ಗಣಿಧಣಿ ಜನಾರ್ಧನ ರೆಡ್ಡಿಗೆ ಮತ್ತೆ ಸಂಕಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy

ಬೆಂಗಳೂರು,ಮಾ.27- ಇತ್ತೀಚಗಷ್ಟೇ ಕಾನೂನಿನ ಕುಣಿಕೆಯಿಂದ ಪಾರಾಗಿದ್ದ ಮಾಜಿ ಸಚಿವ ಹಾಗೂ ಬಳ್ಳಾರಿ ಗಣಿಧಣಿ ಜನಾರ್ಧನ ರೆಡ್ಡಿಗೆ ಮತ್ತೆ ಸಂಕಷ್ಟದ ದಿನಗಳು ಎದುರಾಗುವ ಸಾಧ್ಯತೆಗಳಿವೆ.   ಕರ್ನಾಟಕ ಹೈಕೋರ್ಟ್ ಜನಾರ್ಧನ ರೆಡ್ಡಿಯ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಮೊಕದ್ದಮೆಯನ್ನು ರದ್ದುಪಡಿಸಿತ್ತು. ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ಈ ಸಂಬಂಧ ಈಗಾಗಲೇ ಇಡಿ ಅಧಿಕಾರಿಗಳು ಕಾನೂನು ತಜ್ಞರ ಸಲಹೆ ಪಡೆದಿದ್ದಾರೆ.
ಅವರ ಸಲಹೆಯಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬೇಕೆಂಬ ಸಲಹೆಯನ್ನು ನೀಡಿದೆ. ಹೀಗಾಗಿ ಯಾವುದೇ ವೇಳೆ ಸುಪ್ರೀಂಕೋರ್ಟ್ ಕದ ತಟ್ಟುವ ಸಾಧ್ಯತೆ ಇದೆ. ಒಂದು ವೇಳೆ ಪ್ರಕರಣ ಮತ್ತೆ ಸುಪ್ರೀಂಕೋರ್ಟ್‍ಗೆ ಹೋದರೆ ಕಾನೂನು ಸಂಕಷ್ಟಗಳು ಎದುರಾಗಲಿವೆ.

ಏನಿದು ಪ್ರಕರಣ:

ಜನಾರ್ಧನ ರೆಡ್ಡಿ ಒಡೆತನದ ಓಬಳಪುರಂ ಗಣಿ ಕಂಪನಿಯಲ್ಲಿ ಅಕ್ರಮವಾಗಿ ಗಣಿ ಚಟುವಟಿಕೆ ನಡೆಸಲಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅವರ ಪತ್ನಿ ಅರುಣಾ ಜನಾರ್ಧನ ರೆಡ್ಡಿ ಒಡೆತನದ ಒಟ್ಟು 884 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.   ರೆಡ್ಡಿಗೆ ಸೇರಿದ ಹೆಲಿಕಾಪ್ಟರ್, ಬೆಲೆ ಬಾಳುವ ಕಾರುಗಳು, ಬೆಂಗಳೂರಿನಲ್ಲಿರುವ ಕಚೇರಿ, ಫ್ಲಾಟ್, ನಗದು, ಚಿನ್ನಾಭರಣ ಸೇರಿದಂತೆ ಮತ್ತಿತರ ಐಷರಾಮಿ ವಸ್ತುಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಓಬಳಾಪುರಂ ಕಂಪನಿಯ ಮಾಲೀಕರಾಗಿರುವ ರೆಡ್ಡಿ ಕಾನೂನು ಉಲ್ಲಂಘಿಸಿ ಗಣಿ ವ್ಯವಹಾರ ನಡೆಸಿದ್ದಾರೆ ಎಂಬ ಸಿಬಿಐ ತನಿಖಾಧಿಕಾರಿಗಳು ದೂರಿನ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.   2007 ಜೂನ್ 21ರಿಂದ 2009 ಮೇ 15ರವರೆಗೆ ರೆಡ್ಡಿ ಬೇನಾಮಿ ವಹಿವಾಟು ಕಾಯ್ದೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆಸಿರುವುದರಿಂದ ಇಡಿ ಅಧಿಕಾರಿಗಳು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.   ಇಡಿ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ರೆಡ್ಡಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ನೇತೃತ್ವದ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.   ಅರ್ಜಿ ವಿಚಾರಣೆ ನಡೆಸಿದ ಪೀಠ ಇಡಿ ಅಧಿಕಾರಿಗಳ ಆದೇಶವನ್ನು ವಜಾ ಮಾಡಿತ್ತಲ್ಲದೆ ಅವರ ವಿರುದ್ಧ ಗರಂ ಆಗಿತ್ತು. ಇದೀಗ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ಸಜ್ಜಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin