ಕ್ಯಾಟರಿಂಗ್ ವ್ಯಕ್ತಿಯ ಕೈ, ಕಾಲು ಕಟ್ಟಿ ಹಣ, ಆಭರಣ ದೋಚಿದ್ದ ಡಕಾಯಿತರ ಸೆರೆ
ಬೆಂಗಳೂರು, ಅ.25- ಮಾತನಾಡುವ ನೆಪದಲ್ಲಿ ಕ್ಯಾಟರಿಂಗ್ ನಡೆಸುವ ವ್ಯಕ್ತಿಯ ಮನೆಗೆ ಬಂದು ಅವರ ಕೈ-ಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮಹಿಳೆ ಸೇರಿದಂತೆ 9 ಮಂದಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿ 30ಗ್ರಾಂ ತೂಕದ ಆಭರಣ ವಶಪಡಿಸಿಕೊಂಡಿದ್ದಾರೆ.ಜ್ಯೋತಿ, ಶಿವಾನಂದ, ದಿಲೀಪ್, ಶರತ್ಕುಮಾರ್, ಗುರುಪ್ರಸಾದ್, ವಿಕಾಶ್, ವಿನೋದ್ಕುಮಾರ್, ರಥನ್ ಮತ್ತು ರವಿರಾಜ್ ಬಂಧಿತ ಆರೋಪಿಗಳು.ಈ ಆರೋಪಿಗಳು 29 ವರ್ಷದ ಮಹಿಳೆಯೊಂದಿಗೆ ಸೇರಿ ಹನಿಟ್ರ್ಯಾಪ್ಮೂಲಕ ಹಣ ಸುಲಿಗೆ ಮಾಡುತ್ತಿದ್ದದ್ದು ವಿಚಾರಣೆಯಿಂದ ತಿಳಿದು ಬಂದಿದ್ದು, ಜೆ.ಪಿ.ನಗರ, ಕಾಮಾಕ್ಷಿಪಾಳ್ಯ ಹಾಗೂ ವರ್ತೂರಿನಲ್ಲಿ ಈ ಕೃತ್ಯವೆಸಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ಗಿರಿನಗರ ಠಾಣೆ ವ್ಯಾಪ್ತಿಯ ದತ್ತಾತ್ರೇಯನಗರದಲ್ಲಿ ವಾಸವಿರುವ ಗುರುರಾಜ್ ಎಂಬುವರು ಕ್ಯಾಟರಿಂಗ್ ನಡೆಸುತ್ತಾರೆ. ಇವರಿಗೆ ಮಹಿಳೆಯೊಬ್ಬರು ದೂರವಾಣಿ ಕರೆ ಮಾಡಿ ಊಟಕ್ಕೆ ಆರ್ಡರ್ ಕೊಡಬೇಕು, ಎಷ್ಟು ಹಣವಾಗುತ್ತದೆ ಎಂಬ ಬಗ್ಗೆ ಮಾತನಾಡಬೇಕೆಂದು ಹೇಳಿ ರಾತ್ರಿ ಬರುವುದಾಗಿ ತಿಳಿಸಿದ್ದಾಳೆ.ಅದರಂತೆ ಕಳೆದ ಶುಕ್ರವಾರ ರಾತ್ರಿ 8.30ರಲ್ಲಿ ಇಬ್ಬರು ವ್ಯಕ್ತಿಗಳೊಂದಿಗೆ ಗುರುರಾಜ್ ಅವರ ಮನೆಗೆ ಬಂದ ಮಹಿಳೆ, ನಾನೇ ನಿಮಗೆ ದೂರವಾಣಿ ಕರೆ ಮಾಡಿದ್ದು ಎಂದು ಪರಿಚಯಿಸಿಕೊಂಡು ಒಳಗೆ ಹೋಗಿ ಅವರ ಕೈ-ಕಾಲು ಕಟ್ಟಿಹಾಕಿದ್ದಾರೆ.
ಇವರ ಹಿಂದೆಯೇ ಐದಾರು ಮಂದಿ ಮನೆಯೊಳಕ್ಕೆ ನುಗ್ಗಿ ಬೀರುವಿನಲ್ಲಿದ್ದ ಹಣ ಹಾಗೂ ಚಿನ್ನಾಭರಣ ಡಕಾಯಿತಿ ಮಾಡಿಕೊಂಡು ಪರಾರಿಯಾಗಿದ್ದರು.ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿತ್ತು. ಬ್ಯಾಟರಾಯನಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆ ಸೇರಿದಂತೆ 9 ಮಂದಿ ಡಕಾಯಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
► Follow us on – Facebook / Twitter / Google+