ಕ್ಲೈಮಾಕ್ಸ್ ತಲುಪಿದ ಬಿಜೆಪಿ ಬಯಲಾಟ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-And-Eshwarapaಗಳೂರು,ಏ.29-ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಇದೀಗ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ. ತಮ್ಮ ನಾಯಕತ್ವದ ವಿರುದ್ಧ ಬಂಡೆದ್ದ ಭಿನ್ನಮತೀಯರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದ ಯಡಿಯೂರಪ್ಪನವರಿಗೆ ವರಿಷ್ಠರು ಬ್ರೇಕ್ ಹಾಕಿದ್ದು ಬಿಕ್ಕಟ್ಟು ಪರಿಹರಿಸಲು ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್‍ಗೆ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜೆ ಪಕ್ಷದ ಕಚೇರಿಯಲ್ಲಿ ಯಡಿಯೂರಪ್ಪ ಮುರಳೀಧರ್ ರಾವ್ ಮುಖಾಮುಖಿಯಾಗಲಿದ್ದಾರೆ.  ಮತ್ತೊಂದೆಡೆ ಭಿನ್ನಮತೀಯ ನಾಯಕ ಹಾಗೂ ಬಿಎಸ್‍ವೈ ಕೆಂಗೆಣ್ಣಿಗೆ ಗುರಿಯಾಗಿರುವ ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟ್ಟಿದ್ದಾರೆ. ಮೂಲಗಳ ಪ್ರಕಾರ ಸಂಜೆ ನಡೆಯಲಿರುವ ಸಭೆಗೆ ಈಶ್ವರಪ್ಪ ಕೂಡ ಹಾಜರಾಗುವ ಸಂಭವವಿದೆ. ಆದರೆ ಈವರೆಗೂ ಅಧಿಕೃತಗೊಂಡಿಲ್ಲ.ಬೆಂಗಳೂರಿನತ್ತ ಬಿಎಸ್‍ವೈ: ಇನ್ನು ನಿನ್ನೆ ಸಂಜೆ ವರಿಷ್ಠರ ಭೇಟಿಗೆಂದು ನವದೆಹಲಿಗೆ ತೆರಳಿದ್ದ ಯಡಿಯೂರಪ್ಪ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಜಮ್ಮುಕಾಶ್ಮೀರ ಪ್ರವಾಸದಲ್ಲಿರುವ ಕಾರಣ ಭೇಟಿ ಸಾಧ್ಯವಾಗಿಲ್ಲ.   ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‍ಲಾಲ್‍ಗೆ ಮಾತ್ರ ಈಶ್ವರಪ್ಪ , ಬಿ.ಎಲ್.ಸಂತೋಷ್ ಹಾಗೂ ಭಿನ್ನಮತೀಯ ನಾಯಕರ ವಿರುದ್ಧ ದೂರು ನೀಡಿದ್ದಾರೆ.   ಈ ದೂರಿನನ್ವಯ ರಾಮ್‍ಲಾಲ್, ಮುರುಳೀಧರ್‍ರಾವ್ ಜೊತೆ ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹರಿಸಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಇದರನ್ವಯ ಸಂಜೆ ಮುರುಳೀಧರ್ ನಗರಕ್ಕೆ ಆಗಮಿಸುತ್ತಿದ್ದು , ಉಭಯ ಬಣಗಳ ನಡುವೆ ಸಂಧಾನ ನಡೆಸಲಿದ್ದಾರೆ. ಇನ್ನು ನವದೆಹಲಿಯಲ್ಲಿ ಮಾತನಾಡಿರುವ ಯಡಿಯೂರಪ್ಪ , ಪಕ್ಷ ವಿರೋಧಿ ನಡೆಸುತ್ತಿರುವ ಈಶ್ವರಪ್ಪ ವಿರುದ್ದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.   ಇತ್ತ ಶಿವಮೊಗ್ಗದಲ್ಲಿ ಈಶ್ವರಪ್ಪ ಕೂಡ ಸಂಧಾನದ ಬಾಗಿಲು ಈಗಲೂ ಮುಚ್ಚಿಲ್ಲ ಎನ್ನುವ ಮೂಲಕ ಮಾತುಕತೆಗೆ ಸಿದ್ಧ ಎನ್ನುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಅನಗತ್ಯವಾಗಿ ಸಂತೋಷ್ ವಿರುದ್ದ ಆರೋಪಿಸಿರುವ ಬಿಎಸ್‍ವೈ ಕ್ಷಮೆ ಕೇಳಬೇಕು, ಹಿರಿಯರ ಜೊತೆ ಮಾತುಕತೆ ನಡೆಸಿದರೆ ಸಮಸ್ಯೆ ತನ್ನಿಂದ ತಾನೇ ಇತ್ಯರ್ಥವಾಗುತ್ತದೆ. ಯಡಿಯೂರಪ್ಪ ಕಳೆದುಕೊಳ್ಳುವುದು ಏನೂ ಇಲ್ಲ ಎಂದು ಹೇಳುವ ಮೂಲಕ ಕಳೆದೆರಡು ದಿನಗಳಿಂದ ಬುಸುಗುಡುತ್ತಿದ್ದ ಈಶ್ವರಪ್ಪ ತುಸು ಮೆತ್ತಗಾದಂತೆ ಕಾಣಿಸುತ್ತಿದೆ.   ಇನ್ನು ಕೇಂದ್ರ ವರಿಷ್ಠರು ಕೂಡ ಕರ್ನಾಟಕದ ಬೆಳವಣಿಗೆಗಳನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳದೆ , ನಿಮ್ಮ ಸಮಸ್ಯೆಯನ್ನು ನೀವೇ ಕುಳಿತು ಪರಿಹರಿಸಿಕೊಳ್ಳಬೇಕು, ಸಣ್ಣಪುಟ್ಟ ವಿಷಯಗಳಿಗೆ ದೆಹಲಿಯವರೆಗೂ ಬರಬೇಡಿ ಎಂದು ತಾಕೀತು ಮಾಡಿದ್ದಾರೆ.  ಒಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಬಿಜೆಪಿಯ ಭಿನ್ನಮತ ನಿರ್ಣಾಯಕ ಘಟ್ಟ ತಲುಪಿದ್ದು , ಯಾರ ಕೈ ಮೇಲಾಗಿ ಇನ್ಯಾರಿಗೆ ಹೊಡೆತ ಬೀಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin