ಗಂಡ ಸಾಯುತ್ತಾನೆಂಬ ವದಂತಿ, ಮಾಂಗಲ್ಯದಲ್ಲಿನ ಹವಳವನ್ನು ಒಡೆದು ಹಾಕುತ್ತಿರುವ ಮಹಿಳೆಯರು..!

ಈ ಸುದ್ದಿಯನ್ನು ಶೇರ್ ಮಾಡಿ

Havala--01

ಕೊಪ್ಪಳ/ಬಳ್ಳಾರಿ/ಚಿತ್ರದುರ್ಗ/ದಾವಣಗೆರೆ,ಜು.5-ಹಾಗಂತೆ ಹೀಗಂತೆ ಎಂಬ ಅಂತೆಕಂತೆಗಳ ವದಂತಿಗಳು ಗಾಳಿ ಸುದ್ದಿಗಳು ಹರಡುವುದು ವಿಶೇಷವೇನೂ ಅಲ್ಲ. ಆದರೆ, ಹೈದರಾಬಾದ್ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಇದೀಗ ಹಬ್ಬಿರುವ ಗಾಳಿ ಸುದ್ದಿ ಅತ್ಯಂತ ವಿಚಿತ್ರ ಮತ್ತು ಆತಂಕಕಾರಿಯಾಗಿದೆ.  ಮಹಿಳೆಯರು ತಮ್ಮ ಮಾಂಗಲ್ಯ ಸರದಲ್ಲಿ ಧರಿಸಿರುವ ಕೆಂಪು ಹವಳ ಶಕುನ ನುಡಿಯುತ್ತದೆ. ಅದು ಹಾಗೆ ನುಡಿದರೆ ಆ ಮಹಿಳೆಯ ಗಂಡ ಸಾವನ್ನಪ್ಪುತ್ತಾನೆ ಎಂಬಂಥ ಸುದ್ದಿಯೊಂದು ಎಲ್ಲೆಲ್ಲೂ ಕಾಳ್ಗಿಚ್ಚಿನಂತೆ ಹಬ್ಬಿ ಈ ಜಿಲ್ಲೆಗಳ ಮಹಿಳೆಯರು ತತ್ತರಿಸಿ ಹೋಗಿದ್ದಾರೆ.

ಎಲ್ಲಿ ನಮ್ಮ ಕೊರಳಲ್ಲಿರುವ ಕೆಂಪು ಹವಳ ಮಾತನಾಡುತ್ತದೆಯೋ, ಎಲ್ಲಿ ನನ್ನ ಗಂಡ ಸಾವನ್ನಪ್ಪುತ್ತಾನೋ ಎಂದು ಹೆದರಿ ಇಡೀ ರಾತ್ರಿ ಸಾವಿರಾರು ಮಹಿಳೆಯರು ಜಾಗರಣೆ ಮಾಡಿದ ಘಟನೆ ನಡೆದಿದೆ.   ಇದೇನು ಮೂಢನಂಬಿಕೆಯೋ, ಕಿಡಿಗೇಡಿಗಳು ಹಬ್ಬಿಸಿರುವ ವದಂತಿಯೋ ಅಂತೂ ಮಹಿಳೆಯರು ಭಯದಿಂದ ಜರ್ಝರಿತರಾಗಿರುವುದಲ್ಲದೆ ತಮ್ಮ ಮಾಂಗಲ್ಯ ಸರಗಳಲ್ಲಿನ ಕೆಂಪು ಹವಳಗಳನ್ನು ತೆಗೆದು ಕುಟ್ಟಿ ಪುಡಿ ಮಾಡಿ ಹಾಕುತ್ತಿದ್ದಾರೆ.  ಸಾಮಾನ್ಯವಾಗಿ ಮಹಿಳೆಯರ ಸರ್ವತ್ತೋಮುಖ ಸುರಕ್ಷತಾ ದೃಷ್ಟಿಯಿಂದ ಈ ಕೆಂಪು ಹವಳವನ್ನು ತಲಾತಲಾಂತರದಿಂದ ಧರಿಸುವ ಪದ್ಧತಿ ನಡೆದು ಬಂದಿದೆ. ಆದರೆ ಇದೀಗ ಹರಡಿರುವ ಈ ಗಾಳಿ ಸುದ್ದಿಯಿಂದ ವಿವಾಹಿತ ಮಹಿಳೆಯರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಸಾಮಾನ್ಯವಾಗಿ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳು ಮತ್ತು ಹೈದರಾಬಾದ್ ಕರ್ನಾಟಕದ ಬಳ್ಳಾರಿ, ಕೊಪ್ಪಳ , ರಾಯಚೂರು ಜಿಲ್ಲೆಗಳಲ್ಲಿ ಈ ವದಂತಿ ವ್ಯಾಪಕವಾಗಿ ಹರಡಿದ್ದು , ಮಹಿಳೆಯರಷ್ಟೇ ಅಲ್ಲದೆ ಪುರುಷರು ಕೂಡ ನಮಗೆಲ್ಲಿ ಸಾವು ಬಂದೆರಗುತ್ತದೆಯೋ ಎಂಬ ಭಯಭೀತಿಗೆ ಒಳಗಾಗಿದ್ದಾರೆ.   ಒಟ್ಟಾರೆ ಈ ಜಿಲ್ಲೆಯ ಎಲ್ಲ ಮಹಿಳೆಯರು ನಿನ್ನೆ ರಾತ್ರಿಯಿಂದ ನಿದ್ದೆ , ಆಹಾರಗಳನ್ನು ತೊರೆದು ಜಾಗರಣೆ ನಡೆಸುತ್ತಾ ಪರಸ್ಪರ ಒಬ್ಬರಿಗೊಬ್ಬರು ಈ ಸುದ್ದಿಯನ್ನು ವಿನಿಮಯ ಮಾಡಿಕೊಳ್ಳುತ್ತಾ ತಮ್ಮ ಕೊರಳಲಿನ ಕೆಂಪು ಹವಳಗಳನ್ನು ತೆಗೆದು ಕುಟ್ಟಿ ಪುಡಿ ಮಾಡುತ್ತಿರುವ ದೃಶ್ಯ ಎಲ್ಲೆಲ್ಲೂ ಕಂಡುಬರುತ್ತಿದೆ.

ವದಂತಿ ಮೂಲ:

ಇಷ್ಟಾದರೂ ಈ ವದಂತಿಯ ಮೂಲ ಯಾವುದು ಎಂಬುದು ಇದುವರೆಗೂ ಯಾರಿಗೂ ನಿಖರವಾಗಿ ತಿಳಿದುಬಂದಿಲ್ಲ. ಆದರೆ ಕೆಲವರು ಹೇಳುವ ಪ್ರಕಾರ ಆಂಧ್ರದ ಕಡೆಯಿಂದ ಈ ಸುದ್ದಿ ಬಂದಿದೆಯಂತೆ. ಇನ್ನು ಕೆಲವರ ಪ್ರಕಾರ ಯಾರೋ ಒಬ್ಬರು ಸ್ವಾಮೀಜಿ ಹೇಳಿದ್ದರಂತೆ.  ಅದೇನೆ ಇರಲಿ ಕೊರಳಲ್ಲಿ ಧರಿಸಿದ ಮಾಂಗಲ್ಯ ಸರದಲ್ಲಿರುವ ಕೆಂಪು ಹವಳಕ್ಕೆ ಜೀವ ಬರುವುದು, ಅದು ಜೀವ ಬಂದು ಮಾತನಾಡುವುದು, ಅದು ಮಾತನಾಡಿದ ತಕ್ಷಣ ಆ ಮಹಿಳೆಯ ಪತಿ ಸಾವನ್ನಪ್ಪುವುದು. ಒಂದಕ್ಕೊಂದು ಸಂಬಂಧವೇ ಇರದ ಇಂತಹ ವದಂತಿಗಳನ್ನು ಯಾರೂ ಯಾರ ಹಿತಾಸಕ್ತಿಗಾಗಿ ಹರಿಯಬಿಡುತ್ತಾರೆ ಮತ್ತು ಇದನ್ನು ನಂಬಿ ಜನ ಕಂಗಾಲಾಗುತ್ತಾರೆ ಎಂಬುದು ಬಿಡಿಸಲಾಗದ ಪ್ರಶ್ನೆ.

ಈ ಹಿಂದೆ ಎಂದೂ ಕೂಡ ಇಂತಹ ಗಾಳಿ ಸುದ್ದಿ ಹಬ್ಬಿದ್ದಿಲ್ಲ. ಹವಳ ಮಾತನಾಡುತ್ತದೆ ಎಂಬ ಈ ಸುದ್ದಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಕೇಳುವವರಿಗೆ ಅಚ್ಚರಿ ಎನಿಸಿದರೂ ಮುತ್ತೈದೆ ಮಹಿಳೆಯರಂತೂ ಕಂಗಾಲಾಗುವಂತೆ ಮಾಡಿದೆ.  ಇಂತಹ ವದಂತಿಗಳ ಬಗ್ಗೆ , ಇವುಗಳನ್ನು ಹಬ್ಬಿಸುತ್ತಿರುವವರ ಬಗ್ಗೆ ಜಿಲ್ಲಾಡಳಿತಗಳು ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಇದರಿಂದ ಅನಾಹುತವಾಗುವ ಸಾಧ್ಯತೆಗಳು ಇಲ್ಲದಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin