ಗಣಪತಿ ಆತ್ಮಹತ್ಯೆ ಪ್ರಕರಣ : ಆಡಳಿತ -ಪ್ರತಿಪಕ್ಷಗಳಿಂದ ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

vp
ಬೆಳಗಾವಿ(ಸುವರ್ಣಸೌಧ), ನ.13-ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ರಾಜಿನಾಮೆಗೆ ಒತ್ತಾಯಿಸಿ ಬಿಜೆಪಿ ಪಟ್ಟು ಹಿಡಿದ ಪರಿಣಾಮ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಮಾತಿನ ಚಕಮಕಿ, ಕೋಲಾಹಲ, ಆರೋಪ, ಪ್ರತ್ಯಾರೋಪ ವಿಧಾನಪರಿಷತ್‍ನಲ್ಲಿಂದು ನಡೆಯಿತು.

ಸಂತಾಪ ನಿಲುವಳಿ ಸೂಚನೆಯ ನಂತರ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು, ನಿಲುವಳಿ ಸೂಚನೆಯನ್ನು ಪ್ರಸ್ತಾಪಿಸಲು ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಅವಕಾಶ ನೀಡಿದರು. ವಿಷಯ ಪ್ರಸ್ತಾಪಿಸಿದ ಈಶ್ವರಪ್ಪ, ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿ 3 ತಿಂಗಳಲ್ಲಿ ವರದಿ ನೀಡಬೇಕೆಂದು ಆದೇಶಿಸಿದೆ. ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ಸ್ಥಳೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಂದಿನ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾಗಿದ್ದ ಪ್ರಣಬ್ ಮೊಹಂತಿ, ಎ.ಎನ್.ಪ್ರಸಾದ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಪ್ರಸ್ತುತ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಗಣಪತಿ ಆತ್ಮಹತ್ಯೆ ನಂತರ ಅವರ ತಂದೆ ಕುಶಾಲಪ್ಪ, ಪತ್ನಿ ಹಾಗೂ ಅವರ ಮಕ್ಕಳು ಠಾಣೆಗೆ ದೂರು ನೀಡಲು ಹೋದರೂ ಪೊಲೀಸರು ದಾಖಲಿಸಿಕೊಂಡಿಲ್ಲ. ಬಳಿಕ ಮಡಿಕೇರಿ ಜೆಎಂಎಫ್‍ಸಿ ನ್ಯಾಯಾಲಯ ಎಫ್‍ಐಆರ್ ಹಾಕಲು ಸೂಚಿಸಿದ ನಂತರ ಅಂದು ಅವರು ರಾಜೀನಾಮೆ ನೀಡಿದ್ದರು. ಈಗ ಸಿಬಿಐ, ಜಾರ್ಜ್ ಅವರನ್ನು ಮೊದಲನೇ ಆರೋಪಿ ಎಂದು ಎಫ್‍ಐಆರ್ ಹಾಕಿದ್ದರೂ ಏಕೆ ರಾಜೀನಾಮೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿ ತರಾತುರಿಯಲ್ಲಿ ಜಾರ್ಜ್ ಅವರಿಗೆ ಕ್ಲೀನ್‍ಚಿಟ್ ಕೊಡಿಸಿದೆ. ಎಫ್‍ಎಸ್‍ಎಲ್ ವರದಿ ಬರುವ ಮುನ್ನವೇ ಕ್ಲೀನ್‍ಚಿಟ್ ಕೊಟ್ಟಿದ್ದು ಎಷ್ಟರ ಮಟ್ಟಿಗೆ ಸರಿ ? ಇದು ಕೊಲೆ ಪ್ರಕರಣವಾಗಿದ್ದು, ಸರ್ಕಾರದಿಂದಲೇ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಎಫ್‍ಎಸ್‍ಎಲ್ ವರದಿ ಸಾಕಷ್ಟು ಲೋಪದೋಷದಿಂದ ಕೂಡಿದ್ದು, ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ. ಸಂವಿಧಾನದ ಹೆಸರಿನಲ್ಲಿ ಸರ್ಕಾರ ಪ್ರಾಮಾಣಿಕ ಅಧಿಕಾರಿಗಳನ್ನು ಕಗ್ಗೊಲೆ ಮಾಡಿದೆ. ಎಫ್‍ಐಆರ್ ಹಾಕಿದರೂ ರಾಜೀನಾಮೆ ಏಕೆ ಕೊಡುತ್ತಿಲ್ಲ ಎಂದು ಹರಿಹಾಯ್ದರು. ಬಾವಿಗಿಳಿದ ಸದಸ್ಯರು: ಜಾರ್ಜ್ ರಾಜೀನಾಮೆ ನೀಡಲೇಬೇಕೆಂದು ಪಟ್ಟು ಹಿಡಿದ ಪ್ರತಿಪಕ್ಷ ಬಿಜೆಪಿ ಸದಸ್ಯರುಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಬಿತ್ತಿ ಪತ್ರಗಳನ್ನು ಹಿಡಿದು ಸದನದ ಭಾವಿಗಿಳಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರಿ ಮಾತಿನ ಚಕಮಕಿ ನಡೆಯಿತು. ಸರ್ಕಾರವೇ ವ್ಯವಸ್ಥಿತವಾಗಿ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಇದೊಂದು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು. ಇದರಿಂದ ಕೆರಳಿದ ಆಡಳಿತ ಪಕ್ಷದ ಸದಸ್ಯರು, ಕೊಲೆ ಮಾಡಿರುವುದನ್ನು ನೀವು ನೋಡಿದ್ದೀರಾ ? ಅದಕ್ಕೆ ಸಾಕ್ಷಿ ಏನು ಎಂದು ಪ್ರಶ್ನಿಸಿದರು. ಇದರಿಂದ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಪ್ರತಿಭಟಿಸಿದರು. ಇದಕ್ಕೂ ಮುನ್ನ ವಿಷಯ ಪ್ರಸ್ತಾಪ ಕುರಿತಂತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕಾವೇರಿದ ಚರ್ಚೆ ನಡೆಯಿತು.

ಪ್ರಸ್ತಾವನೆಯನ್ನು ನಿಯಮ 59ರ ಅಡಿ ಚರ್ಚೆ ಮಾಡಬೇಕೇ ? ಇಲ್ಲವೇ ಬೇರೆ ರೂಪದಲ್ಲಿ ತೆಗೆದುಕೊಳ್ಳಬೇಕೇ ಎಂಬುದರ ಬಗ್ಗೆ ಸಭಾಪತಿಗಳು ಸದಸ್ಯರ ಅಭಿಪ್ರಾಯ ಪಡೆಯಲು ಮುಂದಾದರು. ಈ ವೇಳೆ ಸಚಿವ ರಮೇಶ್‍ಕುಮಾರ್ ಅವರು ಸದನ ಹಿಂದಿನಿಂದಲೂ ನಡೆದುಕೊಂಡ ಬಂದ ರೀತಿಯಲ್ಲೇ ಚರ್ಚೆಯಾಗಬೇಕು. ವಿಷಯದ ಗಂಭೀರತೆಯನ್ನು ಪರಿಗಣಿಸಿ ಸಭಾಪತಿಗಳು ತೀರ್ಮಾನ ಮಾಡಬೇಕು. ಸದನ ಸಲಹಾ ಸಮಿತಿ ತೆಗೆದುಕೊಂಡ ನಿರ್ಧಾರವೇ ಅಂತಿಮವಾಗುವುದಿಲ್ಲ. ಸದನದಲ್ಲಿ ಸದಸ್ಯರ ಅಭಿಪ್ರಾಯವೇ ಅಂತಿಮವಾಗಬೇಕೆಂದು ಸಲಹೆ ನೀಡಿದರು. ಈ ವೇಳೆ ಜೆಡಿಎಸ್‍ನ ಪುಟ್ಟಣ್ಣ, ಬಿಜೆಪಿಯ ರಾಮಚಂದ್ರೇಗೌಡ, ಕಾಂಗ್ರೆಸ್‍ನ ಐವಾನ್ ಡಿಸೋಜ ಸೇರಿದಂತೆ ಮತ್ತಿತರ ಸದಸ್ಯರು ಮಾತನಾಡಿದರು. ಅಂತಿಮವಾಗಿ ಸಭಾಪತಿ ಶಂಕರಮೂರ್ತಿ ಅವರು ಈಶ್ವರಪ್ಪನವರಿಗೆ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಿದರು. ಈಶ್ವರಪ್ಪ ವಿಷಯ ಪ್ರಸ್ತಾಪಿಸುತ್ತಿದ್ದಾಗ ಕಾಂಗ್ರೆಸ್‍ನ ವಿ.ಎಸ್.ಉಗ್ರಪ್ಪ ಕ್ರಿಯಾಲೋಪ ಎತ್ತಲು ಮುಂದಾದರು. ಈಗಾಗಲೇ ರಮೇಶ್‍ಕುಮಾರ್ ಅವರು ಒಂದು ಕ್ರಿಯಾಲೋಪ ಎತ್ತಿದ್ದಾರೆ. ಪುನಃ ಅದಕ್ಕೆ ಅವಕಾಶ ನೀಡಬೇಡಿ ಎಂದು ಬಿಜೆಪಿ ಸದಸ್ಯರು ಸಭಾಪತಿಗಳಿಗೆ ಒತ್ತಾಯಿಸಿದರು.

ಈ ಸದನದ ಯಾವುದೇ ಒಬ್ಬ ಸದಸ್ಯ ವಿಷಯದ ಗಂಭೀರತೆ ಮೇಲೆ ಕ್ರಿಯಾ ಲೋಪ ಎತ್ತುವುದು ಅವರ ಹಕ್ಕು. ನನಗೆ ಕ್ರಿಯಾಲೋಪ ಎತ್ತಲು ಅವಕಾಶ ನೀಡಿ ಎಂದು ಪಟ್ಟು ಹಿಡಿದರು. ಈ ಹಂತದಲ್ಲಿ ಪುನಃ ಆಡಳಿತ ಮತ್ತು ಪ್ರತಿಪಕ್ಷದವರ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲ ಉಂಟಾಯಿತು. ಆಗ ಮಧ್ಯ ಪ್ರವೇಶಿಸಿದ ರಮೇಶ್‍ಕುಮಾರ್ ,ಸದಸ್ಯರು ಕ್ರಿಯಾಲೋಪ ಎತ್ತಿದಾಗ ಸಭಾಪತಿಗಳು ಇದನ್ನು ಮಾನ್ಯ ಮಾಡಬೇಕು, ಇಲ್ಲವೇ ತಿರಸ್ಕರಿಬೇಕು. ಕ್ರಿಯಾಲೋಪದ ಬಗ್ಗೆ ಸಂಸತ್ ಹಾಗೂ ವಿಧಾನಸಭೆಯಲ್ಲಿ ಗಂಟೆಗಟ್ಟಲೆ ಚರ್ಚೆ ನಡೆದಿದೆ. ಸದಸ್ಯರ ಅಭಿಪ್ರಾಯವನ್ನು ಮನ್ನಿಸಿ ಎಂದು ಮನವಿ ಮಾಡಿದರು. ಆಗ ಉಗ್ರಪ್ಪ ನೀವು ಕ್ರಿಯಾಲೋಪಕ್ಕೆ ಎತ್ತಲು ಅವಕಾಶ ನೀಡದೆ ನನ್ನ ಹಕ್ಕನ್ನು ಕಿತ್ತುಕೊಳ್ಳಲು ಮುಂದಾಗಿದ್ದೀರಿ. ಈ ಬಗ್ಗೆ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಚರ್ಚೆ ನಡೆದಿದ್ದರೂ ನೀವು ಏಕೆ ಅವಕಾಶ ಕೊಡುತ್ತಿಲ್ಲ. ನನ್ನ ಹಕ್ಕನ್ನು ಮೊಟಕುಗೊಳಿಸಲು ಯಾರಿದಂದಲೂ ಸಾಧ್ಯವಿಲ್ಲ. ಈ ಸದನ ಮುಖ್ಯವೋ, ಸಭಾಪತಿಗಳು ದೊಡ್ಡವರೋ ಎಂಬುದು ಇಂದೇ ನಿರ್ಣಯವಾಗಲಿ. ನಿಯಮಾವಳಿ ಮತ್ತು ಸದನಕ್ಕೆ ವಿರುದ್ಧವಾಗಿ ಮಾತನಾಡಿದರೆ ಅದನ್ನು ನೋಡಿಕೊಂಡು ಸುಮ್ಮನಿರಬೇಕೆ ಎಂದು ಪ್ರಶ್ನಿಸಿದರು.

ಪದೇ ಪದೇ ಕುಳಿತುಕೊಳ್ಳಿ ಎಂದು ಸಭಾಪತಿಗಳು ಉಗ್ರಪ್ಪಗೆ ಮನವಿ ಮಾಡಿದರು. ಆಗಲೂ ಮಾತು ಮುಂದುವರೆಸಿದಾಗ ಮೊದಲು ಪೀಠಕ್ಕೆ ಗೌರವ ಕೊಡುವುದನ್ನು ಕಲಿಯಿರಿ. ನಿಮ್ಮ ಕ್ರಿಯಾಲೋಪವನ್ನು ಬೇರೆ ರೂಪದಲ್ಲಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಪುನಃ ಈಶ್ವರಪ್ಪ ಮಾತು ಮುಂದುವರೆಸಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಜಾರ್ಜ್ ಅವರು ರಾಜೀನಾಮೆ ನೀಡದೆ ಬೇರೆ ದಾರಿಯಿಲ್ಲ. ಅವರೇ ಪ್ರಮುಖ ಆರೋಪಿಯಾಗಿರುವುದರಿಂದ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದರು. ಆಗ ಉಗ್ರಪ್ಪ ಸುಪ್ರೀಂಕೋರ್ಟ್‍ನಲ್ಲಿ ಎಲ್ಲಿಯೂ ಜಾರ್ಜ್ ಹೆಸರನ್ನು ಪ್ರಸ್ತಾಪ ಮಾಡಿಲ್ಲ. ಒಂದು ವೇಳೆ ಅವರ ಹೆಸರನ್ನು ಪ್ರಸ್ತಾಪಿಸಿದರೆ ನಾನು ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಹೋಗುತ್ತೇನೆ ಎಂದು ಸವಾಲು ಹಾಕಿದರು. ಈ ವೇಳೆ ಗದ್ದಲ ಉಂಟಾದ್ದರಿಂದ ಸಭಾಪತಿ ಅವರು ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

Facebook Comments

Sri Raghav

Admin