ಗಡಿಯಲ್ಲಿ ಮತ್ತೆ ಬಾಲ ಬಿಚ್ಚುತ್ತಿದ್ದಾರೆ ಉಗ್ರರು : ಜೈಷ್‍ ಭಯೋತ್ಪಾದಕರ 4 ನೆಲೆಗಳು ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Terror-Camp

ಜಮ್ಮು, ನ.3- ಭಾರತದ ಕಮ್ಯಾಂಡೋಗಳ ಸರ್ಜಿಕಲ್ ಸ್ಟ್ರೈಕ್ ನಂತರ ಗಡಿಯಲ್ಲಿ ಬಾಲ ಮುದುರಿಕೊಂಡಿದ್ದ ಪಾಕಿಸ್ತಾನ್ ಬೆಂಬಲಿತ ಉಗ್ರರು ಮತ್ತೆ ಚಿಗಿತುಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಜೈಷ್-ಎ-ಮಹಮದ್ ಸಂಘಟನೆಯ ಕನಿಷ್ಠ ನಾಲ್ಕು ಭಯೋತ್ಪಾದಕರ ನೆಲೆಗಳನ್ನು ಜಮ್ಮು ಮತ್ತು ಕಾಶ್ಮೀರದ ಸೇನೆಯ ಬೇಹುಗಾರಿಕೆ ವಿಭಾಗ ಪತ್ತೆ ಮಾಡಿದೆ.
ಭಾರತೀಯ ಯೋಧರು ಲಷ್ಕರ್-ಎ-ತೊಯ್ಬಾ ಉಗ್ರರ ನೆಲೆಗಳನ್ನು ಧೂಳೀಪಟ ಮಾಡಿದ್ದು, ಈಗ ಜೈಷ್ ಭಯೋತ್ಪಾದಕರು ಹೆಚ್ಚು ಸಕ್ರಿಯವಾಗಿರುವುದರಿಂದ ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಪಾಕಿಸ್ತಾನ ಪಡೆಗಳು ಭಾರೀ ಗುಂಡಿನ ಕಾಳಗ ನಡೆಸಿ ನಿನ್ನೆ ಆರು ಜನರನ್ನು ಕೊಂದ ಸಾಂಬಾ ವಲಯದ ಬಾರ್ಡರ್ ಔಟ್‍ಪೋಸ್ಟ್‍ನಿಂದ 5 ಕಿ.ಮೀ.ದೂರದಲ್ಲಿ ಈ 4 ಟೆರ್ರರ್ ಲಾಂಚ್ ಪ್ಯಾಡ್‍ಗಳು ಕಂಡುಬಂದಿವೆ. ಅಂತಾರಾಷ್ಟ್ರೀಯ ಗಡಿ ಬಳಿ ಮಸ್ರೂರ್ ಬಡಾ ಭಾಯ್, ಸುಕ್ಮಲ್, ಚಪ್ರಾಲ್ ಮತ್ತು ಲೂನಿ ಪ್ರದೇಶಗಳಲ್ಲಿ ಭಯೋತ್ಪಾದಕರ ನೆಲೆ ಮತ್ತು ರಹಸ್ಯ ಅಡಗುತಾಣ ಪತ್ತೆಯಾಗಿವೆ. ಇದರಲ್ಲಿ ಒಂದು ಕತುವಾದ ಹೀರಾನಗರ ಸೆಕ್ಟರ್‍ನ ಪಹರ್‍ಪುರ್‍ನ ಗಡಿ ಭದ್ರತಾ ಪಡೆಯ ಗಡಿ ಠಾಣೆಗೆ ತೀರಾ ಸನಿಹದಲ್ಲಿದೆ.  ಮಿಲಿಟರಿ ಸಮವಸ್ತ್ರಗಳನ್ನು ಧರಿಸಿದ್ದ ಭಾರೀ ಶಸ್ತ್ರಸಜ್ಜಿತ ಗುಂಪನ್ನು ಮಸ್ರೂಲ್ ಬಡಾ ಭಾಯ್ ಮೂಲಕ ಪಾಕಿಸ್ತಾನದ ನೂರ್-ಉಲ್-ಇಸ್ಲಾಮ್‍ನ ನೆಲೆ ಬಳಿ ಜಮಾವಣೆಗೊಳಿಸುತ್ತಿರುವ ಸಂಗತಿ ಸಹ ಬೆಳಕಿಗೆ ಬಂದಿದೆ.

ಸೆ.29ರಂದು ನಡೆದ ಸರ್ಜಿಕಲ್ ಸ್ಟ್ರೈಕ್ ನಂತರ ಉಗ್ರಗಾಮಿಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರಯಿಂದ (ಪಿಓಕೆ) ಜಮ್ಮು ಪ್ರಾಂತ್ಯದ ಅಂತಾರಾಷ್ಟ್ರೀಯ ಗಡಿಗೆ ತಮ್ಮ ನೆಲೆಗಳನ್ನು ಬದಲಿಸಿಕೊಂಡಿರುವುದು ದೃಢಪಟ್ಟಿದೆ.  ಭಾರತದ ಬೇಹುಗಾರಿಕೆ ಉಪಗ್ರಹ ಮತ್ತು ಮಾನವರಹಿತ ಕಣ್ಗಾವಲು ವಿಮಾನ ಕಣ್ಣಿಗೆ ಬೀಳವುದರಿಂದ ತಪ್ಪಿಸಿಕೊಳ್ಳಲು ಉಗ್ರರು ಈ ತಂತ್ರ ಅನುಸರಿದ್ದಾರೆ ಎಂದು ತಿಳಿದುಬಂದಿದೆ.  ಈ ಬೆಳವಣಿಗೆಯನ್ನು ಗಮನಿಸಿದರೆ ಪಾಕಿಸ್ತಾನಿ ಸೇನೆ ನೆರವಿನಿಂದ ಉಗ್ರರು ಮತ್ತೆ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin