ಕ್ಯಾಶ್‍ಲೆಸ್ ಇಂಡಿಯಾ ಎಂಬುದು ಲೂಟಿ ಹೊಡೆಯುವ ವ್ಯವಸ್ಥೆ : ಆನಂದ್‍ಶರ್ಮ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

Anand-Sharma--01

ಬೆಂಗಳೂರು, ಜ.28- ಭಾರತದಲ್ಲಿ ನೋಟು ಅಮಾನೀಕರಣದ ನಂತರ ಆರ್ಥಿಕ ತುರ್ತು ಪರಿಸ್ಥಿತಿ ಇದ್ದು, ನಗದು ರಹಿತ ಭಾರತ (ಕ್ಯಾಶ್‍ಲೆಸ್ ಇಂಡಿಯಾ) ಎಂಬುದು ಜನರ ಲೂಟಿ ಹೊಡೆಯುವ ವ್ಯವಸ್ಥೆಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಆನಂದ್‍ಶರ್ಮ ಟೀಕಿಸಿದರು. ನಗರದ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನವೇದನ ಸಮಾವೇಶದಲ್ಲಿ ಮಾತನಾಡಿದ ಅವರು, ಕ್ಯಾಶ್‍ಲೆಸ್ ಇಂಡಿಯಾ ಎಂಬುದು ಅಸಾಧ್ಯದ ಮಾತು. ವಿಶ್ವದ ಯಾವುದೇ ದೇಶದಲ್ಲೂ ನಗದು ರಹಿತ ವ್ಯವಸ್ಥೆ ಇಲ್ಲ. ಜರ್ಮನಿಯಲ್ಲಿ ಶೇ.80ರಷ್ಟು, ಅಮೆರಿಕದಲ್ಲಿ 56, ಫ್ರಾನ್ಸ್‍ನಲ್ಲಿ ಶೇ.70ರಷ್ಟು ನಗದು ರಹಿತ ವ್ಯವಸ್ಥೆ ಇದೆ. ಭಾರತದಲ್ಲಿ 6ಲಕ್ಷಕ್ಕೂ ಹೆಚ್ಚು ಹಳ್ಳಿ ಮತ್ತು ನಗರಗಳಿವೆ. ಬ್ಯಾಂಕುಗಳ ಸಂಖ್ಯೆ ಇರುವುದು 1.32ರಷ್ಟು ಮಾತ್ರ. ಬಹಳಷ್ಟು ಜನರಿಗೆ ಈಗಲೂ ಬ್ಯಾಂಕ್ ಸೌಲಭ್ಯ ಸಿಕ್ಕಿಲ್ಲ. ಅವರಿಗೆ ಡೆಬಿಟ್‍ಕಾರ್ಡ್, ಸ್ಮಾರ್ಟ್ ಫೆÇೀನ್ ಕೊಡುವವರು ಯಾರು ಎಂದು ಪ್ರಶ್ನಿಸಿದರು.

ಈ ಮೊದಲು ಬ್ಯಾಂಕಿನಲ್ಲಿ ಹಣ ಇಟ್ಟರೆ ಅದಕ್ಕೆ ಬಡ್ಡಿ ಬರುತ್ತಿತ್ತು. ಆದರೆ, ಈಗ ಕ್ಯಾಸ್ ಲೆಸ್ ಸೇವೆ ಒದಗಿಸುವ ಸಂಸ್ಥೆಗಳು ಜನರ ಹಣವನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತವೆ. ಯಾವುದೇ ಬಡ್ಡಿ ಕೊಡುವುದಿಲ್ಲ. ಪೇಟಿಯಮ್‍ನಂತಹ ಖಾಸಗಿ ಸಂಸ್ಥೆಗಳಿಗೆ ಪ್ರಧಾನಮಂತ್ರಿಯವರಂತಹವರೇ ರಾಯಭಾರಿಗಳಾಗಿದ್ದಾರೆ. ಜನರ ಹಣಕ್ಕೆ ಸರ್ವೀಸ್ ಚಾರ್ಜ್ ವಸೂಲಿ ಮಾಡುವ ಮೂಲಕ ಲೂಟಿ ಹೊಡೆಯಲಾಗುತ್ತಿದೆ ಎಂದು ಅವರು ಟೀಕಿಸಿದರು.

ಪ್ರಧಾನಿ ಮೋದಿ ಅವರು ಸಂಸತ್‍ನಲ್ಲಿ ಚರ್ಚಿಸದೆ ಸಂಪುಟದಲ್ಲೇ ಈ ಬಗ್ಗೆ ಪ್ರಸ್ತಾಪಿಸದೆ ಏಕಾ ಏಕಿ ನೋಟು ಅಮಾನೀಕರಣ ಮಾಡಿದ್ದಾರೆ. ತಾವು ಮಾಡಿದ್ದು ಸರಿ ಎಂಬ ಭ್ರಮೆ ಮೋದಿ ಅವರಿಗಿದೆ. ಸುಮಾರು 15ಲಕ್ಷ ಕೋಟಿಗೂ ಹೆಚ್ಚು ನೋಟುಗಳನ್ನು ಅಮಾನ್ಯಗೊಳಿಸಲಾಗಿತ್ತು. ಇದರಲ್ಲಿ ಶೇ.98ರಷ್ಟು ನೋಟುಗಳು ವಾಪಸ್ ಬಂದಿವೆ. ನೋಟು ಅಮಾನ್ಯ ಮಾಡುವಾಗ ನಕಲಿ ನೋಟುಗಳನ್ನು ತಡೆಯುವುದು, ಭಯೋತ್ಪಾದಕರಿಗೆ ಹಣ ಕಾಸು ಹೋಗದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡಲಾಗಿತ್ತು. ಈಗ ಮರಳಿ ಬಂದಿರುವ ನೋಟುಗಳಲ್ಲಿ ಬ್ಲಾಕ್ ಮನಿ ಎಷ್ಟು ಎಂಬುದನ್ನು ಪ್ರಕಟಿಸಬೇಕು ಎಂದರು.

