ಕ್ಷೀರ ಕ್ರಾಂತಿಗೆ ಮುಂದಾದ ಸರ್ಕಾರ : ವೀರೇಂದ್ರ ಹೆಗ್ಗಡೆ ನಂದಿನಿ ಬ್ರ್ಯಾಂಡ್ ಅಂಬಾಸಿಡರ್

ಈ ಸುದ್ದಿಯನ್ನು ಶೇರ್ ಮಾಡಿ

Nandini-01

ಬೆಂಗಳೂರು, ಆ.31- ರಾಜ್ಯಾದ್ಯಂತ ಬರಗಾಲದ ಛಾಯೆ ಆವರಿಸುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಕ್ಷೀರ ಕ್ರಾಂತಿಯ ಮೂಲಕ ರೈತರ ನೆರವಿಗೆ ಧಾವಿಸಲು ನಿರ್ಧರಿಸಿದ್ದು, ಇದೇ ಕಾರಣಕ್ಕಾಗಿ ಹಾಲಿನ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಮೂಲಕ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಗೆ ಸಜ್ಜಾಗಿದೆ.   ಇದೇ ಕಾಲಕ್ಕೆ ರಾಜ್ಯದ ಆಂತರಿಕ ಮಾರುಕಟ್ಟೆಯಲ್ಲಿ ನಂದಿನಿ ಹಾಲಿನ ಮಾರಾಟ ಹೆಚ್ಚಿಸಲು ನಂದಿನಿ ಹಾಲಿಗೆ ನೂತನ ಬ್ರ್ಯಾಂಡ್ ಅಂಬಾಸಿಡರ್(ಪ್ರಚಾರ ರಾಯಭಾರಿ) ಆಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ನೇಮಿಸಲು ತೀರ್ಮಾನಿಸಿದೆ. ಪಶು ಸಂಗೋಪನಾ ಸಚಿವ ಎ.ಮಂಜು ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸದ್ಯಕ್ಕೆ 76 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಇದನ್ನು 1 ಕೋಟಿ ಲೀಟರ್ಗೇರಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಕ್ಷೀರ ಕ್ರಾಂತಿ ಮಾಡುವ ಮೂಲಕ ರೈತರ ಬದುಕಿಗೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸುವುದು, ಈ ಮೂಲಕ ಬರಗಾಲ ಪರಿಸ್ಥಿತಿಯನ್ನು ಎದುರಿಸಲು ಅನುಕೂಲ ಮಾಡಿಕೊಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.  ಕ್ಷೀರ ಭಾಗ್ಯ ಯೋಜನೆ ಮೂಲಕ ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು ಪೂರೈಕೆ ಮಾಡುತ್ತಿದ್ದು, ಇದರಿಂದಾಗಿ ಪೌಡರ್ ಮತ್ತಿತರ ಬಳಕೆಗಾಗಿ 10 ಲಕ್ಷ ಲೀಟರ್ ಹಾಲು ಬಳಸಲಾಗುತ್ತಿದೆ ಎಂದು ಹೇಳಿದರು. ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನದ ಪ್ರಮಾಣ ಹೆಚ್ಚಳವಾಗಿರುವುದರಿಂದ ಹಾಲಿನ ಉತ್ಪಾದನೆ ಹೆಚ್ಚಿದೆ. ಆದರೆ ಮುಂದಿನ ದಿನಗಳಲ್ಲಿ ಕೃಷಿಯನ್ನೇ ನಂಬಿಕೊಂಡು ರೈತರು ಜೀವನ ಮಾಡುವುದು ಕಷ್ಟ ಎಂಬ ಕಾರಣಕ್ಕಾಗಿ ಪಶುಸಂಗೋಪನೆಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.

ಕ್ಷೀರ ಕ್ರಾಂತಿ ಮಾಡಿ ಹಾಲಿನ ಉತ್ಪಾದನೆ ಪ್ರಮಾಣವನ್ನು ಸುಮಾರು ಒಂದು ಕೋಟಿ ಲೀಟರ್ಗೆ ಏರಿಸಬೇಕು. ಆಂತರಿಕ ಮಾರುಕಟ್ಟೆಯಲ್ಲಿ ನಂದಿನಿ ಹಾಲನ್ನು ಹೆಚ್ಚು ಬಳಕೆ ಮಾಡಲು ಜನರನ್ನು ಕೋರಿಕೊಳ್ಳಬೇಕು ಎಂದು ನಿರ್ಧರಿಸಲಾಗಿದೆ.  ನಂದಿನಿ ಹಾಲಿನ ನೂತನ ಪ್ರಚಾರ ರಾಯಭಾರಿ ಆಗಿ ವೀರೇಂದ್ರ ಹೆಗ್ಗಡೆಯವರ ನೇಮಕ ಮಾಡಲು ನಿರ್ಧರಿಸಲಾಗಿದ್ದು, ಈಗಾಗಲೇ ಅವರೊಂದಿಗೆ ಮಾತುಕತೆ ಕೂಡ ಮಾಡಲಾಗಿದೆ ಎಂದು ಹೇಳಿದ ಅವರು, ಆರು ಕೋಟಿ ಹೆಚ್ಚು ಜನರಿರುವ ಕರ್ನಾಟಕದಲ್ಲಿ ಹಾಲು ಮಾರಾಟಕ್ಕೆ ಹೆಚ್ಚಿನ ಅನುಕೂಲ ಒದಗಿಸಲಾಗುವುದು ಎಂದರು.

ಹೆಚ್ಚುವರಿಯಾಗಿ ಹಾಲು ಉತ್ಪಾದನೆಯಾದರ ಈಗ ಯಾವ ಸಮಸ್ಯೆಯೂ ಇಲ್ಲ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹಾಲನ್ನು ಕೆಡದಂತೆ ಆರು ತಿಂಗಳಷ್ಟು ಕಾಲ ಶೇಖರಿಸಿಡಬಹುದು. ಅದಕ್ಕಾಗಿ ಯುಎಚ್ಟಿ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ತಿಳಿಸಿದರು. ಈ ವರ್ಷ ರಾಜ್ಯದ 30 ಸಾವಿರ ಜನರಿಗೆ ಪಶು ಭಾಗ್ಯ ಯೋಜನೆಯಡಿ ತಲಾ 1.2 ಲಕ್ಷ ರೂ. ಸಹಾಯಧನ ಒದಗಿಸಲು ಸರ್ಕಾರ ತೀರ್ಮಾನಿಸಿದೆ. ಯೋಜನೆ ಯಶಸ್ವಿಯಾಗಿ ಫಲಾನುಭವಿಗಳನ್ನು ಲಾಟರಿ ಪದ್ಧತಿ ಮೂಲಕ ಆಯ್ಕೆ ಮಾಡುವ ಬದಲು ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆಯ್ಕೆ ಮಾಡಲಾಗುವುದು ಎಂದು ಹೇಳಿದರು. ಪಶುಸಂಗೋಪನಾ ಇಲಾಖೆಗೆ ಅಗತ್ಯವಾದ 650 ಪಶುವೈದ್ಯರ ನೇಮಕಾತಿ ಪ್ರಕ್ರಿಯೆ ಮುಗಿದಿದ್ದು, ನ್ಯಾಯಾಲಯದಲ್ಲಿರುವ ತಡೆಯಾಜ್ಞೆಯಿಂದ ನೇಮಕಾತಿ ವಿಳಂಬವಾಗುತ್ತಿದೆ. ಶೀಘ್ರ ತಡೆಯಾಜ್ಞೆ ತೆರವುಗೊಳಿಸಿ ಅಗತ್ಯವಿರುವೆಡೆ ನೇಮಕ ಮಾಡುವುದಾಗಿ ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin