ಬಿಬಿಎಂಪಿ ಮೇಯರ್ ಆಗಿ ಕಾಂಗ್ರೆಸ್ ನ ಪದ್ಮಾವತಿ, ಉಪಮೇಯರ್ ಆಗಿ ಜೆಡಿಎಸ್‍ನ ಆನಂದ್ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

bbmp-ASZ2
ಬೆಂಗಳೂರು, ಸೆ.28-ತೀವ್ರ ಕುತೂಹಲ ಕೆರಳಿಸಿದ್ದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಯಶಸ್ಸು ಕಂಡಿದ್ದು, ಪ್ರಕಾಶ್‍ನಗರ ವಾರ್ಡ್‍ನ ಸದಸ್ಯೆ ಜಿ.ಪದ್ಮಾವತಿ 50ನೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.  ಇದೇ ವೇಳೆ ಜೆಡಿಎಸ್‍ನ ರಾಧಕೃಷ್ಣ ವಾರ್ಡ್‍ನ ಆನಂದ್ ಅವರಿಗೆ ಉಪಮೇಯರ್ ಅದೃಷ್ಟ ಒಲಿದಿದೆ. ಇಂದು ಬೆಳಗಿನವರೆಗೂ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಭಾರೀ ಪೈಪೋಟಿ ನಡೆದಿತ್ತು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮೇಯರ್ ಪಟ್ಟದ ಆಕಾಂಕ್ಷಿಗಳಾಗಿದ್ದ ಸೌಮ್ಯ ಶಿವಕುಮಾರ್ ಹಾಗೂ ಪದ್ಮಾವತಿ ಅವರನ್ನು ಕರೆಸಿಕೊಂಡು ಸಂಧಾನ ನಡೆಸಿದ್ದರು.  ಅದರ ಫಲವಾಗಿ ಪದ್ಮಾವತಿ ಅವರ ಆಯ್ಕೆಯ ಹಾದಿ ಸುಗಮವಾಯಿತು.

BBMP

ಪ್ರಕಾಶ್‍ನಗರದ ತಮ್ಮ ಮನೆ ಬಿಡುವ ಮುನ್ನ ಪದ್ಮಾವತಿ ಅವರು ಡಾ.ರಾಜ್‍ಕುಮಾರ್ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿಂದ ಕಾಂಗ್ರೆಸ್ ಸಭೆಗೆ ಹೋಗಿ ತಮ್ಮ ವರಿಷ್ಠರ ಆದೇಶದಂತೆ 9.20ಕ್ಕೆ ಬಿಬಿಎಂಪಿಗೆ ಬಂದು ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಪಕ್ಷದ ಆನಂದ್ ಅವರು ನಂತರ ಉಪಮೇಯರ್ ಸ್ಥಾನಕ್ಕೆ ಪ್ರಾದೇಶಿಕ ಆಯುಕ್ತೆ ಜಯಂತಿ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಬಿಜೆಪಿ ಮೇಯರ್ ಅಭ್ಯರ್ಥಿಯಾಗಿ ಗಣೇಶ ಮಂದಿರ ವಾರ್ಡ್‍ನ ಲಕ್ಷ್ಮಿ ಉಮೇಶ್ ಹಾಗೂ ಎಚ್.ಎಸ್.ಆರ್.ಬಡಾವಣೆಯ ಸದಸ್ಯ ಗುರುಮೂರ್ತಿ ರೆಡ್ಡಿ ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಸ್ಪರ್ಧೆಯಿಂದಾಗಿ ಚುನಾವಣೆ ಅನಿವಾರ್ಯವಾದ ಕಾರಣ ಪ್ರಾದೇಶಿಕ ಆಯುಕ್ತೆ ಜಯಂತಿ ಅವರು ಕೆಂಪೇಗೌಡ ಸಭಾಂಗಣದಲ್ಲಿ ನಾಮಪತ್ರ ಪರಿಶೀಲನೆ ನಡೆಸಿ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಬಿಬಿಎಂಪಿಯಲ್ಲಿ 198 ಸದಸ್ಯರು(ಒಬ್ಬರು ಮೃತಪಟ್ಟಿದ್ದಾರೆ), 28 ವಿಧಾನಸಭಾ ಸದಸ್ಯರು, 28 ವಿಧಾನಪರಿಷತ್ ಸದಸ್ಯರು, 5 ಲೋಕಸಭಾ ಸದಸ್ಯರು, 11 ರಾಜ್ಯ ಸಭಾ ಸದಸ್ಯರು ಒಟ್ಟು ಸೇರಿ 269 ಮತದಾರರಿದ್ದಾರೆ. ಕಾಂಗ್ರೆಸ್ 76+ಇತರರು ಸೇರಿ 112, ಜೆಡಿಎಸ್ 14 ಸದಸ್ಯರು, ಇತರರು ಸೇರಿ ಒಟ್ಟು 23, ಬಿಜೆಪಿ 100 ಸದಸ್ಯರು, ಇತರರು 27 ಸೇರಿ ಒಟ್ಟು 127. ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಮತದಾನ ಮಾಡಿ ನಂತರ ನಡಾವಳಿ ಪುಸ್ತಕಕ್ಕೆ ಸಹಿ ಹಾಕಿದರು.

BBMp--03

ಮೇಯರ್-ಉಪಮೇಯರ್ ಆಯ್ಕೆಗೆ ಒಟ್ಟು 135 ಸದಸ್ಯ ಬಲ ಬೇಕಿತ್ತು. ಕಾಂಗ್ರೆಸ್‍ನ 76 ಸದಸ್ಯರು, ಇತರರು ಸೇರಿ 112, ಜೆಡಿಎಸ್ 14+ಇತರರು ಸೇರಿ 23 ಒಟ್ಟು 135 ಸದಸ್ಯ ಬಲ ಇದ್ದು, ಪಕ್ಷೇತರ ಸದಸ್ಯರು ಜಿ.ಪದ್ಮಾವತಿ ಅವರಿಗೆ ಮತ ಚಲಾಯಿಸಿದ್ದರಿಂದ ಒಟ್ಟು 142 ಮತಗಳನ್ನು ಪಡೆದು ಜಿ.ಪದ್ಮಾವತಿ ಮೇಯರ್ ಆಗಿ ಆಯ್ಕೆಯಾದರು. ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಲಕ್ಷ್ಮಿ ಉಮೇಶ್ ಅವರಿಗೆ 120 ಮತಗಳು ಬಂದವು.  ಜೆಡಿಎಸ್ ಆನಂದ್ ಉಪಮೇಯರ್ ಆಗಿ ಚುನಾಯಿತರಾದರು. ಈ ವೇಳೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್, ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್ ಪಾಲ್ಗೊಂಡಿದ್ದರು.

ಪದ್ಮಾವತಿ ನಡೆದು ಬಂದ ಹಾದಿ:

ಜಿ.ಪದ್ಮಾವತಿ ಅವರಿಗೆ 56ವರ್ಷ. ಬೆಂಗಳೂರು ವಿವಿಯಲ್ಲಿ ಬಿ.ಎ. ಪದವಿ ಪಡೆದಿದ್ದಾರೆ. 1989, 1996, 2001, 2015ರಲ್ಲಿ ಬಿಬಿಎಂಪಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಪ್ರತಿಪಕ್ಷದ ನಾಯಕಿಯಾಗಿ, ಆಡಳಿತ ಪಕ್ಷದ ನಾಯಕಿಯಾಗಿ ಹಾಗೂ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಅನುಭವ ಹೊಂದಿದ್ದಾರೆ. ಅವರು ಕೆಪಿಸಿಸಿ ಕಾರ್ಯದರ್ಶಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.  ಪದ್ಮಾವತಿ ಅವರು ಮೂಲತಃ ಬೆಂಗಳೂರಿನವರೇ ಆಗಿದ್ದು, ಬಲಿಜಿಗ ಜಾತಿಗೆ ಸೇರಿರುವ ಇವರ ತಂದೆ ಸ್ವಾತಂತ್ರ್ಯ ಹೋರಾಟಗಾರರು. ಪತಿ ಆರ್.ಜಯಪಾಲ್. ಇವರಿಗೆ ಮೂವರು ಪುತ್ರರಿದ್ದಾರೆ.

BBMp--01

ಸಮಸ್ಯೆಗಳನ್ನು ನೀಗಿಸುವುದು ತನ್ನ ಪ್ರಮುಖಗುರಿ: ಉಪಮೇಯರ್ ಅಭ್ಯರ್ಥಿ ಆನಂದ್
ನಗರದಲ್ಲಿ ಕಸದ ಸಮಸ್ಯೆ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ. ತನ್ನ ಅವಧಿಯಲ್ಲಿ ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುವುದು ಪ್ರಮುಖ ಗುರಿ ಎಂದು ಬಿಬಿಎಂಪಿ ಉಪಮೇಯರ್ ಸ್ಪರ್ಧಾಳು ಜೆಡಿಎಸ್’ನ ಆನಂದ್ ಹೇಳಿದ್ದಾರೆ. ಸುವರ್ಣನ್ಯೂಸ್ ವರದಿಗಾರ ಮುತ್ತಪ್ಪ ಲಮಾಣಿ ಜೊತೆ ಮಾತನಾಡಿದ ಆನಂದ್, ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ತನಗೆ ಅಸಮಾಧಾನವಿರುವುದನ್ನು ಒಪ್ಪಿಕೊಂಡಿದ್ದಾರೆ. ಪಕ್ಷದ ವರಿಷ್ಠರ ಜೊತೆ ಕೂತು ಈ ವಿಚಾರದಲ್ಲಿ ಸಮಾಲೋಚನೆ ನಡೆಸಿ ಮುಂದಿನ ನಡೆ ಇಡುವುದಾಗಿ ಜೆಡಿಎಸ್ ಕಾರ್ಪೊರೇಟರ್ ಹೇಳಿದ್ದಾರೆ.

BBMp--02

Facebook Comments

Sri Raghav

Admin