ಗುಜರಾತ್ ಕುರುಕ್ಷೇತ್ರದ ಫಲಿತಾಂಶದತ್ತ ದೇಶದ ಚಿತ್ತ, ಭರ್ಜರಿ ಬೆಟ್ಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Voting--02-Gujarat-01

ಅಹಮದಾಬಾದ್/ಶಿಮ್ಲಾ, ಡಿ.17- ರಾಜಕೀಯ ಕುರುಕ್ಷೇತ್ರ ಎಂದೇ ಪರಿಗಣಿಸಲಾಗಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭೆ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದ್ದು, ದೇಶಾದ್ಯಂತ ಅಪಾರ ಕುತೂಹಲ ಕೆರಳಿಸಿದೆ. ಗುಜರಾತ್ ವಿಧಾನಸಭೆಯ 182 ಸ್ಥಾನಗಳು ಹಾಗೂ ಹಿಮಾಚಲ ಪ್ರದೇಶದ 68 ಕ್ಷೇತ್ರಗಳ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಈ ಎರಡು ರಾಜ್ಯಗಳ ಫಲಿತಾಂಶಗಳು ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಪ್ರತಿಷ್ಠೆಯ ಕಣವಾಗಿದೆ.

ಗುಜರಾತ್ ಮುಖ್ಯಮಂತ್ರಿ ವಿಜಯ್‍ರೂಪಾನಿ, ಉಪ ಮುಖ್ಯಮಂತ್ರಿ ನಿತೀಶ್ ಪಟೇಲ್, ಹಾಲಿ ಸಚಿವರು, ಶಾಸಕರು, ವಿವಿಧ ಪಕ್ಷಗಳ ಧುರೀಣರೂ ಸೇರಿದಂತೆ ಘಟಾನುಘಟಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಿಗೆ ನಾಳಿನ ಫಲಿತಾಂಶ ಅಗ್ನಿಪರೀಕ್ಷೆಯಾಗಿದೆ. ಈಗಾಗಲೇ ಭ್ರಷ್ಟಾಚಾರ ಮತ್ತು ಅವ್ಯವಹಾರಗಳ ಸುಳಿಯಲ್ಲಿ ಸಿಲುಕಿರುವ ಅವರಿಗೆ ಎದೆ ಬಡಿತ ಜೋರಾಗುತ್ತಿದೆ. ಆ ರಾಜ್ಯದಲ್ಲಿ ಡಿ. 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.

ಡಿ.9 ಮತ್ತು ಡಿ.14 ಈ ಎರಡು ಹಂತಗಳಲ್ಲಿ ನಡೆದಿದ್ದ ಗುಜರಾತ್ ಚುನಾವಣೆಗಾಗಿ ಬಿಜೆಪಿ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ 15ಕ್ಕೂ ಹೆಚ್ಚು ಚುನಾವಣಾ ರಾಜ್ಯಗಳನ್ನು ನಡೆಸಿದ್ದರು. ಕಾಂಗ್ರೆಸ್‍ನ ನೂತನ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರೂ ಕೂಡ ಹೈವೋಲ್ಟೇಜ್ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು. ನಿನ್ನೆಯಷ್ಟೇ ಎಐಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿರುವ ರಾಹುಲ್‍ಗೆ ನಾಳೆ ಹೊರಬೀಳುವ ಎರಡೂ ರಾಜ್ಯಗಳ ಫಲಿತಾಂಶಗಳು ಅತ್ಯಂತ ಮಹತ್ವದ್ದಾಗಿದೆ. ಕಾಂಗ್ರೆಸ್ ಈ ಕುರುಕ್ಷೇತ್ರದಲ್ಲಿ ಜಯ ಗಳಿಸಿದರೆ ರಾಹುಲ್ ವರ್ಚಸ್ಸು ಮತ್ತಷ್ಟು ವೃದ್ಧಿಸಲಿದೆ.

ಈ ಎರಡೂ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ವಿಜಯ ದುಂದುಭಿ ಮೊಳಗಿಸಿದರೆ, ಮೋದಿ ಕೇಸರಿ ಸಾಮ್ರಾಜ್ಯ ಇನ್ನಷ್ಟು ಬಲಗೊಳ್ಳಲಿದೆ. ಎರಡೂ ರಾಜ್ಯಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ಬಳಸುವುದರಿಂದ ಮಧ್ಯಾಹ್ನದ ವೇಳೆಗೆ ಸೋಲು-ಗೆಲುವಿನ ಸ್ಪಷ್ಟ ಚಿತ್ರಣ ಲಭಿಸಲಿದೆ. ಗುಜರಾತ್‍ನಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಈಗಾಗಲೇ ತಿಳಿಸಿದ್ದರೂ, ನಾಳೆ ಪ್ರಕಟಗೊಳ್ಳುವ ಅಧಿಕೃತ ಚುನಾವಣಾ ಫಲಿತಾಂಶದತ್ತ ದೇಶದ ಕಣ್ಣು ನೆಟ್ಟಿದೆ.

ಬೆಟ್ಟಿಂಗ್:

ಏಕದಿನ ಕ್ರಿಕೆಟ್‍ನ ಫೈನಲ್ ಪಂದ್ಯದಂತಿರುವ ಗುಜರಾತ್ ಚುನಾವಣಾ ಫಲಿತಾಂಶಕ್ಕೆ ಬೆಟ್ಟಿಂಗ್ ಜೋರಾಗಿಯೇ ಸಾಗಿದೆ ಎಂದು ಹೇಳಲಾಗಿದೆ. ಚುನಾವಣಾ ಪೂರ್ವ ಸಮೀಕ್ಷೆ ಸಂದರ್ಭದಲ್ಲಿ ಭಾರೀ ಬೆಟ್ಟಿಂಗ್ ಕಟ್ಟಲಾಗಿತ್ತು. ಚುನಾವಣೋತ್ತರ ಸಮೀಕ್ಷೆ ನಂತರ ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ಇಳಿಮುಖವಾಗಿದೆ. ಬಹುತೇಕ ಎಲ್ಲ ಮಾಧ್ಯಮಗಳಲ್ಲೂ ಬಿಜೆಪಿಯೇ ಮುನ್ನಡೆ ಸಾಧಿಸಿರುವ ಬಗ್ಗೆ ವರದಿಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರವಾದ ಬೆಟ್ಟಿಂಗ್ ಕಡಿಮೆಯಾಗಿದೆ.ಶೇ.25ರಷ್ಟು ಕೂಡ ಬೆಟ್ಟಿಂಗ್ ಕಟ್ಟುವವರು ಇಲ್ಲದಂತಾಗಿದೆ ಎಂದು ಅಲ್ಲಿನ ಬೆಟ್ಟಿಂಗ್‍ನವರು ಮಾತನಾಡಿಕೊಳ್ಳುತ್ತಿದ್ದುದು ಕೇಳಿಬಂದಿದೆ. ಒಟ್ಟಾರೆ ನಾಳೆ ಫಲಿತಾಂಶದ ಕದನ ಕುತೂಹಲ ಎಲ್ಲರನ್ನೂ ಕೆರಳಿಸಿದೆ.

Facebook Comments

Sri Raghav

Admin