ಕೋ-ಆಪರೇಟಿವ್ ಬ್ಯಾಂಕ್‍ಗಳಿಗೆ ಇಡಿ ನೋಟಿಸ್ : ನ.9ರಿಂದ ನಡೆದ ವಹಿವಾಟು ನೀಡುವಂತೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ED

ನವದೆಹಲಿ, ಡಿ.20-ದೇಶ ವಿವಿಧ ಸಹಕಾರಿ ಬ್ಯಾಂಕ್‍ಗಳಲ್ಲಿ ಕೋಟ್ಯಂತರ ರೂ.ಗಳ ದಿಢೀರ್ ಠೇವಣಿ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) 300ಕ್ಕೂ ಹೆಚ್ಚು ಕೋ-ಆಪರೇಟಿವ್ ಬ್ಯಾಂಕ್‍ಗಳಿಗೆ ನೋಟಿಸ್ ಗುಜರಾಯಿಸಿ ಶಾಕ್ ನೀಡಿದೆ. ನ.9ರಿಂದ ಈ ಬ್ಯಾಂಕ್‍ಗಳಲ್ಲಿ ನಡೆದಿರುವ ಎಲ್ಲ ವಹಿವಾಟು-ವ್ಯವಹಾರಗಳ ಸಂಪೂರ್ಣ ಮಾಹಿತಿಯನ್ನು ಇನ್ನೆರಡು ದಿನಗಳ ಒಳಗಾಗಿ ನೀಡುವಂತೆ ಇಡಿ ಸೂಚನೆ ನೀಡಿ, ಗಡುವು ನಿಗದಿಗೊಳಿಸಿದೆ. ಇದರಿಂದಾಗಿ ಸಹಕಾರಿ ಬ್ಯಾಂಕ್‍ಗಳಿಗೆ ಹೊಸ ಪೀಕಲಾಟ ಶುರುವಾಗಿದೆ.

ನ.8ರಂದು ಕೇಂದ್ರ ಸರ್ಕಾರ ನೋಟು ರದ್ದುಗೊಳಿಸಿದ ನಂತರ ದೇಶದ 17 ರಾಜ್ಯಗಳ ಕೇಂದ್ರ ನಿಯಂತ್ರಿತ ಜಿಲ್ಲ ಸಹಕಾರಿ ಬ್ಯಾಂಕ್‍ಗಳಲ್ಲಿ ಕೇವಲ ಐದೇ ದಿನದಲ್ಲಿ (ನ.10-ನ.15) 9,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಠೇವಣಿ ಸಂಗ್ರಹವಾಗಿತ್ತು. ಈ ಅಂಶವನ್ನೂ ಗಂಭೀರವಾಗಿ ಪರಿಗಣಿಸಿರುವ ಇಡಿ 300ಕ್ಕೂ ಹೆಚ್ಚು ಸಹಕಾರಿ ಬ್ಯಾಂಕ್‍ಗಳ ವಹಿವಾಟು ಬಗ್ಗೆ ಸಂಪೂರ್ಣ ಮಾಹಿತಿ ಕೇಳಿದೆ.

ಡಿಸಿಸಿ ಬ್ಯಾಂಕ್‍ಗಳಿಗೂ ಷರತ್ತು ಅನ್ವಯ : ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕುಗಳಲ್ಲಿ ನೆ.10 ರಿಂದ 14ರವರೆಗೆ ಠೇವಣಿಯಾಗಿ ಇಡಲ್ಪಟ್ಟ ಹಳೆ ನೋಟುಗಳಿಗೂ ಆರ್‍ಬಿಐ ನಿನ್ನೆ ಹೊರಡಿಸಿದ ಹಳೆ ನೋಟು ಠೇವಣಿ ಷರತ್ತಿಗಳು ಅನ್ವಯವಾಗುತ್ತದೆ. ವೈಯಕ್ತಿಕ ಗ್ರಾಹಕರು ಅಥವಾ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು ಠೇವಣಿ ಇಟ್ಟಿದ್ದರೆ, ಅವುಗಳಿಗೆ ಕೆವೈಸಿ ಆಧಾರದಲ್ಲಿ ನಬಾರ್ಡ್ ಸೂಕ್ತ ವಿಚಾರಣೆ ನಡೆಸಿ ಸತ್ಯಾಸತ್ಯೆ ಪರಿಶೀಲಿಸುತ್ತದೆ. ಬಳಿಕವಷ್ಟೇ ಡಿಸಿಸಿ ಬ್ಯಾಂಕ್‍ಗಳಿಗೆ ಸಂಬಂಧಪಟ್ಟ ಕರೆನ್ಸಿ ಚೆಸ್ಟ್‍ಗಳಿಂದ ವಿನಿಮಯ ಮೊತ್ತ ಪಡೆಯಬಹುದು.

ಇಡಿ ನೋಟಿಸ್‍ಗೆ ಕಾರಣವೇನು..?

ದೇಶದ 17 ರಾಜ್ಯಗಳಲ್ಲಿ ನ.10 ಮತ್ತು 15ರ ನಡುವೆ ಜಿಲ್ಲಾ ನಿಯಂತ್ರಿತ ಸಹಕಾರ ಬ್ಯಾಂಕ್ (ಡಿಸಿಸಿಬಿ) ಗಳಲ್ಲಿ ಒಟ್ಟು 9,000 ಕೋಟಿ ರೂ.ಗಳಿಗೂ ಹೆಚ್ಚು ಠೇವಣಿ ಸಂಗ್ರಹವಾಗಿರುವುದು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳ ಹುಬ್ಬೇರುವಂತೆ ಮಾಡಿತ್ತು. ಮಹಾರಾಷ್ಟ್ರದ ಜಿಲ್ಲಾಪತ್ತಿನ ಸಹಕಾರಿ ಬ್ಯಾಂಕ್‍ಗಳಲ್ಲೇ (ಡಿಸಿಸಿ) ಕೇವಲ ನಾಲ್ಕು ದಿನಗಳಲ್ಲಿ 5,000 ಕೋಟಿ ರೂ.ಗಳ ಹಳೆ ನೋಟುಗಳನ್ನು ಠೇವಣಿ ಇಟ್ಟಿರುವುದು ಬೆಳಕಿಗೆ ಬಂದಿತ್ತು. ಇದೇ ರೀತಿಯ ಪ್ರಕರಣಗಳು ದೇಶದ 16 ರಾಜ್ಯಗಳಲ್ಲಿ ಕಂಡುಬಂದಿದೆ. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ಕಾಳಧನ ಪರಿವರ್ತನೆ ಅಕ್ರಮಗಳು ನಡೆದಿರುವ ಸಾಧ್ಯತೆ ಬಗ್ಗೆ ತನಿಖೆ ತೀವ್ರಗೊಂಡಿದ್ದು, ಅದರ ಭಾಗವಾಗಿ ಇಡಿ ನೋಟಿಸ್ ಜಾರಿ ಮಾಡಲಾಗಿದೆ.

500 ರೂ. ಮತ್ತು 1,000 ರೂ.ಗಳ ಹಳೆ ನೋಟುಗಳನ್ನು ನವೆಂಬರ್ 8ರಂದು ರದ್ದುಗೊಳಿಸಲಾಗಿತ್ತು. ಅದಾದ ನಂತರ ನವೆಂಬರ್ 10 ರಿಂದ 15ರವರೆಗೆ ರಾಷ್ಟ್ರದ 17 ರಾಜ್ಯಗಳಲ್ಲಿ ಕೇವಲ ಐದು ದಿನಗಳಲ್ಲಿ 9,000 ಕೋಟಿ ರೂ.ಗಳಿಗೂ ಹೆಚ್ಚು ಠೇವಣೆ ಸಂಗ್ರಹವಾಗಿದೆ.  ಈ ಬ್ಯಾಂಕ್‍ಗಳಲ್ಲಿ ರೈತರು ಮತ್ತು ಸ್ಥಳೀಯ ಗ್ರಾಮಸ್ಥರು ಹೆಚ್ಚಾಗಿ ಖಾತೆಗಳನ್ನು ಹೊಂದಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಬೃಹತ್ ಪ್ರಮಾಣದ ಹಣ ಸಂಗ್ರಹವಾಗಿರುವುದರಿಂದ ನಬಾರ್ಡ್ (ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್) ಮತ್ತು ಅದಾಯ ತೆರಿಗೆ ಅಧಿಕಾರಿಗಳ ಹುಬ್ಬೇರುವಂತೆ ಮಾಡಿದೆ. ಇದರಲ್ಲಿ ಶಂಕಾಸ್ಪದ ಠೇವಣಿಗಳು ಅಥವಾ ಹಣಕಾಸು ದುವ್ರ್ಯವಹಾರ ನಡೆದಿರುವ ಸಾಧ್ಯತೆ ಬಗ್ಗೆ ತನಿಖೆ ಕೈಗೊಂಡಿದೆ.

ಈ ಬ್ಯಾಂಕ್‍ಗಳಲ್ಲಿರುವ ಕೆಲವು ಖಾತೆಗಳಲ್ಲಿ ಭಾರೀ ಮೊತ್ತದ ನಗದನ್ನು ಠೇವಣಿಯಾಗಿಡಲು ಬಳಸಿಕೊಳ್ಳಲಾಗಿದೆ. ರಾಜ್ಯದಲ್ಲಿರುವ 31 ಡಿಸಿಸಿ ಬ್ಯಾಂಕ್‍ಗಳು ಸ್ಥಳೀಯ ರಾಜಕಾರಣಿಗಳ ನಿಯಂತ್ರಣದಲ್ಲಿದ್ದು, ಇವರಲ್ಲಿ ಕೆಲವರು ಈ ಹಿಂದೆ ಹಣಕಾಸು ಅವ್ಯವಹಾರಗಳನ್ನು ನಡೆಸಿರುವ ವರದಿಗಳಿವೆ. ಈ ಬಗ್ಗೆ ತನಿಖೆ ನಡೆಯಲಿದೆ.  ಅಮಾನ್ಯಗೊಂಡ ಹಳೆ ನೋಟುಗಳನ್ನು ಠೇವಣಿಯಾಗಿಡಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಅವಕಾಶ ನೀಡಿದ ಅಲ್ಪ ಸಮಯದಲ್ಲೇ, ಅದರಲ್ಲೂ ನಾಲ್ಕು ದಿನಗಳ ಅವಧಿಯಲ್ಲಿ 3,800ಕ್ಕೂ ಹೆಚ್ಚು ಶಾಖೆಗಳಲ್ಲಿ ಭಾರೀ ಠೇವಣಿ ಸ್ವೀಕೃತವಾಗಿರುವುದರಿಂದ ಅಕ್ರಮ-ಅವ್ಯವಹಾರದ ಹೊಗೆಯಾಡುತ್ತಿದೆ. ತನಿಖೆ ತೀವ್ರಗೊಂಡಿದ್ದು, ಕಾಳಧನಿಕರು, ರಾಜಕಾರಣಿಗಳು ಮತ್ತು ಪ್ರಭಾವಿಗಳು ಬಲೆಗೆ ಬೀಳುವ ಸಾಧ್ಯತೆ ಇದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin