ಗಡಿ ನಿಯಂತ್ರಣ ರೇಖೆಯ ಬಳಿ ಯೋಧರ ಗುಂಡಿಗೆ 4 ಉಗ್ರರು ಬಲಿ
ಶ್ರೀನಗರ, ಸೆ. 11- ಕಾಶ್ಮೀರದ ನೌಗಂ ವಲಯದ ಗಡಿ ನಿಯಂತ್ರಣ ರೇಖೆಯ ಬಳಿ ನಾಲ್ವರು ಉಗ್ರಗಾಮಿಗಳನ್ನು ಹೊಡೆದು ರುಳಿಸಿರುವ ಭಾರತೀಯ ಸೇನಾಪಡೆ, ಉಗ್ರರ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದೆ. ಕಾಶ್ಮೀರ ಕಣಿವೆಯ ನೌಗಂ ಸೆಕ್ಟರ್ನ ಎಲ್ಒಸಿ ಬಳಿ ಕೆಲವು ಉಗ್ರರ ಶಂಕಾಸ್ಪದ ಚಲನವಲನಗಳನ್ನು ಗಮನಿಸಿದ ಭಾರತೀಯ ಯೋಧರು ಎಚ್ಚೆತ್ತುಕೊಂಡು ಅತಿಕ್ರಮಣಕಾರರನ್ನು ಸದೆಬಡಿಯಲು ಸಜ್ಜಾದರು. ಈ ಸಂದರ್ಭದಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದಾಗ, ಸೈನಿಕರು ಪ್ರತ್ರಿಯಾಗಿ ಗುಂಡು ಹಾರಿಸಿದರು. ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರಗಾಮಿಗಳು ಹತರಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್ಐ ಹತ್ಯೆ : ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಪೊಲೀಸರು ಮತ್ತು ಉಗ್ರಗಾಮಿಗಳ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಓರ್ವ ಎಸ್ಐ ಸಾವಿಗೀಡಾಗಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳ ಗಾಯಗೊಂಡಿದ್ದಾರೆ. ಪೂಂಚ್ನ ಅಲ್ಲಾ ಪಿರ್ ಪ್ರದೇಶದ ಬಳಿ ಉಗ್ರಗಾಮಿಗಳು ಇರುವ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಾಗ ಗುಂಡಿನ ಚಕಮಕಿ ನಡೆಯಿತು. ಈ ಕಾಳಗದಲ್ಲಿ ಓರ್ವ ಸಬ್ಇನ್ಸ್ಪೆಕ್ಟರ್ ಸಾವನ್ನಪ್ಪಿದರು. ಇನ್ನಿಬ್ಬರು ಅಧಿಕಾರಿಗಳಿಗೆ ಗಾಯಗಳಾಗಿವೆ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉದ್ರಿಕ್ತ ಪ್ರತಿಭಟನೆಕಾರರು ಮತು ಭದ್ರತಾಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ 20ಕ್ಕೂ ಹೆಚ್ಚು ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ನಿನ್ನೆ ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಇಬ್ಬರು ಯುವಕರು ಹತರಾಗಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿತ್ತು.
► Follow us on – Facebook / Twitter / Google+