ಗಡಿಯಲ್ಲಿ ನಿಲ್ಲದ ಪಾಕ್ ಷೆಲ್ ದಾಳಿ, 1,000ಕ್ಕೂ ಹೆಚ್ಚು ಜನರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Pakistan--01

ಜಮ್ಮು, ಮೇ 14- ಕಾಶ್ಮೀರ ಕಣಿವೆಯ ಗಡಿ ಭಾಗದಲ್ಲಿ ಪಾಕಿಸ್ತಾನಿ ಸೈನಿಕರ ಪುಂಡಾಟ ನಾಲ್ಕನೇ ದಿನವಾದ ಇಂದೂ ಕೂಡ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಪಾಕ್ ರೇಂಜರ್‍ಗಳು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನಾ ನೆಲೆ ಮತ್ತು ಗಡಿ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಭಾರೀ ಷೆಲ್ ದಾಳಿಗಳನ್ನು ಮುಂದುವರಿಸಿವೆ. ಇದಕ್ಕೆ ಭಾರತದ ಯೋಧರೂ ದಿಟ್ಟ ಉತ್ತರ ನೀಡಿದ್ದಾರೆ. ರಜೌರಿ ಜಿಲ್ಲೆಯ ಮನ್‍ಕೋಟ್ ಮತ್ತು ಚಿಟಿಬಕ್ರಿ ವಲಯಗಳಲ್ಲಿ ನಡೆದ ಈ ಅಪ್ರಚೋದಿತ ದಾಳಿಯಲ್ಲಿ ಅನೇಕ ಕಟ್ಟಡಗಳಿಗೆ ಭಾರೀ ಹಾನಿಯಾಗಿದೆ.



ಮುನ್ನೆಚ್ಚರಿಕೆ ಕ್ರಮವಾಗಿ 1,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಇನ್ನೂ ಕೆಲವು ಸ್ಥಳಗಳಲ್ಲೂ ಯುದ್ಧ ವಿರಾಮ ಉಲ್ಲಂಘನೆ ವರದಿಯಾಗಿವೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.   ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಪಾಕಿಸ್ತಾನ ಐದನೇ ಬಾರಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದೆ. ಭಾರತೀಯ ಯೋಧರೂ ಪ್ರತಿ ದಾಳಿ ನಡೆಸಿದ್ದು ಗುಂಡಿನ ಚಕಮಕಿ ನಡೆದಿದೆ.

ಗಡಿಯಲ್ಲಿನ ಮೂರು ಗ್ರಾಮಗಳಿಂದ 259 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಪರಿಹಾರ ಶಿಬಿರಗಳಲ್ಲಿ 1,000ಕ್ಕೂ ಹೆಚ್ಚು ಗ್ರಾಮಸ್ಥರು ಆಶ್ರಯ ಪಡೆಯುತ್ತಿದ್ದಾರೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.  ರಜೌರಿಯ ನೌಶೇರಾ ವಲಯದಲ್ಲಿ ನಿನ್ನೆ ಪಾಕ್ ಪಡೆಗಳ ಷೆಲ್ ದಾಳಿಯಲ್ಲಿ ತಂದೆ ಮತ್ತು ಮಗಳು ಸಾವಿಗೀಡಾಗಿದ್ದು, ಕೆಲವರಿಗೆ ಗಾಯಗಳಾಗಿದ್ದವು.  ಪಾಕಿಸ್ತಾನಿ ಯೋಧರು ಮತ್ತೆ ಗಡಿಯಲ್ಲಿ ಕ್ಯಾತೆ ತೆಗೆದಿರುವುದರಿಂದ ಮುನ್ನಚ್ಚರಿಕೆ ಕ್ರಮವಾಗಿ ನೌಶೇರಾದ 51 ಶಾಲಾ-ಕಾಲೇಜುಗಳಿಗೆ ಅನಿರ್ದಿಷ್ಟಾವಧಿಯವರೆಗೆ ರಜೆ ನೀಡಲಾಗಿದೆ.

ಅರ್ನಿಯ ವಲಯ ಅಂತಾರಾಷ್ಟ್ರೀಯ ಗಡಿ ಬಳಿ ಪಾಕ್ ರೇಂಜರ್‍ಗಳು ನಿನ್ನೆ ನಡೆಸಿದ ಷೆಲ್ ಮತ್ತು ಗುಂಡಿನ ದಾಳಿಯಲ್ಲಿ ಭಾರತದ ಕೆಲವು ಯೋಧರಿಗೆ ಗಾಯಗಳಾಗಿವೆ.   ಮೊನ್ನೆ ನಡೆಸಿದ ಮೋರ್ಟಾರ್ ಷೆಲ್ ದಾಳಿಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟು ಕೆಲವರು ತೀವ್ರ ಗಾಯಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin