ಖಾಸಗಿ ಆಸ್ಪತ್ರೆಗಳು ಮಾಡುತ್ತಿರುವುದು ಸೇವೆಯೋ-ವ್ಯಾಪಾರವೋ..?
ಬೆಂಗಳೂರು, ಜ.10-ಖಾಸಗಿ ಆಸ್ಪತ್ರೆಗಳು ಮಾಡುತ್ತಿರುವುದು ಸೇವೆಯೋ, ವ್ಯಾಪಾರವೋ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಮಾರು 100 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂಬ ಆಪಾದಿಸುವ ಖಾಸಗಿ ಆಸ್ಪತ್ರೆಗಳು ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿರುವ ಉಚಿತ ಆರೋಗ್ಯ ಸೇವೆಯನ್ನು ಇದೇ 16 ರಿಂದ ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಆದರೆ ಜನರ ಜೀವ ಉಳಿಸುವುದು ಅಮೂಲ್ಯವಾದ ಕೆಲಸ. ಜನರ ಜೀವದ ಜೊತೆ ಖಾಸಗಿ ಆಸ್ಪತ್ರೆಗಳು ಚೆಲ್ಲಾಟವಾಡಬಾರದು. ಈ ಸಮಸ್ಯೆ ಬಗೆಹರಿಸಲು ಯಾರ ಕಾಲಿಗೆ ಬೀಳಲು ಸಿದ್ಧ ಎಂದರು.
ಈ ಕುರಿತು ಸಮಸ್ಯೆಗಳನ್ನು ಬಗೆಹರಿಸಲು ಖಾಸಗಿ ಆಸ್ಪತ್ರೆಗಳ ಜೊತೆ ಮಾತುಕತೆ ನಡೆಸಲು ಸಿದ್ಧ . ಸರ್ಕಾರ ಆರೋಗ್ಯ ಸೇವಾ ಯೋಜನೆಗಳು ಮುಂದುವರೆಸಲು ಸಾಧ್ಯವಿಲ್ಲವಾದರೆ ಜನರ ಹಿತದೃಷ್ಟಿಯಿಂದ ಸರ್ಕಾರವೇ ಪರ್ಯಾಯ ವ್ಯವಸ್ಥೆ ಮಾಡಲಿದೆ ಎಂದರು. ಸರ್ಕಾರದಿಂದ ಬಾಕಿ ಹಣ ಬಿಡುಗಡೆಯಾಗದೆ ವಿಳಂಬವಾಗಿದೆ. ಈ ಬಗ್ಗೆ ಖಾಸಗಿ ಆಸ್ಪತ್ರೆಗಳು ನನ್ನ ಗಮನಕ್ಕೆ ತರದೆ ಏಕಾಏಕಿ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಯಂಪ್ರೇರಿತರಾಗಿ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಹಣಕಾಸು ಇಲಾಖೆ ಶೀಘ್ರವೇ ಸರ್ಕಾರ ನೀಡಬೇಕಿರುವ ಬಾಕಿ ಹಣವನ್ನು ನೀಡುವುದಾಗಿ ಹೇಳಿದ್ದಾರೆ. ನ್ಯಾ.ವಿಕ್ರಮ್ಜಿತ್ ಸೇನ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಖಾಸಗಿ ಆಸ್ಪತ್ರೆಗಳ ದರ ನಿಗದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
Eesanje News 24/7 ನ್ಯೂಸ್ ಆ್ಯಪ್ – Click Here to Download