ಕ್ಯಾಷ್‍ಲೆಸ್ ಭಾರತಕ್ಕೆ Rupay Card ವರದಾನ

ಈ ಸುದ್ದಿಯನ್ನು ಶೇರ್ ಮಾಡಿ

Rupay-Card

> ಡಿ.ಪುಷ್ಪಾ 

500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸುವ ಮೂಲಕ ಆರ್ಥಿಕ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ಭಾರತದಲ್ಲಿ ಹೊಸ ಶಕೆ ಆರಂಭವಾಗಿದೆ. ಈ ಹಿಂದೆಯೂ ಕೆಲವು ನೋಟುಗಳ ರದ್ಧತಿಯನ್ನು ಸರ್ಕಾರ ಮಾಡಿತ್ತಾದರೂ ಈ ಮಟ್ಟದ ದೊಡ್ಡ  ಬದಲಾವಣೆಗೆ ನಾಂದಿ ಹಾಡಿರಲಿಲ್ಲ. ಆದರೆ ಪ್ರಧಾನಿ ಮೋದಿಯವರು ಕಾಳ ಧನ ನಿಯಂತ್ರಣಕ್ಕೆ ಇಂತಹ ದಾರಿ ಕಂಡುಕೊಂಡಿ ರುವುದಾಗಿ ಘೋಷಿಸಿದ್ದಾರೆ. ಆದರೆ ಅಗತ್ಯ ಎಲ್ಲ ವ್ಯವಹಾರಕ್ಕೂ ಬೇಕಿದ್ದ 500 ಹಾಗೂ 1000ರೂ ಮುಖಬೆಲೆಯ ನೋಟುಗಳಿಲ್ಲದೆ ಜನ ತೊಂದರೆಗೆ ಸಿಲುಕಿರುವ ಜತೆಗೆ ದಿನನಿತ್ಯದ ಎಲ್ಲಾ ಸಾಮಾನು ಖರೀದಿ ಸೇರಿದಂತೆ ಇನ್ನಿತರೆ ಕೆಲಸಗಳಿಗೆ ಬೇಕಾದಷ್ಟು ಹಣವನ್ನು ಬ್ಯಾಂಕಿನಿಂದ  ಎಟಿಎಂನಿಂದ ಪಡೆಯಲಾಗದೆ ಇರುವ ಈ ದಿನಗಳಲ್ಲಿ ಎಲ್ಲಾ ಕಡೆ ಹಣದ ಬದಲಿಗೆ ಪ್ಲ್ಯಾಸ್ಟಿಕ್ ಹಣ ಚಲಾವಣೆ ಅನಿವಾರ್ಯವಾಗಿದೆ.

ಪ್ಲ್ಯಾಸ್ಟಿಕ್ ಹಣ (ಕಾರ್ಡ್‍ಗಳ) ಬಳಕೆ ಎಲ್ಲೆಡೆ ವ್ಯಾಪಿಸಿದ್ದರೂ ಕಳೆದ ಕೆಲವು ದಿನಗಳ ಹಿಂದೆಯೇ  ಈ ಮೂಲಕ ವ್ಯವಹಾರಕ್ಕೆ ಅನುಕೂಲವಾಗುವಂತೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಸಹ ಮುಂದಾಗಿತ್ತು. ಅಂತಾರಾಷ್ಟ್ರೀಯ ಬ್ಯಾಂಕ್‍ಗಳು ಈ ವ್ಯವಹಾರಕ್ಕೆ ಇಂಬು ನೀಡಲು ಈಗಾಗಲೇ ವೀಸಾ, ಮಾಸ್ಟರ್ ಕಾರ್ಡ್ ಪರಿಚಯಿಸಿದೆ. ಇದು ಶ್ರೀಮಂತ ಹಾಗೂ ಮಧ್ಯಮ ವರ್ಗದವರಿಗೆ ಮಾತ್ರ ಕೈಗೆಟುಕುತ್ತಿದ್ದರಿಂದ ಬ್ಯಾಂಕಿನ ವ್ಯವಹಾರದೊಂದಿಗೆ ಪ್ಲ್ಯಾಸ್ಟಿಕ್ ಮನಿ ಕೆಳವರ್ಗಕ್ಕೆ ಅಷ್ಟೇನೂ ಪರಿಚಯವೇ ಇರಲಿಲ್ಲ.

ಜನ್‍ಧನ್ ಸೇರಿದಂತೆ ಇನ್ನಿತರ ಖಾತೆಗಳನ್ನು  ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪುವಂತೆ ಮಾಡಿ ಕ್ಯಾಷ್‍ಲೆಸ್ ಆಗಿ ದಿನನಿತ್ಯದ ವ್ಯವಹಾರಕ್ಕೂ ಮುನ್ನಡಿ ಬರೆಯಲು ಚಿಂತನೆ ನಡೆಸಿ ಭಾರತೀಯ ಆರ್ಥಿಕ ತಜ್ಞರು ಮತ್ತು ಆರ್‍ಬಿಐ ರೂಪಿಸಿರುವ Rupay Card ಹೆಚ್ಚಿನ  ಹಣ ವ್ಯವಹಾರಕ್ಕೆ ಬಳಕೆಯಾಗಲು ಅರ್ಹತೆ ಹೊಂದಿದ್ದು, ಒಂದು ರೀತಿಯಲ್ಲಿ ಕ್ಯಾಷ್‍ಲೆಸ್ ವ್ಯವಹಾರಕ್ಕೆ ವರದಾನ ಎನ್ನಬಹುದು.

ಭಾರತದಲ್ಲಿ ನಡೆದಿರುವ ಆರ್ಥಿಕ ಕ್ಷೇತ್ರದ ಬದಲಾವಣೆಯಿಂದಾಗಿ ದೇಶ ಎಂದು ಕ್ಯಾಷ್ ಟ್ರ್ಯಾನ್ಸ್ಯಾಕ್ಷನ್‍ನಿಂದ ಎಲೆಕ್ಟ್ರಾನಿಕ್ ವ್ಯವಹಾರದತ್ತ  ಮುನ್ನುಗ್ಗುತ್ತಿದೆ. ಡೆಬಿಟ್ ಹಾಗೂ ಕ್ರೆಡಿಟ್ ಬಳಕೆಯಿಂದ ಹಣ ವರ್ಗಾವಣೆಯ ಇಂತಿಷ್ಟು ಶುಲ್ಕವನ್ನು ಪಾವತಿ ಮಾಡಬೇಕಾಗಿತ್ತು. ಬಹಳಷ್ಟು ಕಡೆ ವ್ಯಾಪಾರಸ್ಥರು ಈ ಶುಲ್ಕ ಪಾವತಿಸುತ್ತಿದ್ದರು. ಅಂತಾರಾಷ್ಟ್ರೀಯ ಕಂಪೆನಿಗಳಾದ ವೀಸಾ, ಮಾಸ್ಟರ್‍ಕಾರ್ಡ್, ಅಮೆರಿಕನ್ ಎಕ್ಸ್‍ಪ್ರೆಸ್‍ನಂತಹ ಕಂಪೆನಿಗಳು ಎಟಿಎಂ ಕಾರ್ಡನ್ನು ವೀಸಾ ಲೇಬಲ್‍ನೊಂದಿಗೆ ಬ್ಯಾಂಕ್ ಮೂಲಕ ವಿತರಿಸುತ್ತಿತ್ತು. ಅಂತಹ ಬ್ಯಾಂಕ್‍ಗಳು ವೀಸಾ ನೆಟ್‍ವರ್ಕ್ ಸೌಲಭ್ಯವನ್ನು ನೀಡುತ್ತಿದ್ದವು. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್‍ಗಳು ಕಂಪೆನಿಗೆ  ಅತ್ಯಲ್ಪ ಶುಲ್ಕವನ್ನು ಪ್ರತಿ ಟ್ಯಾನ್ಸ್ಯಾಕ್ಷನ್ ಮೇಲೆ ಪಾವತಿಸುತ್ತಿದ್ದವು. ಅದನ್ನು ಬ್ಯಾಂಕ್‍ಗಳು ವ್ಯಾಪಾರಸ್ಥರಿಂದ ಮತ್ತೆ ಹಿಂಪಡೆಯುತ್ತಿದ್ದವು.

ಇಂತಹ ವಹಿವಾಟಿನಿಂದಾಗಿ ವಿದೇಶದ ಕಂಪೆನಿಗಳು ಹೆಚ್ಚು ಲಾಭ ಗಳಿಸುತ್ತಿದ್ದವು.  ಇದೀಗ ಆರ್‍ಬಿಐ ಪರಿಚಯಿಸಿರುವ Rupay Cardಗಳ ಟೆಕ್ನಾಲಜಿಯನ್ನು ಎನ್‍ಪಿಸಿಐ (ನ್ಯಾಷನಲ್ ಪೇಮೆಂಟ್ ಕಾಪೆರ್Çೀರೇಷನ್ ಆಫ್ ಇಂಡಿಯಾ)ಯ ಮಾರ್ಗದರ್ಶಿ ಸೂತ್ರಗಳೊಂದಿಗೆ  ಈ ಕಾರ್ಡ್‍ಗಳನ್ನು ಗ್ರಾಹಕರ  ಅನುಕೂಲಕ್ಕೆ ಬಿಡುಗಡೆ ಮಾಡಲಾಗಿದೆ. Rupay Card  ಇತರ ವೀಸಾ, ಮಾಸ್ಟರ್ ಕಾರ್ಡ್ ರೀತಿಯಲ್ಲೇ ಕಾರ್ಯನಿರ್ವಹಿಸಲಿದ್ದು, ಇದನ್ನು ರಿಸರ್ವ್ ಬ್ಯಾಂಕ್ ನಿರ್ವಹಣೆ ಮಾಡುತ್ತದೆ.

ಬಹಳಷ್ಟು ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್‍ಗಳು Rupay Card  ಗಳನ್ನು ಅವರ ಗ್ರಾಹಕರಿಗೆ  ನೀಡುತ್ತಿದ್ದು,ಅದರಲ್ಲೂ ಪ್ರಧಾನಮಂತ್ರಿ ಜನ್‍ಧನ್ ಯೋಜನೆಯಡಿ ತೆರೆಯಲಾಗಿರುವ ಜನ್‍ಧನ್ ಖಾತೆ ಹೊಂದಿರುವವರಿಗೂ ಈ ಕಾರ್ಡ್‍ಗಳ ಸೌಲಭ್ಯ ಒದಗಿಸಿ ದೇಶಾದ್ಯಂತ Rupay Card  ಗಳ ಮಾರುಕಟ್ಟೆಯನ್ನು ವಿಸ್ತರಿಸಲಾಗಿದೆ. ಈ ಕಾರ್ಡ್‍ಗಳಿಂದ ಬಹಳಷ್ಟು ಪ್ರಯೋಜನಗಳಿದ್ದು, ಇದರಲ್ಲಿ ಪ್ರಮುಖವಾಗಿ ಟ್ರ್ಯಾನ್ಸ್ಯಾಕ್ಷನ್ ಮೇಲೆ ವಿಧಿಸುವ ಶುಲ್ಕ ಅತಿ ಕಡಿಮೆಯಾಗಿರುವುದರಿಂದ ಮಧ್ಯಮ ಹಾಗೂ ಬಡವರು ಬಳಸಲು ಯೋಗ್ಯವಾಗಿದೆ.

ವೀಸಾ, ಮಾಸ್ಟರ್‍ಕಾರ್ಡ್, ಅಮೆಕ್ಸ್ ಕಾರ್ಡ್‍ಗಳ ಮೂಲಕ ಟ್ರ್ಯಾನ್ಸ್ಯ್‍ಕ್ಷನ್ ಮೇಲೆ ಶೇ.1.9ರಷ್ಟು  ವಿಧಿಸುತ್ತಿದ್ದ ಶುಲ್ಕವನ್ನು Rupay Cardಕೇವಲ ಶೇ.0.01ರಷ್ಟು ಶುಲ್ಕದೊಂದಿಗೆ ವ್ಯವಹಾರ ನಡೆಸುತ್ತದೆ.

ಈ ಶುಲ್ಕವು ರಿಸರ್ವ್ ಬ್ಯಾಂಕ್‍ಗೆ ಪಾವತಿ ಯಾಗುತ್ತದೆ. ಅದೆಲ್ಲದಕ್ಕಿಂತ  ಪ್ರಮುಖವಾಗಿ ಈ ಟ್ರ್ಯಾನ್ಸ್ಯಾಕ್ಷನ್ ನಿಂದ ಪಡೆಯುವ ಶುಲ್ಕ ಭಾರತದಲ್ಲೇ  ಉಳಿಯುವುದರಿಂದ ವಿದೇಶಕ್ಕೆ ನಮ್ಮ ಹಣ ಹರಿಯುವುದು ತಪ್ಪುತ್ತದೆ. ಮುಂದಿನ ದಿನಗಳಲ್ಲಿ ಎಂಪಿಸಿಐ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪರಿಚಯಿಸಲು ಮುಂದಾಗುತ್ತಿದೆ. ಇದರಿಂದ ದೇಶ-ವಿದೇಶ ಬ್ಯಾಂಕ್‍ಗಳಲ್ಲೂ ್ಕ Rupay Card  ಗಳನ್ನು ಬಳಕೆ ಮಾಡಲಾಗುತ್ತದೆ. ಇದರಿಂದ ಅನುಕೂಲವಾಗುವುದು ಮತ್ತೆ ನಮಗೇ.

ಇವೆಲ್ಲ ಕಾರ್ಡಿನ ವೈಶಿಷ್ಟ್ಯ ಎಂಬುದು ಅರಿತು ಇದರ ಬಳಕೆಗೆ ಮುಂದಾಗಬೇಕಿದೆ. ದೇಶಾದ್ಯಂತ ನೋಟುಗಳ ರದ್ಧತಿ ಹಿನ್ನೆಲೆಯಲ್ಲಿ ಕ್ಯಾಷ್‍ಲೆಸ್ ವ್ಯವಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕಾಗಿ ಇದೀಗ ಆರ್‍ಬಿಐ ಕಾರ್ಡ್‍ಗಳ ಮೂಲಕ ನಡೆಸುವ 2 ಸಾವಿರದವರೆಗಿನ ವ್ಯವಹಾರಕ್ಕೆ ಯಾವುದೇ ಶುಲ್ಕ ಪಡೆಯುತ್ತಿಲ್ಲ. 2 ಸಾವಿರ ಮೇಲ್ಪಟ್ಟ ವ್ಯವಹಾರಕ್ಕೆ ಕಡಿಮೆ ದರದ ಶುಲ್ಕ ವಿಧಿಸುವುದರಿಂದ ಕ್ಯಾಷ್‍ಲೆಸ್ ಭಾರತಕ್ಕೆ Rupay Card   ಒಂದು ಉತ್ತಮ ವ್ಯವಹಾರಿಕ ಮುನ್ನಡೆಯಾಗಲಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Facebook Comments

Sri Raghav

Admin