ಕ್ಯಾಶ್ ಲೆಸ್ ವ್ಯವಹಾರ ಪ್ರೋತ್ಸಾಹಿಸಲು ಕೇಂದ್ರದಿಂದ ಲಕ್ಕಿ ಡ್ರಾ ಯೋಜನೆ
ನವದೆಹಲಿ, ಡಿ. 15 : ದೇಶದಲ್ಲಿ ಕ್ಯಾಶ್ ಲೆಸ್ ವ್ಯವಹಾರವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರ ಡಿಸೆಂಬರ್ 25 ರಿಂದ ಲಕ್ಕಿ ಡ್ರಾ ಯೋಜನೆ ಆರಂಭಿಸಲಿದೆ. ಆಯ್ಕೆಯಾಗುವ ಅದೃಷ್ಟವಂತರಿಗೆ ರೂ. 1 ಕೋಟಿ ಬಹುಮಾನ ಘೋಷಿಸಿದೆ. ಎರಡೂ ಯೋಜನೆಗಳಲ್ಲಿ ಗ್ರಾಹಕರು ಹಾಗೂ ವ್ಯಾಪಾರಿಗಳು ನಡೆಸುವ ಡಿಜಿಟಲ್ ವಹಿವಾಟಿಗೆ ಅನ್ವಯವಾಗಲಿದೆ. ದಿನದ ಅದೃಷ್ಟವಂತರು, ವಾರದ ಅದೃಷ್ಟವಂತರು ಮತ್ತು ದೊಡ್ಡ ಬಹುಮಾನ ಪಡೆಯುವ ಅದೃಷ್ಟವಂತರಿಗೆ ರೂ1 ಕೋಟಿ ವರೆಗಿನ ಬಹುಮಾನ ನೀಡಲು ನಿರ್ಧರಿಸಿದೆ. ಈ ಯೋಜನೆಗಾಗಿ ರೂ340 ಕೋಟಿ ವೆಚ್ಚಮಾಡಲಿದೆ ಎಂದು ನೀತಿ ಆಯೋಗ ಹೇಳಿದೆ.
ಈ ಹಿನ್ನೆಲೆಯಲ್ಲಿ ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್ ಅವರು ಎರಡು ಪ್ರಮುಖ ಯೋಜನೆಗಳನ್ನು ಇಂದು ಘೋಷಿಸಿದ್ದಾರೆ. ಆನ್ ಲೈನ್ ವ್ಯವಹಾರಕ್ಕೆ ಗ್ರಾಹಕರನ್ನು ಆಕರ್ಷಿಸಲು ‘ಲಕ್ಕಿ ಗ್ರಾಹಕ್ ಯೋಜನೆ’ ಹಾಗೂ ವ್ಯಾಪಾರಿಗಳಿಗಾಗಿ ‘ಡಿಜಿ ಧನ್ ವ್ಯಾಪಾರಿ ಯೋಜನೆ’ ಗಳನ್ನು ಪರಿಚಯಿಸಲಾಗಿದೆ. ಈ ಮೂಲಕ ಕಪ್ಪು ಹಣಕ್ಕೆ ತಡೆ ಒಡ್ಡಲು ಡಿಜಿಟಲ್ ಪೇಮೆಂಟ್ ಮಾಡುವಂತೆ ದೇಶದ ಜನತೆಗೆ ಹೇಳಲಾಗುತ್ತಿದೆ ಎಂದು ಅಮಿತಾಬ್ ಕಾಂತ್ ತಿಳಿಸಿದ್ದಾರೆ. ಈ ಎರಡೂ ಯೋಜನೆಗಳು ಡಿಸೆಂಬರ್ 25 ರಂದು ಆರಂಭವಾಗಲಿದೆ.
ಲಕ್ಕಿ ಗ್ರಾಹಕ್ ಯೋಜನೆಯಡಿ ಮುಂದಿನ 100 ದಿನಗಳು 15 ಸಾವಿರ ವಿಜೇತರಿಗೆ ತಲಾ 1 ಸಾವಿರ ರೂ. ಉಡುಗೊರೆ. 50 ರೂ. ನಿಂದ 3 ಸಾವಿರ ರೂ. ವರೆಗಿನ ಡಿಜಿಟಲ್ ಪೇಮೇಂಟ್ ಗಳು ಎರಡೂ ಯೋಜನೆಯಲ್ಲಿ ಒಳಗೊಳ್ಳುತ್ತವೆ. ಡಿಜಿ ಧನ್ ಯೋಜನೆಯಲ್ಲಿ ಪ್ರತಿ ವ್ಯಾಪಾರಿಗೆ ಪ್ರತಿವಾರ 7 ಸಾವಿರ ದಿಂದ 50 ಸಾವಿರ ರು. ವರಗೆ ಬಹುಮಾನ ನೀಡಲಾಗುತ್ತದೆ. ಲಕ್ಕಿ ಗ್ರಾಹಕ ಯೋಜನೆ ಹಾಗೂ ಡಿಜಿ ಧನ್ ವ್ಯಾಪಾರಿ ಯೋಜನೆಗಳಡಿ ಏಪ್ರಿಲ್ 14 ರವರೆಗೆ ಮೆಗಾ ಬಹುಮಾನ ಕೂಡ ನೀಡಲಾಗುತ್ತದೆ.