ಗಣಿ ನಾಡು ಬಳ್ಳಾರಿಯಲ್ಲಿ ಈ ಬಾರಿ ಧೂಳೆಬ್ಬಿಸೋರು ಯಾರು..?

ಈ ಸುದ್ದಿಯನ್ನು ಶೇರ್ ಮಾಡಿ

Ballary--01

– ರವೀಂದ್ರ.ವೈ.ಎಸ್

ಬೆಂಗಳೂರು,ಫೆ.12- ಅಕ್ರಮ ಗಣಿಗಾರಿಕೆ, ರೆಡ್ಡಿಗಳ ಆರ್ಭಟದಿಂದ ಒಂದು ಕಾಲದಲ್ಲಿ ದೇಶದ ಗಮನವನ್ನೇ ತನ್ನತ್ತ ಸೆಳೆದಿದ್ದ ಬಿಸಿಲಿನ ನಾಡು ಬಳ್ಳಾರಿಯಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರತೊಡಗಿದೆ.  ಬಳ್ಳಾರಿ ರಿಪಬ್ಲಿಕ್ ಎಂಬ ಅನ್ವರ್ಥ ನಾಮ ಪಡೆದು ಅಕ್ರಮ ಗಣಿಗಾರಿಕೆ ಮೂಲಕವೇ ಹೆಲಿಕಾಪ್ಟರ್ ದುಬಾರಿ ಬೆಲೆಯ ಕಾರು, ವಿದೇಶಿ ಮದ್ಯ, ವಾಚು, ಇತ್ಯಾದಿಗಳಿಂದ ಬಳ್ಳಾರಿಗೆ ಅಂಟಿಕೊಂಡಿದ್ದ ಅಕ್ರಮ ಗಣಿಗಾರಿಕೆ ಹಿಡಿಶಾಪ ಈ ಚುನಾವಣೆಯಲ್ಲಿ ಕಂಡುಬರುತ್ತಿಲ್ಲ.

ಒಬ್ಬ ಸಾಮಾನ್ಯ ಪೇದೆಯ ಮಕ್ಕಳಾಗಿ ದಿನಚಟುವಟಿಕೆಗಳ ಮೂಲಕ ಕೇವಲ ಕರ್ನಾಟಕವಲ್ಲದೆ ರಾಷ್ಟ್ರ ಮಟ್ಟದಲ್ಲೂ ಪ್ರಭಾವ ಬೆಳೆಸಿಕೊಂಡಿದ್ದ ರೆಡ್ಡಿ ಸಹೋದರರ ಆರ್ಭಟವೂ ಈಗಿಲ್ಲ. ಸುಪ್ರೀಂಕೋರ್ಟ್ ಕೊಟ್ಟ ಛಾಟಿ ಏಟಿನಿಂದ ಜಿಲ್ಲೆಯಲ್ಲಿ ಗಣಿ ಚಟುವಟಿಕೆ ಅಷ್ಟಕಷ್ಟೆ ಎಂಬುವಂತಿದೆ.   ಅಕ್ರಮ ಗಣಿಗಾರಿಕೆಯಿಂದ ಜೈಲುಪಾಲಾಗಿದ್ದ ಜನಾರ್ಧನ ರೆಡ್ಡಿ ಸದ್ಯಕ್ಕೆ ತವರು ಜಿಲ್ಲೆಗೆ ಕಾಲಿಡುವಂತಿಲ್ಲ. ನ್ಯಾಯಾಲಯವೇ ಅವರ ಮನವಿಯನ್ನು ತಿರಸ್ಕರಿಸಿದೆ. ಇನ್ನು ಬಿಜೆಪಿಯಲ್ಲಿದ್ದ ಆನಂದ್ ಸಿಂಗ್, ಸಂಸದ ರಾಮುಲು ಪರಮಾಪ್ತ ನಾಗೇಂದ್ರ ಕಮಲ ಬಿಟ್ಟು ಕೈ ಹಿಡಿದಿದ್ದಾರೆ.  ಕಳೆದ ಐದು ವರ್ಷಗಳ ಅವಧಿಯಲ್ಲಿ ಬಳ್ಳಾರಿ ಜಿಲ್ಲೆ ಸಾಕಷ್ಟು ರಾಜಕೀಯ ಏರಿಳಿತಕ್ಕೆ ಕಾರಣವಾಗಿದೆ. ತುಂಗಭದ್ರ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ತಮ್ಮ ರಾಜಕೀಯ ಚಾಣಾಕ್ಷತನದಿಂದಲೇ ಎದುರಾಳಿಗಳನ್ನು ಚಿತ್ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೆಡ್ಡಿಗಳ ಕೋಟೆಗೆ ಲಗ್ಗೆ ಇಟ್ಟಿದ್ದಾರೆ.

ಸಾಲದ್ದಕ್ಕೆ ಜಿಲ್ಲೆಯಲ್ಲಿ ಕಳೆದ ಶನಿವಾರ ನಡೆದ ಜನಾಶೀರ್ವಾದ ಯಾತ್ರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. 2008ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆ ಸಂಡೂರು ಹೊರತುಪಡಿಸಿದರೆ ಸಂಪೂರ್ಣವಾಗಿ ಬಿಜೆಪಿಮಯವಾಗಿತ್ತು.   ಆದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ, ಬಿಜೆಪಿ ಹಾಗೂ ಬಿಎಸ್‍ಆರ್ ಪಕ್ಷಗಳು ಹುಟ್ಟಿಕೊಂಡ ಪರಿಣಾಮ ಬಿಜೆಪಿ ಛಿದ್ರಛಿದ್ರವಾಗಿತ್ತು. ವಿಜಯನಗರ ಹೊರತುಪಡಿಸಿದರೆ ಕಮಲ ಧೂಳೀಪಟವಾಗಿತ್ತು. ಬಳ್ಳಾರಿ ಗ್ರಾಮಾಂತರ, ಕೂಡ್ಲಗಿ, ಕಂಪ್ಲಿಯಲ್ಲಿ ಬಿಎಸ್‍ಆರ್ ಗೆದ್ದರೆ, ಹಗರಿಬೊಮ್ಮನಹಳ್ಳಿ ಜೆಡಿಎಸ್ ಪಾಲಾಗಿತ್ತು. ಉಳಿದ ಎಲ್ಲ ಕ್ಷೇತ್ರಗಳು ಕೈ ವಶವಾಗಿದ್ದವು.

2013ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಎರಡೂ ರಾಷ್ಟ್ರೀಯ ಪಕ್ಷಗಳು ಜಿಲ್ಲೆಯನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿವೆ. ಬಿಜೆಪಿ ಭದ್ರಕೋಟೆಯನ್ನು ಬೇಧಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದರೆ ಕೈ ವಶವಾಗುವುದನ್ನು ತಪ್ಪಿಸಲು ಕಮಲ ಕೂಡ ಪ್ರತಿತಂತ್ರ ಹೆಣೆದಿದೆ.   ಎರಡು ರಾಷ್ಟ್ರೀಯ ಪಕ್ಷಗಳ ಕಿತ್ತಾಟದಲ್ಲಿ ಜೆಡಿಎಸ್ ಕೂಡ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ರಾಹುಲ್ ಗಾಂಧಿ ಆಗಮನದ ನಂತರ ಬಿಜೆಪಿ ಕೂಡ ತನ್ನ ತಾರಾ ಪ್ರಚಾರಕ ನರೇಂದ್ರ ಮೋದಿಯನ್ನು ಕರೆತರುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲು ಸಿದ್ದತೆ ನೀಡಿದೆ.  ಇತ್ತೀಚೆಗೆ ಜಿಲ್ಲೆಯಾದ್ಯಂತ ಪರಿವರ್ತನಾ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿರುವುದರಿಂದ ಹುಮಸ್ಸಿನಿಂದಲೇ ಬಿಜೆಪಿ ಚುನಾವಣೆಗೆ ಸಜ್ಜಾಗಿದೆ. ಇನ್ನು ಸಂಸದ ರಾಮುಲು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬುದಕ್ಕೆ ಕಾಲವೇ ನಿರ್ಧರಿಸಬೇಕು.

ಹೇಗಿದೆ ಬಳ್ಳಾರಿ:
ಬಳ್ಳಾರಿನಗರ: ಗಣಿದಣಿ ಜನಾರ್ಧನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಬಿಜೆಪಿಯ ಸಂಭವನೀಯ ಅಭ್ಯರ್ಥಿಯಾಗುವ ಉಮೇದಿನಲ್ಲಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಸೋಮಶೇಖರ ರೆಡ್ಡಿ ಹೆಸರನ್ನು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಹೆಚ್ಚಿನ ಮತಗಳ ಅಂತರದಿಂದ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಬೇಕೆಂದು ಹೇಳುವ ಮೂಲಕ ಸೋಮಶೇಖರ ರೆಡ್ಡಿ ಅಭ್ಯರ್ಥಿಯೆಂದು ಖಾತ್ರಿಪಡಿಸಿದ್ದಾರೆ. ಮತ್ತೊಂದೆಡೆ ರೆಡ್ಡಿ ಕುಟುಂಬದ ಆಪ್ತರಾದ ಡಾ.ಬಿ.ಕೆ.ಸುಂದರ್ ಹೆಸರು ಕೇಳಿಬಂದಿದೆ. ಇನ್ನು ಕಾಂಗ್ರೆಸ್‍ನಿಂದ ಹಾಲಿ ಶಾಸಕ ಅನಿಲ್ ಲಾಡ್ ಹೆಸರು ಅಂತಿಮಗೊಂಡಿದೆಯಾದರೂ ಅವರಿಗೆ ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ತೊಡರುಗಾಲಾಗಿದ್ದಾರೆ. ಜೆಡಿಎಸ್ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿದ್ದು , ವಹಾದ್ ಅವರನ್ನು ಸೆಳೆಯುವ ಪ್ರಯತ್ನ ನಡೆಸಿದೆ.

ವಿಜಯನಗರ:
ಈವರೆಗೂ ಬಿಜೆಪಿಯಲ್ಲಿದ್ದು ರೆಡ್ಡಿ ಸಹೋದರರ ಒಡನಾಡಿಯಾಗಿದ್ದ ಉದ್ಯಮಿ ಆನಂದ್ ಸಿಂಗ್ ಇತ್ತೀಚೆಗಷ್ಟೇ ಕಮಲ ಬಿಟ್ಟು ಕೈ ಹಿಡಿದಿದ್ದಾರೆ. ರೆಡ್ಡಿಗಳ ಜೊತೆ ಸಂಬಂಧ ಹಳಸಿರುವುದು ಹಾಗೂ ಸಂಸದ ರಾಮುಲು ಜೊತೆ ವೈಮಸ್ಸು ಮೂಡಿದ ಪರಿಣಾಮ ಪಕ್ಷ ತೊರೆದು ಅಧಿಕೃತವಾಗಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ಬಹುತೇಕ ಕಾಂಗ್ರೆಸ್‍ನಿಂದ ಅವರೇ ಅಭ್ಯರ್ಥಿಯಾಗುವ ಸಂಭವವಿದೆ.  ಕಾಂಗ್ರೆಸ್‍ನಲ್ಲಿದ್ದ ಗವಿಯಪ್ಪ ಬಿಜೆಪಿಗೆ ಸೇರ್ಪಡೆಯಾಗಿದ್ದು, ಬಹುತೇಕ ವಿಜಯನಗರದಿಂದ ಅವರೇ ಅಭ್ಯರ್ಥಿ ಯಾಗುವುದು ದಿಟವಾಗಿದೆ. ಜೆಡಿಎಸ್ ಇನ್ನೂ ಅಭ್ಯರ್ಥಿ ಶೋಧದಲ್ಲಿದೆ.

ಬಳ್ಳಾರಿ ಗ್ರಾಮೀಣ:
ಸಂಸದ ಶ್ರೀರಾಮುಲುಗೆ ರಾಜಕೀಯ ಪುನರ್ಜನ್ಮ ನೀಡಿದ ಈ ಕ್ಷೇತ್ರದಲ್ಲಿ ಭಾರೀ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಪಟ್ಟಿದೆ. ಬಿಜೆಪಿಯಿಂದ ರಾಮುಲು ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೊಂದು ವೇಳೆ ಅವರು ಸ್ಪರ್ಧಿಸಿದರೆ ಹೈವೋಲ್ಟೇಜ್ ಕ್ಷೇತ್ರವಾಗಲಿದೆ. ಇನ್ನು ಶ್ರೀರಾಮುಲು ಬದಲಿಗೆ ಅವರ ಸಹೋದರಿ ಜಯಶಾಂತ, ಮಾಜಿ ಸಂಸದ ಫಕೀರಪ್ಪ ಹೆಸರು ಕೂಡ ಚಾಲ್ತಿಯಲ್ಲಿದೆ. ಕಾಂಗ್ರೆಸ್‍ನಿಂದ ಇತ್ತೀಚೆಗಷ್ಟೇ ಬಿಜೆಪಿ ತೊರೆದಿರುವ ಹಾಗೂ ರೆಡ್ಡಿ ಸಹೋದರರ ಆತ್ಮೀಯ ಬಳಗದಲ್ಲಿದ್ದ ಬಿ.ನಾಗೇಂದ್ರ ಇಲ್ಲಿಂದಲೇ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಹಗರಿಬೊಮ್ಮನಹಳ್ಳಿ:
ಹಾಲಿ ಶಾಸಕ ಭೀಮನಾಯಕ್ ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದ ಬಹುತೇಕ ಅವರೇ ಅಭ್ಯರ್ಥಿಯಾಗುವ ಸಂಭವವೇ ಹೆಚ್ಚಾಗಿದೆ. ಇನ್ನು 2013ರ ವಿಧಾನಸಭೆ ಚುನಾವಣೆಯಲ್ಲಿ ಕೂದಲೆಳೆ ಅಂತರದಿಂದ ಪರಾಭವಗೊಂಡಿದ್ದ ಮಾಜಿ ಶಾಸಕ ಕೆ.ನೇಮಿರಾಜ ನಾಯಕ್ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತಗೊಂಡಿದೆ. ಜೆಡಿಎಸ್ ಅಭ್ಯರ್ಥಿ ಈವರೆಗೂ ಅಧಿಕೃತಗೊಂಡಿಲ್ಲ.

ಕಂಪ್ಲಿ :
ಸಂಸದ ಶ್ರೀರಾಮುಲು ಅವರ ಸಹೋದರಿಯ ಪುತ್ರ ಹಾಗೂ ಹಾಲಿ ಶಾಸಕ ಟಿ.ಎಚ್.ಸುರೇಶ್‍ಬಾಬು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 2008ರಲ್ಲಿ ಬಿಜೆಪಿ ಹಾಗೂ 13ರಲ್ಲಿ ಬಿಎಸ್‍ಆರ್‍ನಿಂದ ಗೆದ್ದಿದ್ದ ಅವರು ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‍ನಿಂದ ಗುಜ್ಜಲ್ ನಾಗರಾಜ ಸೇರಿದಂತೆ ಹಲವು ಹೆಸರುಗಳು ಕೇಳಿಬರುತ್ತಿದೆ.
ಸಿರುಗುಪ್ಪ :
ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವ ಸಿರುಗಪ್ಪದಲ್ಲಿ ಹಾಲಿ ಶಾಸಕ ಬಿ.ಎಂ.ನಾಗರಾಜ ಕಾಂಗ್ರೆಸ್ ಅಭ್ಯರ್ಥಿಯಾದರೆ ಬಿಜೆಪಿಯಿಂದ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೆಸರುಗಳು ಚಾಲ್ತಿಯಲ್ಲಿವೆ.  ಪರಿವರ್ತನಾ ಯಾತ್ರೆಯಲ್ಲಿ ಅವರ ಹೆಸರನ್ನು ರಾಜ್ಯಾಧ್ಯಕ್ಷ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಇನ್ನು ಜೆಡಿಎಸ್ ಯಾರನ್ನು ಕಣಕ್ಕಿಳಿಸುತ್ತದೆ ಎಂಬುದು ಅಧಿಕೃತಗೊಂಡಿಲ್ಲ.
ಸಂಡೂರು:
ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವ ಸಂಡೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‍ನ ಭದ್ರಕೋಟೆ, ಕಾಂಗ್ರೆಸ್‍ನ ಹಿರಿಯ ರಾಜಕಾರಣಿ ಎಂ.ವೈ.ಘೋರ್ಪಡೆಗೆ ರಾಜಕೀಯ ಜನ್ಮ ನೀಡಿದ ಸಂಡೂರು ಕ್ಷೇತ್ರ ಪುನರ್ವಿಂಗಡಣೆ ನಂತರ ಎಸ್ಟಿಗೆ ಮೀಸಲಾಯಿತು.   ಬಿಜೆಪಿ ಅಬ್ಬರದ ಸಂದರ್ಭದಲ್ಲೂ ಸಂಡೂರಿನಿಂದ ಇ.ತುಕರಾಮ್‍ಗೆಲುವು ಸಾಧಿಸಿದ್ದರು. ಇದೀಗ ಅವರು ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‍ನಿಂದ ತುಕರಾಮ್‍ಗೆ ಟಿಕೆಟ್ ಬಹುತೇಕ ಖಾತ್ರಿಯಾಗಿದೆ. ಬಿಜೆಪಿ ಹಾಗೂ ಜೆಡಿಎಸ್‍ನಿಂದ ಟಿಕೆಟ್ ಯಾರಿಗೆ ಎಂದು ಇನ್ನೂ ದೃಢಪಟ್ಟಿಲ್ಲ.

ಹೂವಿನಹಡಗಲಿ:
ರಾಜ್ಯದ ಅತ್ಯಂತ ಹಿರಿಯ ಹಾಗೂ ಸಜ್ಜನ ರಾಜಕಾರಣಿ ಎಂ.ಪಿ.ಪ್ರಕಾಶ್ ಅವರ ತವರೂರು ಹೂವಿನಹಡಗಲಿ ಮತ್ತೆ ಜಿದ್ದಾಜಿದ್ದಿನ ಕುರುಕ್ಷೇತ್ರಕ್ಕೆ ಸಜ್ಜಾಗಿದೆ. ಕ್ಷೇತ್ರ ಪುನರ್ವಿಂಗಡಣೆ ನಂತರ ಪರಿಶಿಷ್ಟ ಜಾತಿಗೆ ಮೀಸಲಾದ ಹಡಗಲಿಯಲ್ಲಿ ಒಂದು ಬಾರಿ ಬಿಜೆಪಿ ಹಾಗೂ ಮೊಗದೊಂದು ಬಾರಿ ಕಾಂಗ್ರೆಸ್‍ಗೆ ಒಲಿದಿದೆ.
2008ರಲ್ಲಿ ಬಿಜೆಪಿಯ ಬಿ.ಚಂದ್ರನಾಯಕ್ ಗೆದ್ದಿದ್ದರೆ, 13ರಲ್ಲಿ ಬಿ.ಪರಮೇಶ್ವರ್ ನಾಯಕ್ ಕಾಂಗ್ರೆಸ್‍ನಿಂದ ಗೆದ್ದು ಸಚಿವರೂ ಆಗಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಮಂತ್ರಿ ಸ್ಥಾನವನ್ನು ಕಳೆದುಕೊಂಡರು. ಬಿಜೆಪಿಯಿಂದ ಚಂದ್ರನಾಯಕ್ ಬಹುತೇಕ ಅಭ್ಯರ್ಥಿ ಯಾಗುವ ಸಾಧ್ಯತೆಗಳಿದ್ದರೆ ಕಾಂಗ್ರೆಸ್‍ನಿಂದ ಪರಮೇಶ್ವರ್ ನಾಯಕ್ ಕಣಕ್ಕಿಳಿಯಲಿದ್ದಾರೆ.

ಕೂಡ್ಲಗಿ:
ಜನಾರ್ಧನ ರೆಡ್ಡಿ ಒಡನಾಡಿಯಾಗಿದ್ದ ಬಿ.ನಾಗೇಂದ್ರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದೇ ತಾಲ್ಲೂಕಿನ ಅಚ್ಚರಿ ಬೆಳವಣಿಗೆ. ಅಕ್ರಮ ಗಣಿಗಾರಿಕೆಯಲ್ಲಿ ರೆಡ್ಡಿ ಸಹೋದರರು ಜೈಲು ಪಾಲಾದ ನಂತರ ನಾಗೇಂದ್ರ 2013ರ ಚುನಾವಣೆಯಲ್ಲಿ ಬಿಎಸ್‍ಆರ್‍ನಿಂದ ಸ್ಫರ್ಧಿಸಿ ಗೆಲುವು ಸಾಧಿಸಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಕೂಡ್ಲಗಿ ಇಲ್ಲವೇ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲಿ ದ್ದಾರೆ. ಬಿಜೆಪಿಯಿಂದ ನಿವೃತ್ತ ಅಧಿಕಾರಿ ಮುತ್ತಯ್ಯ ಹೆಸರು ಕೇಳಿಬರುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin