ಖಿನ್ನತೆಗೊಳಗಾಗಿದ್ದ ದೀಪಿಕಾ ಪಡುಕೋಣೆ ಅದರಿಂದ ಹೊರ ಬಂದಿದ್ದು ಹೇಗೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Deepika-c-01
ಚೆನ್ನೈ ಎಕ್ಸ್‍ಪ್ರೆಸ್, ಬಾಜಿರಾವ್ ಮಸ್ತಾನಿ, ಪದ್ಮಾವತಿಯಂಥ ಅನೇಕ ಯಶಸ್ವೀ ಸಿನಿಮಾಗಳಲ್ಲಿ ಸೊಂಟ ಬಳುಕಿಸಿದ ಕೋಲ್ಮಿಂಚಿನ ಬಳ್ಳಿ ದೀಪಿಕಾ ಪಡುಕೋಣೆ ಎಂಬ ಕನ್ನಡದ ಬೆಡಗಿ ಒಮ್ಮೆ ಕಣ್ಣು ಮಿಟುಕಿಸಿದರೆ ಅದೆಷ್ಟು ಹೃದಯಗಳು ವಿಲವಿಲನೆ ಒದ್ದಾಡಿ ನಿದ್ದೆಗೆಡುತ್ತವೊ…?  ದೀಪೀಕಾಳ ಒಂದು ಕಣ್ ನೋಟ ಅದೆಷ್ಟು ಅಭಿಮಾನಿಗಳ ಧೃತಿಗೆಡಿಸುತ್ತದೆ. ಬಾಲಿವುಡ್‍ನಲ್ಲಿ ಮಾತ್ರವಲ್ಲ. ಹಾಲಿವುಡ್‍ನಲ್ಲೂ ಹೇಮಾಹೇಮಿ ನಟಪುಂಗವರು ಈ ಕರ್ನಾಟಕದ ಬಳ್ಳಿ ಮಿಂಚಿನ ಪ್ರಖರತೆಗೆ ಫಿದಾ ಆಗಿ ಹೋಗಿದ್ದಾರೆ ಎಂಬುದೇನೂ ಉತ್ಪ್ರೇಕ್ಷೆಯ ಮಾತಲ್ಲ.  ಅದಿರಲಿ, ಇಂತಪ್ಪಾ ದೀಪಿಕಾ ಪಡುಕೋಣೆಯೆಂಬ ಪಡುಕೋಣೆ 2014ರ ಫೆಬ್ರವರಿಯಲ್ಲಿ , ಅಂದರೆ ನಟನೆಯ ಉಚ್ರಾಯ ಸ್ಥಿತಿಯಲ್ಲಿರುವಾಗಲೇ ಇದ್ದಕ್ಕಿದ್ದಂತೆ ಖಿನ್ನತೆಗೆ ಜಾರಿಬಿಟ್ಟಳು. ಕುಸಿದು ಹೋಗಿಬಿಟ್ಟಿದ್ದಳು! ಇದು ವಿಚಿತ್ರ ಎನಿಸಿದರೂ ನಂಬಲೇಬೇಕು.ಸಿನಿಮಾ ನಟಿಯರಿಗೇನಪ್ಪಾ… ಹಣ, ಹೆಸರು, ಮೋಜು.. ಓಹ್… ಏನು ಬೇಕೋ ಅದೆಲ್ಲ ಕಾಲ ಬಳಿಯಲ್ಲೇ ಬಿದ್ದಿರುತ್ತದೆ. ಅವರಿಗೆಂಥ ಕೊರತೆ… ಅವರಿಗೇಕೆ ಖಿನ್ನತೆ, ಹತಾಶೆ ಎನ್ನುತ್ತಾರೆ ಬಹಳ ಮಂದಿ. ಆದರೆ ಏನಿದ್ದರೇನು, ಮಾನವ ಸಹಜವಾದ ಮನಸು, ಆಸೆ, ಆಕಾಂಕ್ಷೆಗಳು ಅವರಿಗೂ ಎಲ್ಲರಂತೆಯೇ ಇರುತ್ತವಲ್ಲ… ಅಂದ ಹಾಗೆ ದೀಪಿಕಾ ಖಿನ್ನತೆ, ಹತಾಶೆಗೆ ಗುರಿಯಾಗಿ ಎಂಥ ಸಂಕಟ ಅನುಭವಿಸಿದಳು, ಹೇಗೆ ಅದರಿಂದ ಹೊರಬಂದಳು, ಬಂದ ಮೇಲೆ ಏನು ಮಾಡಿದಳು ಎಂಬುದನ್ನು ಓದಿ ನೋಡಿ…

ದೀಪಿಕಾಳನ್ನು ಕಾಡಿದ ವೇದನೆ:

ದೀಪಿಕಾ ಪಡುಕೋಣೆ ಇದ್ದಕ್ಕಿದ್ದಂತೆ ಖಿನ್ನತೆಗೆ ಒಳಗಾಗಿಬಿಟ್ಟರು. ಅವರ ಬಾಲಿವುಡ್ ಜಮಾನ ಆಗ ಜೋರಾಗಿಯೇ ಇತ್ತು. ಯಶಸ್ಸಿನ ಉತ್ತುಂಗದಲ್ಲಿದ್ದಳು ದೀಪಿಕಾ. ಈ ಸಂದರ್ಭ ಖಿನ್ನತೆಗೊಳಗಾದ ದೀಪಿಕಾ ಸಂಪೂರ್ಣವಾಗಿ ಹತಾಶಳಾಗಿದ್ದಳು.  ಯಾವುದೇ ಕಾರಣವಿಲ್ಲದೆ ಅಳುವುದು, ಕಂಡ ಕಂಡವರ ಮೇಲೆ ರೇಗಾಡುವುದು, ಕೋಣೆಯಲ್ಲಿ ಒಬ್ಬಳೇ ಕುಳಿತು ಮಾನಸಿಕ ವೇದನೆ ಅನುಭವಿಸುವುದು ಅವಳ ಅಂದಿನ ದಿನಚರಿಯಾಗಿದ್ದವು.  ಸಿನಿಮಾ ಶೂಟಿಂಗ್‍ಗೆ ತೆರಳಿದಾಗಲೂ ಸೆಟ್‍ನಲ್ಲೂ ಚೆನ್ನಾಗಿಯೇ ಕ್ಯಾಮೆರಾ ಎದುರಿಸುತ್ತಿದ್ದ ಇದ್ದಕ್ಕಿದ್ದಂತೆ ಯಾವುದೋ ಲೋಕಕ್ಕೆ ಹೋಗಿಬಿಡುತ್ತಿದ್ದಳು. ಸೆಟ್‍ನಿಂದ ದೂರ ಹೋಗಿ ಯಾರಿಗೂ ಕಾಣದಂತೆ ಕುಳಿತು ಸಾಕಾಗುವವರೆಗೆ ಅಳುತ್ತಿದ್ದರು.

ಹೀಗೆ ಮನೋವೇದನೆ ಅವಳನ್ನು ಇನ್ನಿಲ್ಲದಂತೆ ಕಾಡತೊಡಗಿತು. ವಿಶೇಷವೆಂದರೆ ತನ್ನ ಅಂತಹ ಪರಿಸ್ಥಿತಿಯೇ ದೀಪಿಕಾ ನಾಚಿಕೊಳ್ಳುವುದಾಗಲಿ, ಸಂಕೋಚ ಪಟ್ಟುಕೊಳ್ಳುವುದಾಗಿ, ತನ್ನ ಸಂಕಟವನ್ನು ಮುಚ್ಚಿಟ್ಟುಕೊಳ್ಳುವುದಾಗಲಿ ಮಾಡಲಿಲ್ಲ.  ಮೊದಲು ತನ್ನ ಅಮ್ಮನ ಮುಂದೆ ಹೇಳಿಕೊಂಡಳು. ಕೂಡಲೇ ಅಪ್ಪ -ಅಮ್ಮ ಮಗಳನ್ನು ಕರೆದುಕೊಂಡು ಹೋದರು. ಅವರೊಂದಿಗಿದ್ದಾಗ ನಗು ನಗುತ್ತಾ ಗೆಲುವಾಗಿಯೇ ಇದ್ದಾಳಾದರೂ ಅಂತರಂಗದಲ್ಲಿ ಯಾವುದೋ ಅವ್ಯಕ್ತ ವೇದನೆಯೊಂದು ಅವಳನ್ನು ಬೆಂಬಿಡದಂತೆ ಕಾಡುತ್ತಿತ್ತು. ಕೊನೆಗೆ ವೈದ್ಯರ ನೆರವು, ಸಲಹೆ, ಸಹಕಾರಗಳನ್ನು ಪಡೆದು ಯಥಾಸ್ಥಿತಿಗೆ ಮರಳಿದರು.  ಮಾನವೀಯ ಕಳಕಳಿ: ಖಿನ್ನತೆ, ಹತಾಶೆಗಳಿಂದ ಹೊರಬಂದ ದೀಪಿಕಾ ತನ್ನ ಪಾಡಿಗೆ ತಾನು ಸುಮ್ಮನೆ ಕೂರಲಿಲ್ಲ.

ನನ್ನಂತೆ ಹೀಗೆ ನರಳುವ ಎಷ್ಟೋ ಜನ ಇದ್ದಾರೆ. ಅವರಿಗಾಗಿ ಏನಾದರೂ ಮಾಡಬೇಕಲ್ಲ ಎಂಬ ತಹ ತಹ ಕಾಡತೊಡಗಿತು. ಎಷ್ಟೋ ಜನ ಖಿನ್ನತೆಗೊಳಗಾಗಿ ಅದರಲ್ಲೇ ನರಳುವವರಿದ್ದಾರೆ. ಅದರಿಂದ ಹೊರಬಂದವರಿದ್ದಾರೆ. ಆದರೆ ದೀಪಿಕಾಳಂತೆ ಜನಪರ ಕಾಳಜಿ ವಹಿಸಿದವರು ಲಕ್ಷಕ್ಕೊಬ್ಬರು. ದೀಪಿಕಾ ಮನಸ್ಸಿನಲ್ಲಿ ಇಂತಹ ಒಂದು ಚಿಂತನೆ ಮೂಡಿ ಬಂದಿದ್ದರ ಫಲವೇ…ಲೀವ್-ಲವ್-ಲಾಫ್….( Live-love laugh)ಸಂಸ್ಥೆ. ದೀಪಿಕಾ ತನ್ನ ಲೀವ್-ಲವ್-ಲಾಫ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾಳೆ. ದೇಶದಲ್ಲಿರುವ ಇಂತಹ ಕೆಲವೇ ಸಂಸ್ಥೆಗಳೊಂದಿಗೆ ಕೈ ಜೋಡಿಸಿರುವ ದೀಪಿಕಾ, ತನ್ನ ಬಿಡುವಿರದ ಕಾರ್ಯ ಬಾಹುಳ್ಯದಲ್ಲೂ ತಪ್ಪದೇ ಜನರ ಬಳಿಗೆ ಹೋಗುತ್ತಾಳೆ.

ದೀಪಿಕಾ ಜನರಿಗೆ ಹೇಳುವುದು ಒಂದೇ ಮಾತು… ಖಿನ್ನತೆ ಸಹಜವಾಗಿ ಬರುವಂತಹ ಒಂದು ರೋಗವೇ. ಖಿನ್ನತೆಗೊಳಗಾದವರು ಯಾವುದೇ ಕಾರಣಕ್ಕೂ ಸಮಾಜದ ಟೀಕೆ ಟಿಪ್ಪಣಿಗಳಿಗೆ ಅಳುಕದೆ, ನಿಸ್ಸಂಕೋಚವಾಗಿ ನಿಮ್ಮ ಸಮಸ್ಯೆಯನ್ನು ತೆರೆದಿಟ್ಟರೆ ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ… 2015ರ ಆರಂಭದಲ್ಲಿ 29ರ ಹರೆಯದ ದೀಪಿಕಾ ಪಡುಕೋಣೆ ಖಿನ್ನತೆಗೆ ಒಳಗಾದವರ ನೆರವಿಗೆ ನಿಂತಳು. ಅನೇಕರಿಗೆ ಉಚಿತ ಸಲಹೆಗಳನ್ನು ನೀಡಿ ನೆರವಾದರು. ಇದು ಅವಳಲ್ಲಿ ಉತ್ಸಾಹ ತುಂಬಿತು. ಈ ಉತ್ಸಾಹದಲ್ಲೇ ಆರು ತಿಂಗಳ ನಂತರ ದೀಪಿಕಾ ಲೀವ್-ಲವ್-ಲಾಫ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಜನಸೇವೆಗೆ ಮುಂದಾದಳು.ಲೀವ್-ಲವ್-ಲಾಫ್ ಸ್ಥಾಪನೆಗೆ ಆ ಸಂದರ್ಭ ಅವಳಿಗೆ ನೆರವಾದವರು ಅನ್ನಾ ಚಾಂಡಿ, ಡಾ.ಶಾಮ್‍ಭಟ್, ಅನಿರ್ಬನ್ ಬ್ಲಾಹ್, ನೀನಾ ನಾಯರ್ ಮತ್ತು ಆಶುಗೋಪಾಲ ಇವರೆಲ್ಲರ ಶ್ರಮದೊಂದಿಗೆ ದೀಪಿಕಾ ನೇತೃತ್ವದಲ್ಲಿ ಲೀವ್-ಲವ್-ಲಾಫ್ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದೆ.  ಖಿನ್ನತೆ-ಹತಾಶೆ ಎಂಬ ಮನೋರೋಗವನ್ನು ಜಯಿಸಿ  ಇಂದಿನ ಸ್ಪರ್ಧಾತ್ಮಕತೆ, ಅಭದ್ರತೆ ಹಾಗೂ ಬಹುಬೇಡಿಕೆಯ ಬದುಕಿನ ಜಂಜಾಟದಿಂದ ಭಾರೀ ಒತ್ತಡ, ತನ್ಮೂಲಕ ಉಂಟಾಗುವ ಮಾನಸಿಕ ರೋಗಗಳು ಹೆಚ್ಚಾಗುತ್ತಿವೆ. ಖಿನ್ನತೆ, ಹತಾಶೆ, ಮಾನಸಿಕ ಕ್ಷೋಭೆ, ಭಯ, ಆತಂಕ, ಗೊಂದಲ ಆಕ್ರಮಣಗಳು, ಸ್ಕಿಜೊಫ್ರೆನಿಯಾ (ದ್ವಂದ್ವತೆಯ ಮನೋರೋಗ), ವಿಚಿತ್ರ ನಡವಳಿಕೆ. ಹಾಗೆಯೇ ತಲೆ ನೋವು, ಮೈಕೈ ನೋವು, ದುರ್ಬಲತೆ ಹಾಗೂ ಕೆಲಸ ಕಾರ್ಯದಲ್ಲಿ ಕಳಪೆ ಸಾಮಥ್ರ್ಯದ ರೂಪದಲ್ಲಿ ಇಂಥ ದೋಷಗಳು ಕಂಡು ಬರುತ್ತವೆ. ಎಲ್ಲ ವಯಸ್ಸಿನ ವ್ಯಕ್ತಿಗಳಲ್ಲೂ ಇಂಥ ಸಮಸ್ಯೆಗಳು ಪರಿಣಾಮ ಬೀರುತ್ತವೆ. ಮನೋರೋಗ ದೋಷಗಳಿಗೆ ಕಾರಣವಾಗುವ ಅಂಶಗಳೆಂದರೆ…

