ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ : ಸಮರಕ್ಕೆ ಸರ್ವ ಸನ್ನದ್ಧರಾಗಿರಲು ಎಚ್‍ಎಎಲ್‍’ಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

HAL-01

ಬೆಂಗಳೂರು, ಸೆ.30-ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಿದ ನಂತರ ಉದ್ಭವಿಸಬಹುದಾದ ಯಾವುದೇ ಸನ್ನಿವೇಶ ಎದುರಿಸಲು ಕಟ್ಟೆಚ್ಚರದಿಂದ ಇರುವಂತೆ ಭಾರತೀಯ ಯುದ್ಧ ವಿಮಾನಗಳನ್ನು ನಿರ್ವಹಣೆ ಮಾಡುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ಗೆ (ಎಚ್‍ಎಎಲ್) ಸೂಚಿಸಲಾಗಿದೆ. ಅಲ್ಲದೇ ಅಗತ್ಯವಿದ್ದಾಗ ತಕ್ಷಣ ಪ್ರಯಾಣ ಬೆಳೆಸಲು ಸಕಲ ರೀತಿಯಲ್ಲಿ ಸಜ್ಜಾಗುವಂತೆ ಎಚ್‍ಎಎಲ್‍ನ ಎಂಜಿನಿಯರ್‍ಗಳು ಮತ್ತು ತಂತ್ರಜ್ಞರಿಗೆ ನಿರ್ದೇಶನ ನೀಡಲಾಗಿದೆ.  ಎಚ್‍ಎಎಲ್‍ನ ಉನ್ನತಾಧಿಕಾರಿಗಳು ನಿನ್ನೆ ಮಧ್ಯರಾತ್ರಿ ಸುಕೋಯ್, ಮಿಗ್, ಮಿರೇಜ್, ಜಾಗ್ವಾರ್ ಮತ್ತು ಇತರ ಹೆಲಿಕಾಪ್ಟರ್ ಘಟಕಗಳ ಮುಖ್ಯಸ್ಥರ ಜೊತೆ ಈ ನಿಟ್ಟಿನಲ್ಲಿ ಮಹತ್ವದ ಸಮಾಲೋಚನೆ ನಡೆಸಿದ್ದು, ಯಾವುದೇ ಪರಿಸ್ಥಿತಿ ನಿಭಾಯಿಸಲು ಸಿದ್ದವಾಗಿರುವಂತೆ ಸೂಚಿಸಿದ್ದಾರೆ. ದೆಹಲಿಯಲ್ಲಿ ನಿನ್ನೆ ತಡರಾತ್ರಿ ನಡೆದ ಸಭೆಯ ನಂತರ ವಿಶೇಷವಾಗಿ ಎಚ್‍ಎಎಲ್‍ಗೆ ಈ ನಿರ್ದೇಶನ ನೀಡಲಾಗಿದೆ.

ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಿಳಿಗೊಳ್ಳುವವರೆಗೆ ಎಚ್‍ಎಎಲ್‍ನ ತಂತ್ರಜ್ಞರು, ಎಂಜಿನಿಯರ್‍ಗಳು ಮತ್ತು ಉನ್ನತಾಧಿಕಾರಿಗಳು ಇಂದಿನಿಂದ ಪ್ರತಿದಿನ ರಾತ್ರಿ 11 ಗಂಟೆವರೆಗೆ ಕಾರ್ಯನಿರ್ವಹಿಸುವಂತೆ ತಿಳಿಸಲಾಗಿದೆ. ರಾಷ್ಟ್ರೀಯ ಪ್ರಾಮುಖ್ಯತೆ ಹಿತದೃಷ್ಟಿಯಿಂದಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. 1999ರ ಕಾರ್ಗಿಲ್ ಸಂಘರ್ಷದ ಸಮಯದಲ್ಲೂ ಎಚ್‍ಎಎಲ್‍ಗೆ ಇದೇ ರೀತಿಯ ಕಟ್ಟೆಚ್ಚರ ನೀಡಲಾಗಿತ್ತು. ತಂತ್ರಜ್ಞರು ಮತ್ತು ಎಂಜಿನಿಯರ್‍ಗಳು ವಾರಗಳ ಕಾಲ ಮನೆಗಳಿಗೆ ತೆರಳದೇ ಕರ್ತವ್ಯ ನಿರ್ವಹಿಸಿದ್ದರು.

ಪ್ರಮುಖ ಯುದ್ಧ ವಿಮಾನಗಳ ತಯಾರಿಕೆ ಮತ್ತು ಜೋಡಣೆ ಹಾಗೂ ಎಂಜಿನ್‍ಗಳ ದುರಸ್ಥಿ ಮತ್ತಿತರ ವೈಮಾನಿಕ ನಿಯಂತ್ರಣ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಎಚ್‍ಎಎಲ್ ಪಾತ್ರ ಮಹತ್ವದ್ದಾಗಿದೆ. ಮಹಾರಾಷ್ಟ್ರದ ನಾಸಿಕ್‍ನಲ್ಲಿರುವ ಎಚ್‍ಎಎಲ್ ಘಟಕದಲ್ಲೂ ಇದೇ ರೀತಿಯ ಕಟ್ಟೆಚ್ಚರ ಘೋಷಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin