ಖಾಸಗಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ಮುಷ್ಕರ, ರೋಗಿಗಳ ನರಳಾಟ

ಈ ಸುದ್ದಿಯನ್ನು ಶೇರ್ ಮಾಡಿ

Hospital--002

ಬೆಂಗಳೂರು, ನ.3- ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಸುಮಾರು 40 ಸಾವಿರ ಖಾಸಗಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ಮುಷ್ಕರ ನಡೆಸಿದ್ದರಿಂದ ರೋಗಿಗಳು ಪರದಾಡುವಂತಾಯಿತು.  ಮುಷ್ಕರದ ಬಗ್ಗೆ ಮಾಹಿತಿ ಇಲ್ಲದವರು ಚಿಕಿತ್ಸೆಗೆಂದು ಬಂದು ಆಸ್ಪತ್ರೆಗಳ ಮುಂದೆ ಅಂಟಿಸಿದ್ದ ನೋಟಿಸ್ ನೋಡಿ ಹಿಂದಿರುಗುತ್ತಿದ್ದುದು ಕಂಡುಬಂತು. ಜತೆಗೆ ವೈದ್ಯರ ಮುಷ್ಕರಕ್ಕೆ ಹಲವೆಡೆ ಆಕ್ರೋಶವೂ ವ್ಯಕ್ತವಾಗಿದೆ.

ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಜಿಲ್ಲಾ ಕುಂದು-ಕೊರತೆ ಸಮಿತಿ ರಚನೆ ಹಾಗೂ ಚಿಕಿತ್ಸಾ ವೈಫಲ್ಯ ಅಥವಾ ರೋಗಿ ಆಸ್ಪತ್ರೆ ವೆಚ್ಚ ಏರುಪೇರಾದಲ್ಲಿ ಜೈಲು ಶಿಕ್ಷೆ ವಿಧಿಸುವ ಅಂಶ ಮಸೂದೆಯಲ್ಲಿರುವುದನ್ನು ವಿರೋಧಿಸಿ ವೈದ್ಯರು ಒಂದು ದಿನದ ಮುಷ್ಕರ ನಡೆಸಿದ್ದಾರೆ. ಆದರೆ, ರೋಗಿಗಳು ಇದರಿಂದ ಪರದಾಡುವಂತಾಗಿದೆ. ವೈದ್ಯಕೀಯ ಸೇವೆ ಅಗತ್ಯ ಸೇವೆಯಾಗಿದ್ದು, ಮುಷ್ಕರದಿಂದ ಸಾಕಷ್ಟು ತೊಂದರೆಯಾಗಿದೆ. ಗರ್ಭಿಣಿಯರಿಗೆ ತುರ್ತು ಸೇವೆ, ಒಳರೋಗಿಗಳ ಸೇವೆ ಹೊರತುಪಡಿಸಿ ಹೊರರೋಗಿಗಳ ಚಿಕಿತ್ಸೆ ಪೂರ್ವ ನಿರ್ಧರಿತ ಭೇಟಿ ರದ್ದುಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದು ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ರವೀಂದ್ರ ತಿಳಿಸಿದರು.

ಇಂದು ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ವೈದ್ಯೇತರ ಸಿಬ್ಬಂದಿಗೆ ರಜೆ ರದ್ದು ಮಾಡಿದ್ದರೂ ಕೂಡ ರೋಗಿಗಳು ತೊಂದರೆ ಅನುಭವಿಸುವಂತಾಯಿತು. ಬೆಂಗಳೂರು ಮಹಾನಗರ, ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಚಿಕ್ಕಮಗಳೂರು, ಬೀದರ್, ಬಳ್ಳಾರಿ, ಗುಲ್ಬರ್ಗ, ಬಿಜಾಪುರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬಂದ ರೋಗಿಗಳು ವೈದ್ಯರಿಲ್ಲದೆ ಆತಂಕಕ್ಕೊಳಗಾಗಿ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದರು.

ಬೆಂಗಳೂರಿನ ಸಾವಿರಾರು ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ಮೈಸೂರಿನ 200ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದರಿಂದ ರೋಗಿಗಳ ಪರದಾಟ ಹೇಳತೀರದಾಗಿತ್ತು. ತುಮಕೂರಿನಲ್ಲಿ ಎಲ್ಲ ಕ್ಲಿನಿಕ್‍ಗಳು, ನರ್ಸಿಂಗ್ ಹೋಮ್‍ಗಳು, ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದವು. ಮುಷ್ಕರದ ಮಾಹಿತಿ ಇಲ್ಲದೆ ಆಸ್ಪತ್ರೆಗೆ ಬಂದವರ ಪರಿಸ್ಥಿತಿ ಹೇಳತೀರದಾಗಿತ್ತು. ಡೆಂಘೀ, ವೈರಲ್, ಜ್ವರ, ಕೆಮ್ಮು, ಕಫ, ಗರ್ಭಿಣಿಯರು ಹೀಗೆ ಬಹುತೇಕ ಜನ ವೈದ್ಯರ ಮುಷ್ಕರದಿಂದ ಆತಂಕಕ್ಕೊಳಗಾಗಿದ್ದರು.

ಬಾಗಲಕೋಟೆ:

ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದ ಹಿನ್ನೆಲೆ ಹೆರಿಗೆಗೆಂದು ಬಂದ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿರುವ ಅಮಾನವೀಯ ಘಟನೆ ಇಲ್ಲಿನ ಹುನಗುಂದ ತಾಲೂಕಿನ ಇಳಕಲ್ಲು ಪಟ್ಟಣದಲ್ಲಿ ನಡೆದಿದೆ. ತಾಲೂಕಿನ ಚಿಕ್ಕಕೊಡಗಲಿ ತಾಂಡ್ಯಾದ ಚೈತ್ರಾ (25) ಎಂಬುವರು ಇಳಕಲ್‍ನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗೆ ಕರೆತರಲಾಗಿತ್ತು. ಖಾಸಗಿ ವೈದ್ಯರ ಮುಷ್ಕರದಿಂದಾಗಿ ಹೆರಿಗೆ ಮಾಡಲು ವೈದ್ಯರು ನಿರಾಕರಿಸಿದ್ದಾರೆ. 108 ಆ್ಯಂಬುಲೆನ್ಸ್ ವಾಹನದಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾಗ ಚೈತ್ರಾಳ ಸ್ಥಿತಿ ಗಂಭೀರವಾಗಿದೆ. ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ವೈದ್ಯರು ಮಾನವೀಯತೆ ಮರೆತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇಂತಹ ಹಲವು ಘಟನೆಗಳು ರಾಜ್ಯದ ವಿವಿಧೆಡೆ ನಡೆದಿವೆ.

ಮೈಸೂರು:

ನಗರದ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿರುವ ವೈದ್ಯರು ಜೆಕೆ ಮೈದಾನದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸುಮಾರು ಎರಡು ಸಾವಿರ ಮಂದಿ ವೈದ್ಯರು ಇಂದು ಕಾರ್ಯನಿರ್ವಹಿಸಲಿಲ್ಲ. ತುರ್ತು ಚಿಕಿತ್ಸೆ ಹಾಗೂ ಗರ್ಭಿಣಿಯರಿಗೆ ಚಿಕಿತ್ಸೆ ಮಾಡಲಾಯಿತು. ಇದರ ಹೊರತಾಗಿ ಹೊರರೋಗಿಗಳನ್ನು ಪರಿಗಣಿಸಲಿಲ್ಲ. ವಿಜಯಪುರ, ಗುಲ್ಬರ್ಗ, ಬಾಗಲಕೋಟೆ, ಬಳ್ಳಾರಿ, ಧಾರವಾಡಗಳಲ್ಲಿ ಮುಷ್ಕರದಿಂದ ರೋಗಿಗಳ ಪರದಾಟ ಕಂಡುಬಂತು.

ದಕ್ಷಿಣ ಕನ್ನಡ:

ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ವೈದ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.ಯಾವುದೇ ಪರಿಸ್ಥಿತಿ ಎದುರಿಸಲು ಸರ್ಕಾರಿ ವೈದ್ಯರು ಸಜ್ಜಾಗಿದ್ದಾರೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಚಿಕಿತ್ಸೆಗಾಗಿ ಸಜ್ಜುಗೊಳಿಸಲಾಗಿದೆ.  ಯಾವುದೇ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಈಗಾಗಲೇ ಸೂಚನೆ ನೀಡಿದೆ.

Facebook Comments

Sri Raghav

Admin