ಪೂರ್ವಜರಿಂದ ಅನುವಂಶೀಯವಾಗಿ ಬಂದ ದೋಷಗಳು, ಅಲ್ಕೋಹಾಲ್ ಮತ್ತು ರಿಕ್ರಿಯೇಷನಲ್ ಡ್ರಗ್ಸ್‍ಗಳ ನಿರಂತರ ಬಳಕೆ, ಒತ್ತಡದಾಯಕ ಕೆಲಸ ಮಾಡುವ ಪರಿಸರ-ಯಾವುದೇ ಮನರಂಜನೆ ಇಲ್ಲದ ಮಿತಿಮೀರಿದ ಕೆಲಸ, ಒಳ್ಳೆಯ ಕೆಲಸಕ್ಕೆ ಪ್ರಶಂಸೆಯ ಮತ್ತು ಪ್ರೇರಕ ಸಂಭಾವನೆಯ ಕೊರತೆ, ಸಂಗಾತಿ, ಪೋಷಕರು, ಮಕ್ಕಳು ಅಥವಾ ಹತ್ತಿರದ ಬಂಧುಮಿತ್ರರೊಂದಿಗೆ ಹದಗೆಟ್ಟ ಸಂಬಂಧ ಹಾಗೂ ಪ್ರೀತಿ ವಿಷಯದಲ್ಲಿ ಕೊರತೆ ಮತ್ತು ಯಶಸ್ಸು ಸಾಧಿಸುವಲ್ಲಿ ವೈಫಲ್ಯ, ದೈಹಿಕ ಅನಾರೋಗ್ಯ ಅಥವಾ ಅಪಘಾತ, ಬೇಜವಾಬ್ದಾರಿಯುತ ಹಾಗೂ ಗೊತ್ತುಗುರಿಯಿಲ್ಲದ ಜೀವನ ಶೈಲಿ. ಈ ಅಂಶಗಳು ನರಕೋಶಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ.

ಕೇಂದ್ರ ನರಮಂಡಲ ವ್ಯವಸ್ಥೆಯ ನ್ಯುರೋಕೆಮೆಸ್ಟ್ರಿಯನ್ನು ಮಾರ್ಪಾಡು ಮಾಡುತ್ತವೆ ಎಂದು ತಿಳಿದು ಬಂದಿದೆ. ಮೆದುಳಿನಲ್ಲಿ ವಿವಿಧ ಮಾರ್ಗಗಳ ಮೂಲಕ ನ್ಯುರೋಕೆಮಿಕಲ್‍ಗಳ ಉತ್ತಮ ಸಮತೋಲನ ಕಾರ್ಯ ನಿರ್ವಹಣೆಯು ಪರಿವರ್ತನೆಯಾಗಿ ಮನೋರೋಗ ದೋಷಕ್ಕೆ ಎಡೆ ಮಾಡಿಕೊಡುತ್ತದೆ. ಈ ಮೇಲಿನ ಅಂಶ ಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಕಾರಣಗಳಿಗೆ ನರ್ವಸ್ ಬ್ರೇಕ್‍ಡೌನ್(ನರವ್ಯೂಹಗಳ ಸ್ಥಗಿತ) ಸಮಸ್ಯೆಗೆ ಕಾರಣವಾಗುತ್ತದೆ. ತಂದೆ-ತಾಯಿ ಜಗಳ ಅಥವಾ ವಿಚ್ಛೇಧನ ಮಕ್ಕಳ ಮೇಲೆ ದುಷ್ಪರಿ ಣಾಮ ಬೀರಿ ಅವರನ್ನು ಖಿನ್ನತೆ, ಹತಾಶೆಯ ಕೂಪಕ್ಕೆ ತಳ್ಳಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin