ಗುಜರಾತ್‍ ಪಾಟೀದಾರ್ ಹೋರಾಟದ ಸ್ವರೂಪ ಪಡೆಯುತ್ತಿರುವ ಲಿಂಗಾಯಿತರ ಆಂದೋಲನ

ಈ ಸುದ್ದಿಯನ್ನು ಶೇರ್ ಮಾಡಿ

Lingayat--02

ಬೆಂಗಳೂರು,ಡಿ.21-ಗುಜರಾತ್‍ನಲ್ಲಿ ಪಾಟೀದಾರ್ ಸಮುದಾಯ ಹೇಗೆ ನಿರ್ಣಾಯಕವೋ ಹಾಗೇ ಕರ್ನಾಟಕದಲ್ಲಿ ಲಿಂಗಾಯತ/ವೀರಶೈವ ಸಮುದಾಯ. ಅತ್ತ ಪಾಟೀದಾರ್ ಸಮುದಾಯದ ಹೋರಾಟ ಮೀಸಲಾತಿಗಾಗಿ, ಇತ್ತ ಲಿಂಗಾಯತ ಸಮುದಾಯದ ಹೋರಾಟ ಪ್ರತ್ಯೇಕ ಧರ್ಮಕ್ಕಾಗಿ. ಗುಜರಾತ್‍ನಲ್ಲಿ ಸಮುದಾಯಕ್ಕೆ ಮೀಸಲಾತಿ, ಉದ್ಯೋಗ ನೀಡಬೇಕೆಂದು ಆರಂಭವಾದ ಪಾಟೀದಾರರ ಹೋರಾಟ, ನಂತರ ಹಾರ್ದಿಕ್ ಪಟೇಲ್ ನಾಯಕತ್ವದಲ್ಲಿ ಗುಜರಾತ್ ಚುನಾವಣೆಯ ವೇಳೆ ನಿರ್ಣಾಯಕ ಹಂತಕ್ಕೆ ಬಂದು ನಿಂತಿತು. ಹಾರ್ದಿಕ್ ಪಟೇಲ್ ಭಾಷಣ ಕೇಳಲು ಜನಸಾಗರವೇ ಹರಿದು ಬರಲಾರಂಭಿಸಿತು, ಅಲ್ಪಅವಧಿಯಲ್ಲಿ ಭಾರೀ ಜನಪ್ರಿಯತೆಯನ್ನು ಹಾರ್ದಿಕ್ ಗಳಿಸಿದರು.

ಸಮುದಾಯದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಬಿಜೆಪಿ ಸರಕಾರ ಹೇಳಿದ ನಂತರ, ಪಾಟೀದಾರ್ ಸಮುದಾಯದ ಬೆನ್ನಿಗೆ ಕಾಂಗ್ರೆಸ್ ನಿಂತಿದ್ದು, ಸಮುದಾಯದಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಹೇಳಿದ್ದು, ಇವೆಲ್ಲವೂ ತಕ್ಕಮಟ್ಟಿಗೆ ಕಾಂಗ್ರೆಸ್ಸಿಗೆ ಲಾಭ ತಂದುಕೊಟ್ಟಿತ್ತೇ ಹೊರತು, ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಮಾತ್ರ ಸಾಧ್ಯವಾಗಲಿಲ್ಲ. ಪಾಟೀದಾರ್ ಚಳುವಳಿಯ ತೀವ್ರತೆಯಷ್ಟು, ಕರ್ನಾಟಕದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಡೆಯುತ್ತಿರುವ ಹೋರಾಟ ಸದ್ಯದ ಮಟ್ಟಿಗೆ ಇಲ್ಲದಿದ್ದರೂ, ಚುನಾವಣಾ ವರ್ಷವಾಗಿರುವುದರಿಂದ ಇದರ ಕಾವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿಲ್ಲದಿಲ್ಲ.

ಪ್ರತ್ಯೇಕ ಧರ್ಮದ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಬಂದರೆ ಕೇಂದ್ರಕ್ಕೆ ಶಿಫಾರಸು ಮಾಡಲು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ನಂತರ, ಅವರ ಸಂಪುಟದ ಸಚಿವ ಎಂ ಬಿ ಪಾಟೀಲ್, ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ನೇತೃತ್ವದಲ್ಲಿ ಸಮುದಾಯವನ್ನು ಬೇರೆಬೇರೆ ಗೊಳಿಸುವ ಕೆಲಸ ಜೋರಾಗಿಯೇ ನಡೆಯುತ್ತಿದೆ. ಲಿಂಗಾಯಿತ ಸಮುದಾಯ ಕರ್ನಾಟಕದಲ್ಲಿ ನಿರ್ಣಾಯಕವಾಗಿದೆ.

ಹೈದರಾಬಾದ್, ಮುಂಬೈ ಮತ್ತು ಮಧ್ಯಕರ್ನಾಟಕ : 

