ಕೋಳೂರು ಗ್ರಾಪಂ ಪಿಡಿಓ-ಬಿಲ್ ಕಲೆಕ್ಟರ್ ದೌರ್ಜನ್ಯ : ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಮುದ್ದೇಬಿಹಾಳ,ಅ.1- ತಾಲೂಕಿನ ನೇಬಗೇರಿ ಗ್ರಾಪಂನಿಂದ ತನಗೆ ನೀಡಲಾದ ನಿವೇಶನವನ್ನು ಹಾಲಿ ಪಿಡಿಓ ಹಾಗೂ ಬಿಲ್‍ಕಲೆಕ್ಟರ್ ಕೂಡಿಕೊಂಡು ನನ್ನ ಹೆಸರಿನಲ್ಲಿನ ಜಾಗವನ್ನ  ಮತ್ತೊಬ್ಬರ ಹೆಸರಿಗೆ ಮಾಡಿಕೊಟ್ಟಿದ್ದಾರೆ. ಕೂಡಲೇ ನನ್ನ ಜಾಗವನ್ನ   ನನಗೆ ಮರಳಿ ನೀಡಬೇಕು ಎಂದು ಆಗ್ರಹಿಸಿ ಇಲ್ಲಿನ ತಾಪಂ ಕಛೇರಿಯ ಎದುರು ಇದೇ 3 ರಂದು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಗ್ರಾಮದ ನಿವಾಸಿ ಗೌರಮ್ಮ ನೀಲನಗೌಡ ಯರಝರಿ ತಹಸೀಲ್ದಾರ್‍ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಕುರಿತು ತಹಸೀಲ್ದಾರ್‍ಗೆ ಸಲ್ಲಿಸಿರುವ ಮನವಿ ಯಲ್ಲಿ, ಮನೆ ಇಲ್ಲದ ಕಾರಣ ಮನೆ ನೀಡುವಂತೆ ನಾನು ಅರ್ಜಿ ಸಲ್ಲಿಸಿದ ವೇಳೆ ಆಗ ತಾಪಂ ಸದಸ್ಯರಾಗಿದ್ದ ಗುರು ತಾರನಾಳ ಅವರು ನೇಬಗೇರಿ ಗ್ರಾಮದಲ್ಲಿ ಇರುವ 30-40 ಅಡಿ ಅಳತೆಯ ಗೌಂಟಾಣಾ ಜಾಗವನ್ನು ಡಿ. 4, 2011ರಂದು ನನ್ನ ಹೆಸರಿಗೆ ದಾಖಲು ಮಾಡಿ ಉತಾರೆ ಕೊಟ್ಟಿದ್ದಾರೆ. ಉತಾರೆ ಸಂಖ್ಯೆ 625 ಎಂದು ನಮೂದಿಸಿ ನೀಡಿದ್ದು ಈಗ ಆ ಜಾಗದಲ್ಲಿ 10 ಅಡಿಯಷ್ಟು ಜಾಗದಲ್ಲಿ ನಾನು ಮನೆಯನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದೇನೆ. ಈಗ ನನ್ನ ಹೆಸರಿನಲ್ಲಿರುವ ಜಾಗದಲ್ಲಿ ಕೋಳೂರ ಗ್ರಾಪಂನ ಪಿ.ಡಿ.ಓ ಬೇರೊಬ್ಬರ ಕಡೆಯಿಂದ ಲಂಚ ತಿಂದು ಅವರ ಹೆಸರಿಗೆ ದಾಖಲು ಮಾಡಿ ಕೊಟ್ಟಿರುವುದಾಗಿ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ನಾನು ತಕ್ಷಣವೇ ಸಂಬಂಧಿಸಿದ ಕೋಳೂರ ಗ್ರಾಪಂಗೆ ತಕರಾರು ಅರ್ಜಿ ಸಲ್ಲಿಸಿದ್ದೇನೆ. ಕಳೆದ ಆರು ವರ್ಷಗಳಿಂದ ನನಗೆ ಕಂಪ್ಯೂಟರ್ ಉತಾರೆ ಕೊಡಿ, ಜಾಗ ಸರಿಯಾಗಿ ಅಳತೆ ಮಾಡಿಕೊಡಿರಿ ಎಂದು ತಹಶೀಲ್ದಾರ್, ತಾ.ಪಂ ಕಛೇರಿಗೆ, ಗ್ರಾ.ಪಂಗೆ, ಭೂಮಾಪನಾಧಿಕಾರಿ ಗಳಿಗೆ, ಜಿ.ಪಂ ಸಿಇಓಗೆ, ಜಿಲ್ಲಾಧಿಕಾರಿಗಳಿಗೆ, ವಿಜಯ ಪುರದ ಲೋಕಾಯುಕ್ತರ ಕಛೇರಿಗೆ ಅಲೆದಾಡಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ನನಗೆ ಮಾನಸಿಕ ಹಿಂಸೆ ನೀಡಿದ್ದು ನ್ಯಾಯ ಕೊಡಿ ಎಂದು ಇವರ ಕಛೇರಿಗಳಿಗೆ ಹೋದರೆ ನನಗೆ ಅವಮಾನ ಮಾಡಿದ್ದಲ್ಲದೆ ನನಗೆ ಹುಚ್ಚಿ ಎಂದು ಕರೆದು ಹೊರಗೆ ಹಾಕಿದ್ದಾರೆ. ಇದಕ್ಕಾಗಿ ಅಲೆದಾಡಿ ಸಾಕಷ್ಟು ಹಣ ಖರ್ಚು ಮಾಡಿಕೊಂಡಿದ್ದೇನೆ. ಭೂಮಾಪನಾಧಿಕಾರಿ ಹೆಚ್ಚು ಮಾನಸಿಕ ಹಿಂಸೆ ನೀಡಿದ್ದಾರೆ. ಈಗ ನಾನು ಭಿಕ್ಷೆ ಬೇಡುವ ಹಂತಕ್ಕೆ ಬಂದಿದ್ದು ಇವರೆಲ್ಲರೂ ಇದಕ್ಕೆ ಕಾರಣರಾಗಿದ್ದಾರೆ. ಕಾರಣ ಇವರೆಲ್ಲರ ವಿಳಂಬ ಧೋರಣೆ ವಿರೋಧಿಸಿ ಅ.3 ರಂದು ಮುದ್ದೇ ಬಿಹಾಳ ತಾಲೂಕಾ ಪಂಚಾಯತಿ ಕಚೇರಿಯ ಮುಂದೆ ಅನಿರ್ಧಿಷ್ಠ ಉಪವಾಸ ಸತ್ಯಾಗ್ರಹ ಕೂಡುತ್ತೇನೆ ಎಂದು ತಿಳಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin