ಕ್ಯಾಲಿಫೋರ್ನಿಯಾದಲ್ಲಿ ವ್ಯಕ್ತಿಯೊಬ್ಬ ನಡೆಸಿದ ಹಠಾತ್ ಗುಂಡಿನ ದಾಳಿಗೆ ಇಬ್ಬರು ಪೊಲೀಸರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

2-Kiled-01

ಕ್ಯಾಲಿಫೋರ್ನಿಯಾ. ಅ.9-ಕೌಟುಂಬಿಕ ಕಲಹ ಬಗೆಹರಿಸಲು ಯತ್ನಿಸುತ್ತಿದ್ದ ವೇಳೆ ಹಠಾತ್ ಗುಂಡಿನ ದಾಳಿ ನಡೆಸಿದ ವ್ಯಕ್ತಿಯೊಬ್ಬ ಓರ್ವ ಬಾಣಂತಿ ಮಹಿಳಾ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸರನ್ನು ಕೊಂದು ಪರಾರಿಯಾಗಿರುವ ಘಟನೆ ಇಲ್ಲಿನ ಪಾಮ್ ಸ್ಪ್ರಿಂಗ್ಸ್ನಲ್ಲಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಜೋಸ್ ಗಿಲ್ ಗಿಲ್ಬರ್ಟ್ ವೆಗಾ ಮತ್ತು ಲೆಸ್ಲೇ ಜೆರೆಬ್ನಿ ಮೃತಪಟ್ಟಿದ್ದು, ಇನ್ನೊಬ್ಬ ಪೊಲೀಸ್ ಅಧಿಕಾರಿ ತೀವ್ರ ಗಾಯಗೊಂಡಿದ್ದಾರೆ.  ಕೌಟುಂಬಿಕ ಕಲಹವೊಂದು ತಾರಕಕ್ಕೇರಿದಾಗ ಪಾಮ್ ಸ್ಪ್ರಿಂಗ್ಸ್ ವಿಭಾಗದ ಮೂವರು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿವಾದ ಇತ್ಯರ್ಥಪಡಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಸಮಾಧಾನಪಡಿಸುತ್ತಿದ್ದಾಗ ಕುಪಿತನಾದ ಆತ ಗನ್ ತೆಗೆದು ಗುಂಡಿ ಹಾರಿಸಿದ. ಈ ಕೃತ್ಯದಲ್ಲಿ ಇಬ್ಬರು ಅಧಿಕಾರಿಗಳು ಸಾವಿಗೀಡಾಗಿ, ಮತ್ತೊಬ್ಬನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ನಗರ ಪೊಲೀಸ್ ಮುಖ್ಯಸ್ಥ ಬ್ರಯಾನ್ ರೆಯಾಸ್ ತಿಳಿಸಿದ್ದಾರೆ.

ಗುಂಡಿನ ದಾಳಿಗೆ ಬಲಿಯಾದ ಲೆಸ್ಲೇ ಜೆರೆಬ್ನಿ ನಾಲ್ಕು ತಿಂಗಳ ಹೆರಿಗೆ ರಜೆ ನಂತರ ಇತ್ತೀಚೆಗಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದು, ಅವರಿಗೆ ನಾಲ್ಕುವರೆ ತಿಂಗಳ ಮಗುವಿದೆ. ಗಿಲ್ಬರ್ಟ್ ವೆಗಾ 35 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಡಿಸೆಂಬರ್ನಲ್ಲಿ ನಿವೃತ್ತರಾಗುವವರಿದ್ದರು. ಕೌಟುಂಬಿಕ ಜಗಳ ಬಿಡಿಸಲು ಹೋಗಿ ಪೊಲೀಸ್ ಅಧಿಕಾರಿಗಳು ದುರಂತ ಸಾವಿಗೀಡಾದ ಘಟನೆ ಬಗ್ಗೆ ಸ್ಥಳೀಯರು ಮಮ್ಮಲಮರುಗಿದ್ದಾರೆ. ಈ ಕೃತ್ಯ ಎಸಗಿದ ನಂತರ ಹಂತಕ ಪರಾರಿಯಾಗಿದ್ದು, ಮಾನವ ಬೇಟೆ ಮುಂದುವರಿದಿದೆ.

► Follow us on –  Facebook / Twitter  / Google+

Facebook Comments

Sri Raghav

Admin