ಅಧಿಕೃತ ಮೂಲಗಳ ಪ್ರಕಾರ ಶೇ.0.002ರಷ್ಟು ನಕಲಿ ನೋಟುಗಳು ಚಲಾವಣೆಯಲ್ಲಿದ್ದವು. ಇದರ ಮೌಲ್ಯ 400ಕೋಟಿಯಷ್ಟು. ನವೆಂಬರ್‍ನಿಂದ ಈವರೆಗೂ ಒಂದು ನಕಲಿ ನೋಟನ್ನು ವಶಪಡಿಸಿಕೊಂಡಿಲ್ಲ ಎಂದು ಆರ್‍ಬಿಐ ಹೇಳಿದೆ. ನೋಟು ಅಮಾನೀಕರಣ ತಮ್ಮ ನಿರ್ಧಾರ ಅಲ್ಲ ಎಂದು ಆರ್‍ಬಿಐ ಸ್ಪಷ್ಟಪಡಿಸಿದೆ. ಹಾಗಿದ್ದ ಮೇಲೆ ಯಾವ ಉದ್ದೇಶಕ್ಕಾಗಿ ನೋಟು ಅಮಾನೀಕರಣಗೊಳಿಸಿದರು ಎಂದು ಪ್ರಶ್ನಿಸಿದರು. ಜನಸಾಮಾನ್ಯರ ಬದುಕು ದುಸ್ಥರವಾಗಿದೆ. ಸಣ್ಣಪುಟ್ಟ ವ್ಯಾಪಾರಿಗಳು ಬೀದಿಗಿಳಿದಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ರಿಯಲ್‍ಎಸ್ಟೇಟ್ ಸೇರಿದಂತೆ ಎಲ್ಲಾ ಉದ್ಯಮಿಗಳು ನಾಶವಾಗಿವೆ. ನೂರಾರು ಮಂದಿ ಸಾವನ್ನಪ್ಪಿದ್ದಾರೆ. ತೊಂದರೆಗೆ ಒಳಗಾದವರಲ್ಲಿ ಮೋದಿ ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಆನಂದ ಶರ್ಮ ಒತ್ತಾಯಿಸಿದರು.

ನೋಟು ಅಮಾನೀಕರಣ ಮತ್ತು ಕ್ಯಾಶ್‍ಲೆಸ್ ಇಂಡಿಯಾ ವ್ಯವಸ್ಥೆ ಬಗ್ಗೆ ಮೋದಿ ಅವರ ನಿಲುವು ಜನಪರವಾಗಿದ್ದರೆ ಸಂಸತ್‍ನಲ್ಲಿ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಕಪ್ಪುಹಣ ತಡೆಗಟ್ಟುವುದಾಗಿ ಹೇಳಿದ ಮೋದಿ ಅವರು ನೋಟು ಅಮಾನೀಕರಣ ನಿಯಂತ್ರಣ ಮಾಡಿದ ನಂತರ ಆರ್‍ಬಿಐ ಮುದ್ರಿಸಿದ ಎಲ್ಲ ಹೋಸ ನೋಟುಗಳು ಬಿಜೆಪಿ ನಾಯಕರ ಮನೆ ಸೇರಿದವು ಎಂದು ಟೀಕಿಸಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ದೇಶದ 35ರಾಜ್ಯಗಳ ಮುಖ್ಯಮಂತ್ರಿಗಳು ಅಥವಾ ಸಂಸತ್‍ನಲ್ಲಿ ಚರ್ಚೆ ಮಾಡದೆ ಮೋದಿಯವರು ನೋಟು ಅಮಾನೀಕರಣ ಮಾಡಿದರು. 60 ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. 70 ದಿನಗಳು ಕಳೆದರೂ ಇನ್ನೂ ಸಮಸ್ಯೆ ಬಗೆಹರಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಹೊರ ತಂದಿರುವ ನಮೋ ಹಾಕಿದ ನಾಮ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಮುಖಂಡರಾದ ಜಿತೇಂದ್ರ ಸಿಂಗ್, ಡಾ.ಸುದರ್ಶನ್, ಸಚಿವರಾದ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ಟಿ.ಬಿ.ಜಯಚಂದ್ರ, ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಪ್ರಿಯಾಂಕ ಖರ್ಗೆ, ಕೆಪಿಸಿಸಿ ಕಾರ್ಯಾಶ್ಯಕ್ಷ ದಿನೇಶ್‍ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ, ಮುಖಂಡರಾದ ಎಂ.ವಿ.ರಾಜಶೇಖರನ್, ವೀರಣ್ಣ ಮತ್ತೀಕಟ್ಟಿ, ಎ.ಬಿ.ಮಾಲಕರೆಡ್ಡಿ, ಸಲೀಂ ಅಹಮ್ಮದ್, ಜಾಫರ್‍ಶರೀಫ್, ಎಚ್.ಎಂ.ರೇವಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀಹೆಬ್ಬಾಳ್ಕರ್, ಎನ್‍ಎಸ್‍ಯುಐ ಅಧ್ಯಕ್ಷ ಮಂಜುನಾಥ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin