ಗಣಿಧಣಿ ಜನಾರ್ದನ ರೆಡ್ಡಿ ಪುತ್ರಿ ವಿವಾಹ : ಅಡ್ಡಕತ್ತರಿಯಲ್ಲಿ `ಕಮಲ’ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

Jani-daughter-marriage
ಬೆಂಗಳೂರು, ನ.15- ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲುಶಿಕ್ಷೆಗೆ ಗುರಿಯಾಗಿ ಜಾಮೀನಿನ ಮೇಲೆ ಹೊರಬಂದಿರುವ ಗಣಿಧಣಿ ಜನಾರ್ದನ ರೆಡ್ಡಿ ಪುತ್ರಿ ವಿವಾಹ ಸಮಾರಂಭಕ್ಕೆ ಪಕ್ಷದ ಯಾವುದೇ ನಾಯಕರು ತೆರಳದಂತೆ ಕಟ್ಟಪ್ಪಣೆ ಸೂಚಿಸಿರುವುದು ಬಿಜೆಪಿ ನಾಯಕರನ್ನು ಸಂದಿಗ್ಧ ಸ್ಥಿತಿಗೆ ಸಿಲುಕಿಸಿದೆ.ನಾಳೆ ಜನಾರ್ದನರೆಡ್ಡಿ ಪುತ್ರಿ ಬ್ರಹ್ಮಿಣಿ ವೈಭವೋಪೇತ ವಿವಾಹ ಸಮಾರಂಭ ಅರಮನೆ ಮೈದಾನದಲ್ಲಿ ನಡೆಯಲಿದೆ. ಬಳಿಕ ಆರತಕ್ಷತೆ ಕಾರ್ಯಕ್ರಮ ಗುರುವಾರ ಜರುಗಲಿದೆ.ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸ್ವತಃ ಜನಾರ್ದನರೆಡ್ಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಮುಖಂಡರಾದ ಜಗದೀಶ್ ಶಟ್ಟರ್, ಈಶ್ವರಪ್ಪ, ಆರ್.ಅಶೋಕ್ ಸೇರಿದಂತೆ ಪಕ್ಷದ ಸಂಸದರು, ಶಾಸಕರು, ಮಾಜಿ ಸಚಿವರು ಮತ್ತಿತರ ಧುರೀಣರನ್ನು ಆಹ್ವಾನಿಸಿದ್ದರು.

 
ಆದರೆ, ಕಳೆದ ರಾತ್ರಿ ಬಿಜೆಪಿಯ ಕೇಂದ್ರ ವರಿಷ್ಠರು ಕೊಟ್ಟಿರುವ ಸೂಚನೆ ವಿವಾಹ ಸಮಾರಂಭಕ್ಕೆ ಹೋಗಬೇಕೆ, ಬೇಡವೆ ಎಂಬ ಗೊಂದಲ ಸೃಷ್ಟಿಸಿದೆ.ಯಾವುದೇ ಕಾರಣಕ್ಕೂ ಜನಾರ್ದನ ರೆಡ್ಡಿ ಪುತ್ರಿಯ ವಿವಾಹ ಸಮಾರಂಭಕ್ಕೆ ಹೋಗಕೂಡದೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ಉಸ್ತುವಾರಿ ಮುರಳಿಧರರಾವ್ ಮೂಲಕ ಮೌಖಿಕ ಸಂದೇಶ ರವಾನಿಸಿದ್ದಾರೆ.ಜನಾರ್ದನರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿಕೊಂಡ ಮೇಲೆ ಪಕ್ಷದ ಪ್ರಮುಖ ನಾಯಕರ ಜತೆ ಈಗಲೂ ಉತ್ತಮ ಸಂಬಂಧವನ್ನೇ ಹೊಂದಿದ್ದರು. ಒಂದು ಹಂತದಲ್ಲಿ ಅವರನ್ನು ಪಕ್ಷಕ್ಕೆ ಕರೆತರಬೇಕೆಂಬ ಮಾತುಗಳು ಕೂಡ ಕೇಳಿಬಂದಿದ್ದವು. ರೆಡ್ಡಿ ಆಪ್ತ ರಾಮುಲು ಈಗಾಗಲೇ ಬಿಜೆಪಿಯಿಂದ ಸಂಸದರಾಗಿದ್ದಾರೆ.  ಪಕ್ಷದಿಂದ ಆಂತರಿಕವಾಗಿ ರೆಡ್ಡಿ ದೂರವಾಗಿದ್ದರೂ ಪ್ರಮುಖರ ಜತೆ ಒಡನಾಟ ಹೊಂದಿರುವುದರಿಂದ ಬಹುತೇಕರು ವಿವಾಹ ಸಮಾರಂಭಕ್ಕೆ ತೆರಳಲು ಮುಂದಾಗಿದ್ದರು.

 
ಇದೀಗ ರೆಡ್ಡಿ ಪುತ್ರಿಯ ವಿವಾಹ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ವಿವಾದಕ್ಕೂ ಕಾರಣವಾಗಿದೆ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧ ತೊಡೆ ತಟ್ಟಿದ್ದಾರೆ. ಕಪ್ಪು ಕುಳಗಳಿಗೆ ಶಾಶ್ವತ ಬೇಡಿ ತೊಡಿಸುವ ನಿಟ್ಟಿನಲ್ಲಿ 500 ಮತ್ತು 1000ರೂ. ಮುಖಬೆಲೆಯ ನೋಟುಗಳ ಚಲಾವಣೆಗೆ ನಿಷೇಧ ಹೇರಿದ್ದಾರೆ.ರೆಡ್ಡಿ ಹೇಳಿ ಕೇಳಿ ಅಕ್ರಮ ಗಣಿಗಾರಿಕೆಯಲ್ಲಿ ಜೈಲುಶಿಕ್ಷೆಗೆ ಗುರಿಯಾಗಿದ್ದರು. ಇಂತಹ ಸಂದರ್ಭದಲ್ಲಿ ಅವರ ಪುತ್ರಿಯ ವಿವಾಹಕ್ಕೆ ಹಾಜರಾದರೆ ಪಕ್ಷ ಮುಜುಗರಕ್ಕೆ ಸಿಲುಕುತ್ತದೆ ಎಂಬ ಅಳುಕು ಎಲ್ಲರಲ್ಲಿದೆ. ಮದುವೆ ಸಮಾರಂಭಕ್ಕೆ ಹೋದರೆ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಭೀತಿಯಿಂದ ಬಹುತೇಕರು ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದಾರೆ.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin