ಗುಂಡು ಪ್ರೀಯರಿಗೊಂದು ಸಿಹಿ ಸುದ್ದಿ : MSILನಿಂದ 900 ಹೊಸ ಮದ್ಯದಂಗಡಿ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Drinkers

ಬೆಳಗಾವಿ, ನ.22- ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವ ಸಲುವಾಗಿ ಎಂಎಸ್‍ಐಎಲ್‍ನಿಂದ 900 ಸಗಟು ಮಾರಾಟ ಮಳಿಗೆಗಳನ್ನು ಆರಂಭಿಸಲಾಗುತ್ತಿದೆ ಎಂದು ಅಬಕಾರಿ ಸಚಿವ ಎಚ್.ವೈ.ಮೇಟಿ ಹೇಳಿದರು. ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‍ನ ಹಿರಿಯ ಶಾಸಕ ಎಚ್.ಡಿ.ರೇವಣ್ಣ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, 2014-15ನೇ ಸಾಲಿನಲ್ಲಿ ಚಿಕ್ಕಮಗಳೂರು, ಕೋಲಾರ, ಉಡುಪಿ, ಉತ್ತರಕನ್ನಡ, ದಕ್ಷಿಣಕನ್ನಡ, ಬಳ್ಳಾರಿ, ಬೆಂಗಳೂರು ನಗರ, ಗುಲ್ಬರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ ಒಟ್ಟು 16 ಮಾರಾಟ ಮಳಿಗೆಗಳನ್ನು ಆರಂಭಿಸಲಾಗಿದೆ. 2015-16ನೇ ಸಾಲಿನಲ್ಲಿ ಚಾಮರಾಜನಗರ, ಗದಗ, ಬೆಂಗಳೂರು ನಗರ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಸೇರಿದಂತೆ 6 ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ಜಿಲ್ಲಾಧಿಕಾರಿಗಳು ಮತ್ತು ಅಬಕಾರಿ ಇಲಾಖೆ ಮೂಲಕ ಸರ್ವೆ ಮಾಡಿಸಿ ಅಗತ್ಯವೆಂದು ಕಂಡು ಬಂದ ಜಾಗಗಳನ್ನು ಗುರುತಿಸಿ ಹೊಸದಾಗಿ 900 ಸಗಟು ಮಾರಾಟ ಮಳಿಗೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಕಳೆದ ವರ್ಷ 464 ಮಾರಾಟ ಮಳಿಗೆಗಳನ್ನು ಮಂಜೂರು ಮಾಡಲಾಗಿತ್ತು, ಆದರೆ, ಇನ್ನೂ 44 ಮಾರಾಟ ಮಳಿಗೆಗಳು ಆರಂಭಗೊಂಡಿಲ್ಲ ಎಂದು ಹೇಳಿದರು.
ಹೊಸ ಮದ್ಯದಂಗಡಿಗಳ ವಿಷಯ ವ್ಯಾಪಕ ಚರ್ಚೆಗೆ ಗುರಿಯಾಯಿತು. ಪ್ರಶ್ನೆ ಕೇಳಿದ ಎಚ್.ಡಿ.ರೇವಣ್ಣ ಅವರು, ರಾಜ್ಯದಲ್ಲಿ 9ಸಾವಿರ ಮದ್ಯದಂಗಡಿಗಳಿವೆ ಸರ್ಕಾರದ ಎಂಎಸ್‍ಐಎಲ್ ಕೇವಲ 600 ಮಳಿಗೆಗಳನ್ನು ಒಳಗೊಂಡಿದೆ. ಹೊಸ ಮಳಿಗೆಗಳನ್ನು ಸ್ಥಾಪಿಸಲು ಖಾಸಗಿ ಮದ್ಯ ಮಾರಾಟಗಾರರು ಅಡ್ಡಿಪಡಿಸುತ್ತಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಪಕ್ಷದ ನಾಯಕ ಜಗದೀಶ್‍ಶೆಟ್ಟರ್ ಮಧ್ಯ ಪ್ರವೇಶಿಸಿ, ರಾಜ್ಯದಲ್ಲಿ ಗಂಭೀರ ಬರ ಪರಿಸ್ಥಿತಿ ಇದೆ. ಜನರಿಗೆ ಕುಡಿಯಲು ನೀರಿಲ್ಲ. ಆದರೆ, ಸರ್ಕಾರ ಮದ್ಯ ಕುಡಿಸಿ ವ್ಯಾಪಾರ ಹೆಚ್ಚು ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಆಡಳಿತ ಪಕ್ಷದ ಶಿವಮೂರ್ತಿ ಮಾತನಾಡಿ, ಹಿಂದೆ ಸಾರಾಯಿ ಮಾರುತ್ತಿದ್ದ ಮತ್ತು ಕಳ್ಳಭಟ್ಟಿ ಮಾಡುತ್ತಿದ್ದ ಲಂಬಾಣಿ ಸಮುದಾಯದವರಿಗೆ ಪುನರ್‍ವಸತಿ ಕಲ್ಪಿಸಬೇಕು. ಹೀಗಾಗಿ ಹೊಸ ಮದ್ಯದ ಮಾರಾಟ ಮಳಿಗೆಗಳಲ್ಲಿ ಅವರಿಗೆ ಹೆಚ್ಚಿನ ಪಾಲು ನೀಡಬೇಕೆಂದು ಆಗ್ರಹಿಸಿದರು. ಜೆಡಿಎಸ್‍ನ ವೈ.ಎಸ್.ವಿ.ದತ್ತ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಎಂಎಸ್‍ಐಎಲ್ ಮಳಿಗೆ ಮಂಜೂರಾಗಿ ಐದು ವರ್ಷ ಕಳೆದಿದೆ ಈವರೆಗೂ ಆರಂಭಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ಆಕ್ಷೇಪಗಳಿಗೆ ಉತ್ತರ ನೀಡಿದ ಸಚಿವರು, ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಮದ್ಯವನ್ನು ತಡೆಗಟ್ಟುವ ಸಲುವಾಗಿ ಎಂಎಸ್‍ಐಎಲ್‍ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆಯೇ ಹೊರತು ಸಾರಾಯಿ ಕುಡಿಯುವುದು ಹೆಚ್ಚು ಮಾಡುವುದಕ್ಕಲ್ಲ ಎಂದು ಸ್ಪಷ್ಟಪಡಿಸಿದರು. ಹಾಸನ ಜಿಲ್ಲೆಗೆ ಅಗತ್ಯ ಇರುವ ಕಡೆ ಮಂಜೂರಾತಿ ನೀಡುವುದಾಗಿ ಭರವಸೆ ನೀಡಿದರು.

ಕುಡಿತ ಸಾಲವನ್ನು ಮಟ್ಟಹಾಕಿ:

ರಾಜ್ಯದಲ್ಲಿ ದೇಶಿ ಮತ್ತು ವಿದೇಶಿ ಮದ್ಯ ಮಾರಾಟಕ್ಕೆ ಹೋಟೆಲ್‍ಗಳಿಗೆ ನೀಡಲಾಗಿರುವ ಸಿಎಲ್-7 ಪರವಾನಗಿ ದುರುಪಯೋಗಗೊಳ್ಳುತ್ತಿದೆ ಎಂದು ಜೆಡಿಎಸ್‍ನ ಕೆ.ಎಂ.ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಹತ್ತು ರೂಂ ಹೋಟೆಲ್ ಇಟ್ಟುಕೊಂಡವರು ಸಿಎಲ್-7 ಪರವಾನಗಿ ಪಡೆಯುತ್ತಿದ್ದಾರೆ. ಅಲ್ಲಿ ಮದ್ಯ ಮಾರಾಟವಾಗುತ್ತಿಲ್ಲ. ಬದಲಾಗಿ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತಿದೆ. ಅಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದು, ಹಳ್ಳಿಗರನ್ನು ಸಾಲದಲ್ಲಿ ಮುಳುಗಿಸಲಾಗುತ್ತಿದೆ. ಮನೆ, ಮಠ, ಪಾತ್ರೆ, ಪಗಡಗಳನ್ನು ಗಿರವಿ ಇಟ್ಟು ಬಂದ ಹಣದಿಂದ ಕುಡಿಯಲು ಆರಂಭಿಸಿದ್ದಾರೆ. ಮೊದಲು ಇದಕ್ಕೆ ಕಡಿವಾಣ ಹಾಕಿ ಎಂದು ಆಗ್ರಹಿಸಿದರು. ಕುಡುಚಿ ಕ್ಷೇತ್ರದ ಶಾಸಕ ಪಿ.ರಾಜು ಕೂಡ ಇದಕ್ಕೆ ದನಿಗೂಡಿಸಿದರು.

ಇದಕ್ಕೆ ಸಚಿವ ಎಚ್.ವೈ.ಮೇಟಿ, ರಾಜ್ಯದಲ್ಲಿ 956 ಸಿಎಲ್-7 ಪರವಾನಗಿ ನೀಡಲಾಗಿದೆ. ನಗರಪಾಲಿಕೆ ಪ್ರದೇಶದಲ್ಲಿ 30 ಜೋಡಿ ಹಾಸಿಗೆಗಳುಳ್ಳ ಕೊಠಡಿಗಳ ಹೋಟೆಲ್‍ಗೆ ಬರುವ ಗ್ರಾಹಕರಿಗೆ ಮದ್ಯ ಸರಬರಾಜು ಮಾಡಲು ಈ ಪರವಾನಗಿ ನೀಡಲಾಗಿದೆ ಎಂದು ವಿವರಿಸಿದರು. ಅಬಕಾರಿ ಇಲಾಖೆಯಲ್ಲಿ ಒಟ್ಟು 470 ನಿರೀಕ್ಷಕರ ಹುದ್ದೆಗಳು ಮಂಜೂರಾಗಿದ್ದು, 125 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. 145 ಹುದ್ದೆಗಳು ಖಾಲಿ ಇವೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin