೆಯಿಂದಲೇ ಉಭಯ ಜಿಲ್ಲೆಗಳಲ್ಲಿ ಬಂದ್ ಬಿಸಿ ಜೋರಾಗಿಯೇ ಇತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳಿಗೆ ರಜೆ ಘೋಷಿಸಲಾಗಿತ್ತು.

ನಸುಕಿನ 4-30 ರಿಂದಲೇ ಬೀದಿಗಿಳಿದಿದ್ದ ಪ್ರತಿಭಟನಕಾರರು ನಗರದ ಕೆಎಸ್‍ಆರ್‍ಟಿಸಿ ಬಸï ನಿಲ್ದಾಣ ವೃತ್ತದಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಕೆಎಸ್‍ಆರ್‍ಟಿಸಿ ಬಸï ನಿಲ್ದಾಣದಲ್ಲಿದ್ದ ಬಸ್‍ಗಳನ್ನು ವಾಪಸï ಡಿಪೊೀಗೆ ಕಳಿಸುವ ಮೂಲಕ ಬಂದ್‍ಗೆ ಸಹಕರಿಸುವಂತೆ ಒತ್ತಾಯಿಸಿದ್ರು. ಅಲ್ಲದೆ ಬಸï ನಿಲ್ದಾಣದಲ್ಲಿದ್ದ ಕೆಎಸ್‍ಆರ್‍ಟಿಸಿ ಬಸ್ ಮೇಲೆ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ್ದಲ್ಲದೆ ಬಸï ಚಕ್ರಗಳಲ್ಲಿ ಗಾಳಿ ತೆಗೆಯಲು ಮುಂದಾದರು.

ಇದೇ ವೇಳೆ ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕಳೆದ 365 ದಿನಗಳಿಂದ ಕೋಲಾರದಲ್ಲಿ ಶಾಶ್ವತ ನೀರಾವರಿ ಹೋರಾಟ ವೇದಿಕೆಯನ್ನು ನಿರ್ಮಾಣ ಮಾಡಿ ಎಂದು ನಿರಂತರವಾಗಿ ಧರಣಿ ಮಾಡಲಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಯಾವುದೇ ಸರ್ಕಾರ ಎಚ್ಚೆತ್ತುಕೊಳ್ಳದ ಕಾರಣ, ಇಂದು ಪ್ರಮುಖವಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಬಂದ್‍ಗೆ ಕೋಲಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿದಂತೆ ರೈತ ಸಂಘ, ಕನ್ನಡಪರ, ದಲಿತಪರ, ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಹಾಗೂ ಮಹಿಳಾ ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿವೆ.   ಅಲ್ಲದೆ ಕೋಲಾರ ಜಿಲ್ಲಾಧಿಕಾರಿ ಡಾ.ಕೆ.ವಿ. ತ್ರಿಲೋಕಚಂದ್ರ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಮುಂಜಾಗೃತ ಕ್ರಮವಾಗಿ ಜಿಲ್ಲೆಯ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಬೆಳಗ್ಗಿನಿಂದಲೆ ಅವಳಿ ಜಿಲ್ಲೆಗಳಲ್ಲಿ ವ್ಯಾಪಾರ ವಹಿವಾಟು ಸ್ತಬ್ಧಗೊಂಡಿದ್ದವು. ಕೆಲವು ಕಡೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದರೆ ಇನ್ನು ಕೆಲವು ಕಡೆ ಟೈರ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಉ.ಕ ಭಾಗದಲ್ಲೂ ನೀರಸ:

ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಯಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದರೆ ಉಳಿದ ಕಡೆ ಜನಜೀವನ ಸಹಜವಾಗಿತ್ತು.
ಸಾರಿಗೆ ಸಂಚಾರದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಆಗಿದ್ದರೂ ನಗರಸಾರಿಗೆ ಖಾಸಗಿ ವಾಹನಗಳು, ಟ್ಯಾಕ್ಸಿ ರಸ್ತೆಗಿಳಿದಿದ್ದವು. ಇನ್ನು ವಾಣಿಜ್ಯ ವಹಿವಾಟು ಎಂದಿನಂತೆ ನಡೆದರೆ ಹೋಟೆಲ್, ಕಿರಣಿ ಅಂಗಡಿಗಳ ಸ್ಥಿತಿ ಸಹಜವಾಗೇ ಇತ್ತು. ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿರಲಿಲ್ಲ. ಇನ್ನು ಉಳಿದಂತೆ ಬೆಳಗಾವಿ,  ಹಾವೇರಿ, ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯಾಪುರ, ಬಾಗಲಕೋಟೆ, ಕಲಬುರಗಿಯಲ್ಲಿ ಬಂದ್‍ಗೆ ಸಾರ್ವಜನಿಕರಿಂದಾಗಲಿ, ಕನ್ನಡಪರ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿರಲಿಲ್ಲ.   ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಪೊಲೀಸರು ಕನ್ನಡಪರ ಸಂಘಟನೆಗಳ ಮುಖಂಡರೂ ಸೇರಿದಂತೆ ಒಟ್ಟು 200 ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

 

Facebook Comments

Sri Raghav

Admin