ಗುಜರಾತಿನ ಎಲ್ಲಡೆ ಪಾಟೀದಾರ್ ಸಮುದಾಯದವರು ಇದ್ದರೂ, ಸೌರಾಷ್ಟ್ರ ಮತ್ತು ಕಚ್ ಭಾಗದಲ್ಲಿ ಇವರ ಹಿಡಿತ ಜಾಸ್ತಿ. ಆದರೆ, ಕರ್ನಾಟಕದಲ್ಲಿ ಮಾತ್ರ ಪರಿಸ್ಥಿತಿ ಹಾಗಿಲ್ಲ. ರಾಜ್ಯದೆಲ್ಲಡೆ ಲಿಂಗಾಯಿತ ಸಮುದಾಯದವರು ಇರುವುದರಿಂದ ಎಲ್ಲಾ 224 ಕ್ಷೇತ್ರಗಳಲ್ಲಿ ಇವರು ಪ್ರಧಾನ ಪಾತ್ರ ವಹಿಸುತ್ತಾರೆ. ಅದರಲ್ಲೂ ಹೈದರಾಬಾದ್, ಮುಂಬೈ ಮತ್ತು ಮಧ್ಯಕರ್ನಾಟಕದ ಭಾಗದಲ್ಲಿ ಇವರದ್ದೇ ಮತಬ್ಯಾಂಕ್ ಮೇಲೆ ಎಲ್ಲರ ಕಣ್ಣು. ಪಾಟೀದಾರ್ ಸಮುದಾಯದಲ್ಲಿ ಕಡ್ವಾ ಮತ್ತು ಲಿಯುವಾ ಎನ್ನುವ ಉಪಜಾತಿಯಿದ್ದು ಎರಡೂ ಸೇರಿ, ಗುಜರಾತ್ ಜನಸಂಖ್ಯೆಯ ಶೇ.30ರಷ್ಟು ಈ ಸಮುದಾಯದವರು ಇದ್ದಾರೆ. ಸೌರಾಷ್ಟ್ರ ಭಾಗದಲ್ಲಿ ಇವರ ಪಾತ್ರ ನಿರ್ಣಾಯಕ ಎನ್ನುವುದಕ್ಕೆ ಸೋಮವಾರ ಪ್ರಕಟಗೊಂಡ ಫಲಿತಾಂಶವೇ ಸಾಕ್ಷಿ.

ಈ ಭಾಗದ ಒಟ್ಟು 56 ಕ್ಷೇತ್ರಗಳಲ್ಲಿ ಬಿಜೆಪಿ 23 ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಕಳೆದ ಬಾರಿ 36 ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ, 13 ಸ್ಥಾನವನ್ನು ಕಳೆದುಕೊಂಡಿದೆ. ಇದರ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಅಭಿವೃದ್ದಿ ಕೆಲಸವನ್ನು ಇಟ್ಟುಕೊಂಡೇ ಜನರ ಬಳಿ ಹೋಗುತ್ತೇವೆ ಎಂದು ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರು ಹೇಳುತ್ತಿದ್ದರೂ, ಕೊನೆಗೆ ಮೂರೂ ಪ್ರಮುಖ ಪಕ್ಷಗಳು ಮಣೆ ಹಾಕುವುದು ಜಾತಿ ಸಮೀಕರಣದ ಆಧಾರದಲ್ಲೇ. ಯಾವ್ಯಾವ ಕ್ಷೇತ್ರದಲ್ಲಿ ಯಾವ ಜಾತಿಯವರ ಪ್ರಾಬಲ್ಯ ಜಾಸ್ತಿ ಎನ್ನುವುದರ ಮೇಲೆಯೇ ಬಹುತೇಕ ಅಭ್ಯರ್ಥಿಗಳ ಹೆಸರು ಅಂತಿಮವಾಗುತ್ತದೆ. ಹಾಗಾಗಿ ಹೆಚ್ಚಿನ ಕ್ಷೇತ್ರಗಳಲ್ಲಿ ಲಿಂಗಾಯತ ಧರ್ಮ ಪ್ರಮುಖ ಪಾತ್ರ ವಹಿಸುತ್ತದೆ.

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಲಿಂಗಾಯಿತರ ಒಟ್ಟು ಜನಸಂಖ್ಯೆ 59 ಲಕ್ಷ ಅಂದರೆ ಶೇ.9.8 ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಲಿಂಗಾಯತ ಸಮುದಾಯ ಎನ್ನುವುದು ಎಲ್ಲರ ಅಭಿಪ್ರಾಯವಾಗಿದ್ದರೂ, ಈ ಸೆನ್ಸಸ್ ಪ್ರಕಾರ ಲಿಂಗಾಯತರು ಮೂರನೇ ಸ್ಥಾನದಲ್ಲಿ ಇದ್ದಾರೆ. ಮೊದಲ ಸ್ಥಾನ ಪರಿಶಿಷ್ಟ ಜಾತಿ/ವರ್ಗ, ಎರಡನೇ ಸ್ಥಾನ ಮುಸ್ಲಿಮರು.

ಕರ್ನಾಟಕ ರಾಜಕೀಯದಲ್ಲಿ ಜಾತಿ ಸಮೀಕರಣ : 

ಆದರೂ, ಕರ್ನಾಟಕ ರಾಜಕೀಯದಲ್ಲಿ ಜಾತಿ ಸಮೀಕರಣದ ವಿಚಾರ ಬಂದಾಗ ಮಂಚೂಣಿಯಲ್ಲಿ ನಿಲ್ಲುವುದು ಮೊದಲು ಲಿಂಗಾಯತ ನಂತರ ಒಕ್ಕಲಿಗ. ಉತ್ತರ ಕರ್ನಾಟಕದ ಭಾಗದ ಸುಮಾರು ನೂರಕ್ಕೂ ಹೆಚ್ಚು ಅಸೆಂಬ್ಲಿ ಕ್ಷೇತ್ರಗಳಲ್ಲಿ ಲಿಂಗಾಯತ ಮತ ಬ್ಯಾಂಕೇ ನಿರ್ಣಾಯಕ. ಹಾಗಾಗಿ, ಸದ್ಯ ನಡೆಯುತ್ತಿರುವ ಸಮುದಾಯದ ಪ್ರತ್ಯೇಕ ಕೂಗು, ಮೂರೂ ಪಕ್ಷಗಳಿಗೆ ಪ್ರಮುಖವಾಗಲಿದೆ.

Facebook Comments

Sri Raghav

Admin