ಗಗನಕ್ಕೇರಿದ ಬೆಲೆ, ಅಂಗನವಾಡಿ ಮಕ್ಕಳಿಗೆ ಸದ್ಯಕ್ಕಿಲ್ಲ ಮೊಟ್ಟೆ

ಈ ಸುದ್ದಿಯನ್ನು ಶೇರ್ ಮಾಡಿ

Egg--02

ಬೆಂಗಳೂರು, ನ.28- ದಿನದಿಂದ ದಿನಕ್ಕೆ ಮೊಟ್ಟೆ ದರ ಗಗನಕ್ಕೇರುತ್ತಿರುವ ಪರಿಣಾಮ ಅಂಗನವಾಡಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ರಾಜ್ಯ ಸರ್ಕಾರದಿಂದ ನೀಡುತ್ತಿದ್ದ ಮೊಟ್ಟೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕಳೆದ ಅ.2ರಂದು ರಾಜ್ಯ ಸರ್ಕಾರ ಗರ್ಭಿಣಿಯರಿಗೆ ಪೌಷ್ಠಿಕಾಂಶ ಆಹಾರ ನೀಡುವ ಉದ್ದೇಶದಿಂದ ಆರಂಭಿಸಿದ್ದ ಮಾತೃಪೂರ್ಣ ಯೋಜನೆ ಮೇಲೆ ಮೊಟ್ಟೆ ದರ ಪರಿಣಾಮ ಬೀರಿದೆ. ಕಳೆದ 15 ದಿನಗಳಿಂದ ರಾಜ್ಯದ ಸಾವಿರಾರು ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ಮಾಡುತ್ತಿದ್ದವರು ಸದ್ಯಕ್ಕೆ ಸ್ಥಗಿತಮಾಡಿದ್ದಾರೆ. ಸರ್ಕಾರದ ವತಿಯಿಂದ ಬಾಕಿ ಇರುವ ಹಣ ಬಿಡುಗಡೆ ಯಾಗದಿರುವುದು ಒಂದೆಡೆಯಾದರೆ ಮಾರುಕಟ್ಟೆಯಲ್ಲಿ ಮೊಟ್ಟೆ ದರ 6ರಿಂದ 7 ರೂ.ಗೆ ದಿಢೀರ್ ಏರಿಕೆಯಾಗಿರುವುದರಿಂದ ಬೊಕ್ಕಸಕ್ಕೂ ಹೊಡೆತ ಬಿದ್ದಿದೆ.ನಮಗೆ ಸರ್ಕಾರದ ವತಿಯಿಂದ ಬಾಕಿ ಇರುವ ಹಣ ಬಿಡುಗಡೆಯಾಗಿಲ್ಲ.

ಒಂದು ಮೊಟ್ಟೆಗೆ 5ರೂ.ನಂತೆ ಸರ್ಕಾರ ಹಣ ನೀಡುತ್ತಿತ್ತು. ಈಗ ದರ ಏರಿಕೆಯಾಗಿರುವುದರಿಂದ ನಾವು ಕೊಂಡು ಅಂಗನವಾಡಿಗಳಿಗೆ ಪೂರೈಕೆ ಮಾಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ನೀಡುತ್ತಿರುವ ಮೊಟ್ಟೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಸಂಘಟನೆಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ಮಂಗಳೂರು, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಬಳ್ಳಾರಿ, ವಿಜಯಪುರ, ಕಲಬುರಗಿ ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕಳೆದ 10-15ದಿನಗಳಿಂದ ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜಾಗುತ್ತಿಲ್ಲ.

ಅಧಿಕಾರಿಗಳು ಮೊಟ್ಟೆ ವಿತರಣೆ ಮಾಡು ವಂತೆ ಸಂಬಂಧಪಟ್ಟವರಿಗೆ ಸೂಚನೆ ಕೊಟ್ಟಿ ದ್ದರೂ ಬಾಕಿ ಹಣ ಬಾರದಿರುವ ಕಾರಣ ವಿತರಕರು ಸ್ಥಗಿತಮಾಡಿದ್ದಾರೆ. ಇನ್ನು 5ರೂ.ಗೆ ಖರೀದಿಸಿದ್ದ ಮೊಟ್ಟೆಯ ಹಣವನ್ನು ಸರ್ಕಾರ ನೀಡಿಲ್ಲ. ಈಗ 7ರೂ. ದರದಲ್ಲಿ ಖರೀದಿಸಿ ವಿತರಣೆ ಮಾಡಿದರೆ ನಮಗೆ ಹೆಚ್ಚುವರಿ ಹಣವನ್ನು ಕೊಡುತ್ತದೆ ಎಂಬ ಖಾತರಿ ಇಲ್ಲ ಎನ್ನುತ್ತಾರೆ ವಿತರಕರು. ಇತ್ತ ಸರ್ಕಾರವು ಹಾಲಿ ಮಾರುಕಟ್ಟೆ ಯಲ್ಲಿರುವ ದರದಂತೆ ಖರೀದಿಸಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಪೂರೈಕೆ ಮಾಡಬೇಕೆಂಬ ಸೂಚನೆಯನ್ನು ಈವರೆಗೂ ನೀಡಿಲ್ಲ. ದರದ ಹೊಡೆತದ ಪರಿಣಾಮ ಗರ್ಭಿಣಿಯರು ಮತ್ತು ಅಂಗನವಾಡಿ ಮಕ್ಕಳಿಗೆ ಮೊಟ್ಟೆಯಿಲ್ಲದಂತಾಗಿದೆ.

ಪ್ರತಿಭಟನೆ ಎಚ್ಚರಿಕೆ:

ಸರ್ಕಾರ ನಿಗದಿತ ಅವಧಿಯೊಳಗೆ ಬಾಕಿ ಇರುವ ಹಣವನ್ನು ಪಾವತಿಸದಿದ್ದರೆ ಸದ್ಯದಲ್ಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಮೊಟ್ಟೆ ವಿತರಕರು ಎಚ್ಚರಿಸಿದ್ದಾರೆ. ಇನ್ನೊಂದೆಡೆ ಅಂಗನವಾಡಿ ಶಿಕ್ಷಕರಿಯರು ಕೂಡ ಸರ್ಕಾರ ಸಮಸ್ಯೆಯನ್ನು ಆದಷ್ಟು ಶೀಘ್ರ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.

Facebook Comments

Sri Raghav

Admin