ಗಣೇಶನನ್ನೇ ಕದ್ದೊಯ್ದ ಕಳ್ಳರು

ಈ ಸುದ್ದಿಯನ್ನು ಶೇರ್ ಮಾಡಿ

Ganesh

ಹಾವೇರಿ, ಸೆ.8- ಶಾಲೆಗೆ ನುಗ್ಗಿದ ಕಳ್ಳರಿಗೆ ಬೆಲೆಬಾಳುವ ವಸ್ತು ಸಿಗದಿದ್ದರಿಂದ ಗಣೇಶ ಹಬ್ಬದಂದು ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಯನ್ನೇ ದೋಚಿರುವ ವಿಚಿತ್ರ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಳ್ಳೂರು ಗ್ರಾಮದಲ್ಲಿ ನಡೆದಿದೆ.ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಸೋಮವಾರ ವಿದ್ಯಾರ್ಥಿಗಳೆಲ್ಲ ಸೇರಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದರು. ಐದು ದಿನಗಳ ಕಾಲ ಅದನ್ನು ಪೂಜಿಸಿ ವಿಸರ್ಜನೆ ಮಾಡುವ ಸಂಕಲ್ಪ ಮಾಡಿದ್ದರು.ನಿನ್ನೆ ಎಂದಿನಂತೆ ಶಾಲೆ ಮುಗಿದ ನಂತರ ಮಹಾಮಂಗಳಾತಿ ಮಾಡಿ ಹೋಗಿದ್ದ ವಿದ್ಯಾರ್ಥಿಗಳು ಇಂದು ಬೆಳಗ್ಗೆ ಬಂದು ನೋಡಿದಾಗ ಗಣೇಶ ಮೂರ್ತಿಯೂ ಇಲ್ಲ, ಮುಂದೆ ಇಟ್ಟಿದ್ದ ಕಡುಬು, ಚಕ್ಕುಲಿ, ನಿಪ್ಪಟ್ಟು, ರವೆ ಉಂಡೆ ಎಲ್ಲವನ್ನೂ ಕಳ್ಳರು ಕದ್ದುಕೊಂಡು ಹೋಗಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರು ಅವರನ್ನು ಸಮಾಧಾನಪಡಿಸಿದ್ದಾರೆ. ವಿಚಿತ್ರವೆಂದರೆ ಕೊಠಡಿಯೊಂದರಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಕಿಟಕಿ ಸರಳನ್ನು ಮುರಿದು ಒಳಪ್ರವೇಶಿಸಿ ಪುಸ್ತಕ, ಪಠ್ಯ ಸಾಮಗ್ರಿಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಏನೂ ಸಿಗದಿದ್ದಾಗ ಈ ಕೃತ್ಯ ನಡೆಸಿದ್ದಾರೆಂದು ಹೇಳಲಾಗಿದೆ.ಸ್ಥಳಕ್ಕೆ ರಟ್ಟೇಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಣೇಶ ಕಳುವಾಗಿರುವ ಬಗ್ಗೆ ವಿದ್ಯಾರ್ಥಿಗಳು ಠಾಣೆಗೆ ದೂರು ನೀಡಿ ಕಳ್ಳರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin