ಗಿಡ ನೆಟ್ಟು ಭೂಮಿ ಉಳಿವಿಗೆ ಸತತ ಪ್ರಯತ್ನಿಸಬೇಕು

ಈ ಸುದ್ದಿಯನ್ನು ಶೇರ್ ಮಾಡಿ

18
ಮುದ್ದೇಬಿಹಾಳ,ಫೆ.6- ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ನಾವು ಕನಿಷ್ಠ ಮನೆಗೊಂದು ಗಿಡ ನೆಡುವ ಮೂಲಕ ಭೂಮಿಯ ಉಳಿವಿಗೆ ಸತತ ಪ್ರಯತ್ನ ಮಾಡಬೇಕು ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್.ಬಿ. ಬಂಗಾರಿ ಹೇಳಿದರು. ನಿನ್ನೆ ಪಟ್ಟಣದ ಹುಡ್ಕೋ ಉದ್ಯಾನವನದಲ್ಲಿ ತಮ್ಮ 75ನೇ ವರ್ಷದ ಹುಟ್ಟುಹಬ್ಬವನ್ನು ಎರಡು ಗಿಡಗಳನ್ನು ನೆಟ್ಟು ನೀರೆರೆಯುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ ನಂತರ ಅವರು ಮಾತನಾಡಿದರು. ಹುಟ್ಟುಹಬ್ಬ ಎಂದಾಕ್ಷಣ ಕೇಕ್ ಕತ್ತರಿಸಿ ಅದ್ದೂರಿಯಾಗಿ ಆಚರಣೆ ಎಂದೇ ನಾವು ತಿಳಿದಿದ್ದೇವೆ. ಆದರೆ ಈ ವಿದೇಶಿ ಸಂಸ್ಕೃತಿ ಯನ್ನು ಅಂದರಂತೆ ಆಚರಣೆ ಮಾಡುವುದನ್ನು ಬಿಟ್ಟು ಅದನ್ನು ಸಮಾಜದ ಒಳಿತಿಗಾಗಿಯೂ ಮಾಡಬೇಕು. ನಮ್ಮ ಹುಟ್ಟು ಸಾವಿನ ಮಧ್ಯೆ ನಾವು ಒಂದಾದರೂ ಒಳ್ಳೆಯ ಕೆಲಸ ಮಾಡಬೇಕು. ಆ ಕೆಲಸ ಶಾಶ್ವತವಾಗಿ ಇತರರ ಮನದಲ್ಲಿ ಉಳಿಯುವಂತಾಗಬೇಕು.

ಪಟ್ಟಣದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಅಲ್ಲಲ್ಲಿ ಗಿಡಗಳನ್ನು ನೆಟ್ಟು ಪರಿಸರ ಉಳಿಸುವ ಕೆಲಸ ಮಾಡುತ್ತಿದ್ದು, ಅವರೊಂದಿಗೆ ಸೇರಿ ಗಿಡಗಳನ್ನು ನೆಡುವ ಮೂಲಕ ಹುಟ್ಟು ಹಬ್ಬ ಆಚರಸಿಕೊಳ್ಳಲು ನಿರ್ಧರಿಸಿದೆ, ನಾನು ನನ್ನ 75 ವರ್ಷಗಳ ಸುದೀರ್ಘ ಜೀವನದಲ್ಲಿ ಒಮ್ಮೆಯೂ ಜನ್ಮ ದಿನಾಚರಣೆ ಮಾಡಿಕೊಂಡಿಲ್ಲ. ಇವತ್ತಿನ ಈ ಕೆಲಸ ನನಗೆ ಬಹಳಷ್ಟು ತೃಪ್ತಿ ನೀಡಿದೆ ಎಂದವರು ಹೇಳಿದರು. ಬಳಗದ ಪರಿಸರ ಉಳಿಸಿ, ಬೆಳೆಸುವ ಕೆಲಸಕ್ಕೆ ನೆರವಾಗಲೆಂದು ಅವರು ಬಳಗಕ್ಕೆ ಐದು ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಿದರು.  ಬಳಗದ ಸದಸ್ಯ ಮಹಾಬಲೇಶ ಗಡೇದ ಅವರು ಮಾತನಾಡಿ, ಬೇಸಿಗೆ ಶುರುವಾಗಿ ಬಿಸಿಯ ಅನುಭವವಾದಾಗಲೇ ನಾವು ಗಿಡಗಳನ್ನು ನೆಡಬೇಕೆಂದು ಯೋಚಿಸುತ್ತೇವೆ, ನಂತರ ಕ್ರಮೇಣ ಮರೆತು ಬಿಡುತ್ತೇವೆ, ಪಟ್ಟಣದಲ್ಲಿ ಗಿಡಗಳನ್ನು ನೆಡಲು ಬಹಳಷ್ಟು ಕಡೆ ಸ್ಥಳಾವಕಾಶ ಇದ್ದು, ನಾಗರಿಕರು ವೈಯಕ್ತಿಕವಾಗಿ ತಮ್ಮ ಮನೆಗಳ ಮುಂದೆ ಗಿಡಗಳನ್ನು ನೆಟ್ಟು ಬೆಳೆಸಬೇಕು.

ಸಂಘ, ಸಂಸ್ಥೆಗಳು ಸಹ ಈ ದಿಸೆಯಲ್ಲಿ ಪರಿಸರ ಪ್ರೀತಿಯ ಕೆಲಸಕ್ಕೆ ಪ್ರೋ ಬೆಂಬಲ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಡಾ. ಸಿ.ಎಚ್. ನಾಗರಬೆಟ್ಟ, ಅರಣ್ಯಾಧಿಕಾರಿಗಳಾದ ಸಂತೋಷ ಅಜೂರ, ಸುಭಾಸಚಂದ್ರ, ರವಿ ಗೂಳಿ, ನಾಗಭೂಷಣ ನಾವದಗಿ ವಕೀಲರು, ಸುಧೀರ ಕತ್ತಿ, ಅಮರೇಶ ಗೂಳಿ, ರಾಜಶೇಖರ ಕಲ್ಯಾಣಮಠ, ಸೋಮಶೇಖರ ಚಿರಲದಿನ್ನಿ, ವಿಶ್ವನಾಥ ನಾಗಠಾಣ, ಕೆ.ಆರ್.ಕಾಮಟೆ, ರವಿ ತಡಸದ, ಈರಣ್ಣ ಶಿರವಾಳ, ಶ್ರೀನಿವಾಸರಾವ ಕುಲಕರ್ಣಿ ಸೇರಿದಂತೆ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin