ಗಣೇಶ ವಿಸರ್ಜನೆ ವೇಳೆ ಇಬ್ಬರು ಯುವಕರು ನೀರುಪಾಲು

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ತುಮಕೂರು/ಮಳವಳ್ಳಿ, ಆ.28-ಗಣೇಶ ಚತುರ್ಥಿ ಅಂಗವಾಗಿ ಬಹಳ ಹುಮ್ಮಸ್ಸಿನಿಂದ ಗಣೇಶನನ್ನು ಪ್ರತಿಷ್ಠಾಪಿಸಿದ್ದ ಯುವಕರು ನಿನ್ನೆ ಸಂಜೆ ಗಣೇಶ ವಿಸರ್ಜನೆ ವೇಳೆ ಎರಡು ಕಡೆ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ನಡೆದಿದೆ. ತುಮಕೂರು ವರದಿ: ತುಮಕೂರಿನ ಹೆಬ್ಬೂರಿನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ನಿನ್ನೆ ಮಧ್ಯಾಹ್ನ ಅಮಾನಿಕೆರೆಯಲ್ಲಿ ವಿಸರ್ಜನೆ ಮಾಡುವಾಗ ಸಿದ್ದಲಿಂಗೇಗೌಡ ಎಂಬಾತ ನೀರು ಪಾಲಾಗಿದ್ದಾರೆ.
ಸುದ್ದಿ ತಿಳಿದ ಅಗ್ನಿಶಾಮಕದಳದವರು ರಾತ್ರಿಯಿಡೀ ಮೃತದೇಹಕ್ಕಾಗಿ ಶೋಧ ನಡೆಸಿದರಾದರೂ ಶವ ಪತ್ತೆಯಾಗಿರಲಿಲ್ಲ, ಇಂದು ಬೆಳಗ್ಗೆ ಮತ್ತೆ ಅಗ್ನಿಶಾಮಕದಳ ಮತ್ತು ನುರಿತ ಈಜು ಪಟುಗಳು ಹುಡುಕಾಟ ನಡೆಸಿ ಶವವನ್ನು ಹೊರತೆಗೆದಿದ್ದಾರೆ.

ಮಳವಳ್ಳಿ ವರದಿ: ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡುವ ವೇಳೆ ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ತಾಲೂಕಿನ ರಾಗಿ ಬೊಮ್ಮನಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ. ವಿಜಯಕುಮಾರ್ (25) ಮೃತಪಟ್ಟ ಯುವಕನಾಗಿದ್ದು, ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ ರಾಗಿ ಬೊಮ್ಮನಹಳ್ಳಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ನಿನ್ನೆ ಗಣೇಶ ವಿಸರ್ಜನೆ ಮಾಡಲು ಗ್ರಾಮದ ಹೊರವಲಯದಲ್ಲಿರುವ ಮಹದೇಶ್ವರ ದೇವಾಲಯದ ಸಮೀಪ ಇರುವ ಕೆರೆಗೆ ತೆರಳಿದ್ದರು.

ಈ ವೇಳೆ ಗಣೇಶನನ್ನು ಕೆರೆಯಲ್ಲಿ ಬಿಡುವಾಗ ವಿಜಯಕುಮಾರ್ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಡಿವೈಎಸ್‍ಪಿ ಮಲ್ಲಿಕ್, ವೃತ್ತ ನಿರೀಕ್ಷಕ ಶ್ರೀಕಾಂತ್ ಸ್ಥಳಕ್ಕಾಗಮಿಸಿದರು. ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ತಡರಾತ್ರಿ 1.30ಗಂಟೆಯಲ್ಲಿ ಮೃತ ದೇಹವನ್ನು ಹೊರತೆಗೆದರು.  ನಂತರ ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin