ಗಣಿಧಣಿ ರೆಡ್ಡಿಗಾದ ಸ್ಥಿತಿ ಡಿಕೆಶಿಗೂ ಬರಬಹುದೇ..!?

ಈ ಸುದ್ದಿಯನ್ನು ಶೇರ್ ಮಾಡಿ

DKShivakumar

– ರವೀಂದ್ರ.ವೈ.ಎಸ್

ಬೆಂಗಳೂರು,ಆ.3-ಅವರಿಬ್ಬರು ಸಮಕಾಲೀನ ವಯಸ್ಕರು. ರಾಜಕೀಯದಲ್ಲಿ ಬೆಳೆಯಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡವರು. ನೋಡು ನೋಡುತ್ತಲೇ ಎದುರಾಳಿಗಳು ಹೊಟ್ಟೆ ಉರಿಯುವಷ್ಟು ಬಹುಬೇಗನೆ ಬೆಳೆದವರು. ಸಾಲದ್ದಕ್ಕೆ ಅಂದುಕೊಂಡಿದ್ದನ್ನು ಸಾಧಿಸುವ ಛಲಗಾರರು. ಆದರೆ ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯವನು ಎಂಬಂತಾಗಿದೆ ಇವರ ಕಥೆ.  ಇದು ಯಾವುದೇ ಸಿನಿಮಾ ಇಲ್ಲವೇ ಧಾರವಾಹಿಯ ಮುನ್ನುಡಿಯೂ ಅಲ್ಲ. ಕರ್ನಾಟಕದಲ್ಲಿ ಪ್ರವರ್ಧಮಾನಕ್ಕೆ ಬಂದ ಇಬ್ಬರು ರಾಜಕಾರಣಿಗಳು ಹೇಗೆ ಅಧಃಪತನವಾಗುತ್ತಿದ್ದಾರೆ ಎಂಬುದಕ್ಕೆ ನಡೆದಿರುವ ಪ್ರತ್ಯಕ್ಷ ನಿದರ್ಶನ.

ಒಬ್ಬರು ಅಕ್ರಮ ಗಣಿಗಾರಿಕೆ ಮೂಲಕ ಬಹುಬೇಗನೆ ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆದು ಅಷ್ಟೇ ಶೀಘ್ರದಲ್ಲಿ ತಮ್ಮ ಸಾಮ್ರಾಜ್ಯದಲ್ಲಿ ಕುಸಿದು ಬಿದ್ದು ಜೈಲು ಪಾಲಾದರು. ಮತ್ತೊಬ್ಬರು ಯಾವುದೇ ಕ್ಷಣದಲ್ಲಿ ಶ್ರೀಕೃಷ್ಣನ ಜನ್ಮ ಸ್ಥಳಕ್ಕೆ ಹೋಗುವ ಸಿದ್ಧತೆಯಲ್ಲಿದ್ದಾರೆ.  ಬಳ್ಳಾರಿಯ ಪೊಲೀಸ್ ಪೇದೆಯ ಮಗ ಗಾಲಿ ಜನಾರ್ಧನ ರೆಡ್ಡಿ ಹಾಗೂ ರಾಮನಗರ ಜಿಲ್ಲೆಯ ಕನಕಪುರದ ಓರ್ವ ರೈತನ ಮಗನಾಗಿರುವ ಡಿ.ಕೆ.ಶಿವಕುಮಾರ್ ಅಲಿಯಾಸ್ ಡಿಕೆಶಿ ರಾಜಕೀಯದಲ್ಲಿ ಬೆಳೆದ ಪರಿ ಎದುರಾಳಿಗಳನ್ನು ಕಣ್ಣು ಕುಕ್ಕಿಸುವಂತಿತ್ತು.  ಈಗಾಗಲೇ ಜನಾರ್ಧನ ರೆಡ್ಡಿ ಜೈಲು ಪಾಲಾಗಿ ಜಾಮೀನನ ಮೇಲೆ ಹೊರಬಂದು ಸದ್ಯಕ್ಕೆ ಬಿಜೆಪಿಯಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದರಾದರೂ ವರಿಷ್ಠರು ಮಾತ್ರ ಹತ್ತಿರ ಬಿಟ್ಟುಕೊಟ್ಟಿಲ್ಲ.  ಇನ್ನು ಡಿ.ಕೆ.ಶಿವಕುಮಾರ್ ಸದ್ಯಕ್ಕೆ ಐಟಿ ಅಧಿಕಾರಿಗಳ ಗಾಳಕ್ಕೆ ಬಿದ್ದಿದ್ದಾರೆ. ಮುಂದೆ ಈ ಪ್ರಕರಣ ಇನ್ನು ಯಾವ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ.

ಮುಂದೆ ಜಾರಿ ನಿರ್ದೇಶನಾಲಯ, ಸಿಬಿಐನಂತಹ ತನಿಖಾ ಸಂಸ್ಥೆಗಳು ಡಿಕೆಶಿಯ ಹೆಡೆಮುರಿ ಕಟ್ಟಿದರೆ ಅಚ್ಚರಿಯಿಲ್ಲ. ಒಂದು ಬಾರಿ ಕೇಂದ್ರದ ತನಿಖಾ ಸಂಸ್ಥೆಗಳು ಯಾವುದೇ ಒಬ್ಬ ರಾಜಕಾರಣಿ ಮೇಲೆ ಮುಗಿಬಿದ್ದರೆ ಅದರಿಂದ ಪಾರಾಗುವುದು ಸುಲಭವಲ್ಲ.  ಸದ್ಯಕ್ಕೆ ಡಿಕೆಶಿಯ ರಾಜಕಾರಣ ಮುಗಿಯಿತು ಎಂದು ಸುಲಭವಾಗಿ ಹೇಳಲು ಸಾಧ್ಯವಿಲ್ಲ. ಮತ್ತೆ ಫಿನಿಕ್ಸ್ ನಂತೆ ನಾನು ಬೂದಿಕೆಂಡದಿಂದ ಎದ್ದು ಬರುತ್ತೇನೆ ಎಂದು ಅವರು ಗುಡುಗಬಹುದು. ಆದರೆ ಇದು ಅವರು ಅಂದುಕೊಂಡಷ್ಟು ದಾರಿ ಸುಲಭವಾಗಿಲ್ಲ ಎಂಬುದು ಸ್ವತಃ ಶಿವಕುಮಾರ್‍ಗೂ ತಿಳಿದಿದೆ.

ನಾಳೆ ಜಾರಿ ನಿರ್ದೇಶನಾಯಲ(ಇಡಿ) ಅಧಿಕಾರಿಗಳು ಎಂಟ್ರಿ ಕೊಟ್ಟರೆ ಡಿಕೆಶಿ ಹಾಗೂ ಅವರ ಕುಟುಂಬ ಸದಸ್ಯರ ಆಸ್ತಿ ಜಪ್ತಿಯಾಗುತ್ತದೆ. ಬ್ಯಾಂಕ್ ವಹಿವಾಟಿಗೂ ಪರದಾಡಬೇಕಾಗುತ್ತದೆ. 100 ರೂ. ವಹಿವಾಟು ನಡೆಸಬೇಕಾದರೆ ಇಡಿ ಒಪ್ಪಿಗೆ ಇಲ್ಲದೆ ಏನೂ ಮಾಡುವಂತಿಲ್ಲ.

ಇಬ್ಬರಲ್ಲೂ ಸಾಮ್ಯತೆ ಇದೆ:

ರಾಜ್ಯ ರಾಜಕಾರಣದಲ್ಲಿ ಡಿಕೆಶಿ ಸರಿಸುಮಾರು ಎರಡೂವರೆ ದಶಕದಿಂದ ತಮ್ಮ ಛಾಪು ಮೂಡಿಸಿಕೊಂಡಿದ್ದಾರೆ. ಇನ್ನು ಬಳ್ಳಾರಿಯ ಗಣಿದಣಿ ಜನಾರ್ಧನ ರೆಡ್ಡಿ 95ರ ದಶಕದ ನಂತರ ಪ್ರವರ್ಧಮಾನಕ್ಕೆ ಬಂದವರು.  ಬಳ್ಳಾರಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಲೋಕಸಭೆ ಚುನಾವಣೆಗೆ ನಿಂತಾಗ ಅಂದು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದದ್ದು ಇಂದಿನ ಕೇಂದ್ರದ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್.  ರೆಡ್ಡಿ ಸಹೋದರರ ಪಾಲಿನ ಅಮ್ಮನಾಗಿದ್ದ ಸುಷ್ಮಾರನ್ನು ಗೆಲ್ಲಿಸಿಕೊಡಲು ಸಾಧ್ಯವಾಗದಿದ್ದರೂ ಕಾಂಗ್ರೆಸ್‍ಗೆ ಹಣ್ಣುಗಾಯಿ ನೀರುಗಾಯಿ ಮಾಡಿದ್ದು ಸುಳ್ಳಲ್ಲ. ತದನಂತರ ನಡೆದ ಎಲ್ಲ ಚುನಾವಣೆಗಳಲ್ಲೂ ಬಿಜೆಪಿಯನ್ನು ಗೆಲ್ಲಿಸಿಕೊಟ್ಟ ಕೀರ್ತಿ ರೆಡ್ಡಿಗೆ ಸಲ್ಲುತ್ತದೆ.

ಜನಾರ್ಧನ ರೆಡ್ಡಿ ಮತ್ತು ಡಿ.ಕೆ.ಶಿವಕುಮಾರ್ ಸಮವಯಸ್ಕರು. ಇಬ್ಬರಲ್ಲೂ ಸೇಡು, ಸಿಟ್ಟು , ಹಠಮಾರಿತನ, ಎದುರಾಳಿಗಳನ್ನು ಮುಗಿಸಬಲ್ಲ ಜಾಣ್ಮೆ ಚಾಕಚಕ್ಯತೆ ಇದೆ. ಜೊತೆಗೆ ಸಾಕಷ್ಟು ಹಣಬಲ, ಬೆಂಬಲಿಗರ ಪಡೆ ಕಟ್ಟಿಕೊಂಡಿದ್ದರು.   ಮಹಾರಾಷ್ಟ್ರದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಇದ್ದಕ್ಕಿದ್ದಂತೆ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ವಿರುದ್ಧ ಕೆಲ ಶಾಸಕರು ಬಂಡೆದ್ದರು. ಆಗ ಸರ್ಕಾರವನ್ನು ಉಳಿಸಿಕೊಳ್ಳಲು ಅಂದಿನ ಶಾಸಕರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿತ್ತು.

ಒಬ್ಬ ಸಂಪುಟ ದರ್ಜೆಯ ಸಚಿವರಾಗಿದ್ದ ಡಿಕೆಶಿ ಶಾಸಕರನ್ನು ರೆಸಾರ್ಟ್‍ನಲ್ಲಿ ಕೂಡಿಟ್ಟು ಅವರ ಇಷ್ಟಕಷ್ಟಗಳನ್ನು ನೋಡಿದ್ದಲ್ಲದೆ ಸರ್ಕಾರಕ್ಕೆ ಎದುರಾಗಿದ್ದ ಗಂಡಾಂತರವನ್ನು ಪಾರು ಮಾಡಿದ್ದರು.  ಅಂದಿನಿಂದಲೇ ಡಿಕೆಶಿ ಹೈಕಮಾಂಡ್ ಪಾಲಿಗೆ ಎಟಿಎಂ, ರಾಜಕೀಯ ಚಾಣಕ್ಯ, ಮದಗಜ, ಎದುರಾಳಿಗಳನ್ನು ಪುಡಿಗಟ್ಟಬಲ್ಲ ಛಾತಿಯುಳ್ಳವರು ಎಂದು ಹೈಕಮಾಂಡ್ ಗುರುತಿಸಿತು.   ಇಂತಹ ಡಿಕೆಶಿ ಬರಬರುತ್ತಾ ರಾಜ್ಯ ರಾಜಕೀಯದಲ್ಲಿ ಬೆಳೆಯುತ್ತಾ ಎದುರಾಳಿಗಳನ್ನು ಹದ್ದುಬಸ್ತಿನಲ್ಲಿಟ್ಟರು. ಅದರಲ್ಲೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ವಿರೋಧಿಸುತ್ತಲೇ ಹಂತ ಹಂತವಾಗಿ ಏರುತ್ತಲೇ ಬಂದರು.

ಸಾಲದಕ್ಕೆ ಹೈಕಮಾಂಡ್‍ನಲ್ಲಿ ಅವರಿಗಿದ್ದ ಪ್ರಭಾವ ಬಳಸಿಕೊಂಡು ಬೇರೆ ಬೇರೆ ರಾಜ್ಯಗಳ ಉಸ್ತುವಾರಿಗೆ ನೇಮಕವಾದರು. ಪಕ್ಷ ವಹಿಸಿದ ಯಾವುದೇ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸಿ ಹೈಕಮಾಂಡ್‍ಗೆ ನಿಷ್ಠಾವಂತ ನಾಯಕನಾಗಿ ಬೆಳೆದರು.   ಇತ್ತೀಚೆಗೆ ನಡೆದ ಗುಂಡ್ಲುಪೇಟೆ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್, ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್.ವೈ.ಗೋಪಾಲಕೃಷ್ಣ ಗೆಲ್ಲಿಸಿದ್ದು ಅವರ ರಾಜಕೀಯ ಚಾಣಕ್ಷತನಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಒಂದೆಡೆ ಶಿವಕುಮಾರ್‍ಗೆ ಪಕ್ಷದಲ್ಲಿ ಎಷ್ಟು ಆಪ್ತರಿದ್ದರೋ ಅಷ್ಟೇ ಎದುರಾಗಳೂ ಇದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಇನ್ನೇನು ಅವರಿಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಅವರ ಪರ ಹೈಕಮಾಂಡ್ ಮಟ್ಟದಲ್ಲಿ ಯಾರೋಬ್ಬರು ಬ್ಯಾಟಿಂಗ್ ಮಾಡಲಿಲ್ಲ. ಆದರೂ ಹೈಕಮಾಂಡ್‍ಗೆ ಮಾತ್ರ ಡಿಕೆಶಿ ಎಂದರೆ ಅಚ್ಚುಮೆಚ್ಚು.
ಡಿಕೆಶಿ ಅಂತೆ ಜನಾರ್ಧನ ರೆಡ್ಡಿ ಕೂಡ ಹುಂಬುತನದ ರಾಜಕಾರಣಿ. ಏನು ಬೇಕಾದರೂ ಮಾಡಬಲ್ಲೆ, ಯಾರನ್ನಾದರೂ ಎದುರಿಸಬಲ್ಲೇ ಎಂಬ ಹಪಾಹಪಿಗೆ ಬಿದ್ದವರು. ಅಲ್ಪ ಕಾಲದಲ್ಲೇ ನೂರಾರು ಕೋಟಿ ಒಡೆಯರಾಗಿದ್ದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ನಾಯಕತ್ವದ ವಿರುದ್ದ ಸಿಡಿದೆದ್ದು ಶಾಸರಕನ್ನು ರೆಸಾರ್ಟ್‍ಗೆ ಕರೆದೊಯ್ದಿದ್ದರು. ಒಂದು ಹಂತದಲ್ಲಿ ಬಳ್ಳಾರಿ ರಿಪಬ್ಲಿಕ್ ಸಾಮ್ರಾಜ್ಯದ ಅಘೋಷಿತ ನಾಯಕನಾಗಿದ್ದ ರೆಡ್ಡಿಗೆ ಸಿಬಿಐ ಯಾವ ಪರಿ ಯಾಮಾರಿಕೊಂಡಿತೆಂದರೆ ಇವರೆಗೂ ಅವರು ಮೇಲೇಳಲು ಸಾಧ್ಯವಾಗಿಲ್ಲ.  ಇದೀಗ ಎಲ್ಲರನ್ನು ಕಾಡುತ್ತಿರುವ ಒಂದೇ ಪ್ರಶ್ನೆ ಎಂದರೆ ಈ ಪರಿಸ್ಥಿತಿ ಡಿ.ಕೆ.ಶಿವಕುಮಾರ್ ಅವರನ್ನು ಅಮರಿಕೊಳ್ಳುತ್ತದೆಯೇ ಎಂಬುದನ್ನು ಕಾಲವೇ ಉತ್ತರಿಸಬೇಕು.

Facebook Comments

Sri Raghav

Admin