ಗುಜರಾತ್ ಗೆಲುವಿನ ನಂತರ ಕರ್ನಾಟಕದತ್ತ ಅಮಿತ್ ಚಿತ್ತ, ರಾಜ್ಯಕ್ಕಾಗಮಿಸುತ್ತಿದ್ದಾರೆ ‘ಶಾ’ಣಕ್ಯ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--0

ಬೆಂಗಳೂರು, ಡಿ.19- ನಿರ್ಣಾಯಕ ಎನಿಸಿದ್ದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕದತ್ತ ಮುಖ ಮಾಡಿದ್ದಾರೆ. ಗುಜರಾತ್ ಫಲಿತಾಂಶದ ಬೆನ್ನಲ್ಲೇ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸಂಕ್ರಾಂತಿ ವೇಳೆಗೆ ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಶಾ, ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸಾದರಹಳ್ಳಿ ಸಮೀಪ ಏರ್ ಪೋರ್ಟ್ ರಸ್ತೆಯಲ್ಲಿರುವ ಬಹು ದೊಡ್ಡ ವಿಲ್ಲಾವೊಂದನ್ನು ಬಾಡಿಗೆಗೆ ಪಡೆದಿದ್ದಾರೆ.

ಬಿಜೆಪಿ ಕಚೇರಿ ಹಾಗೂ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಲೆಂದು ಸಾದರಹಳ್ಳಿಯಲ್ಲಿ ವಿಲ್ಲಾ ಬಾಡಿಗೆಗೆ ಪಡೆದಿದ್ದಾರೆ. ಈ ವಿಲ್ಲಾದಲ್ಲೇ ಎಲೆಕ್ಷನ್ ಕಾರ್ಯತಂತ್ರ ನಡೆಯುತ್ತದೆ. ವಾರ್ ರೂಂ, ಅಮಿತ್ ಶಾ ಅವರ ಸ್ಟ್ರ್ಯಾಟಜಿ ರೂಂ ಕೂಡ ವಿಲ್ಲಾದಲ್ಲೇ ಇದ್ದು, ವಾರ್ ರೂಂನ 10 ತಂಡವೂ ಬೆಂಗಳೂರಿಗೆ ಶಿಫ್ಟ್ ಆಗಲಿದೆ. ಅಮಿತ್ ಶಾ ಅವರು ವಾರದಲ್ಲಿ ಎರಡು ಬಾರಿ ಬೆಂಗಳೂರಿಗೆ ಭೇಟಿ ಕೊಡಲಿದ್ದಾರೆ. ಈ ವೇಳೆ ಮಂಗಳೂರು, ಮೈಸೂರು, ಹುಬ್ಬಳಿ, ಬೆಳಗಾವಿಗೂ ಕೂಡ ಅವರು ಹೋಗಲಿದ್ದಾರೆ. ಒಟ್ಟಿನಲ್ಲಿ ಹೊಸ ವರ್ಷದಿಂದ ಕರ್ನಾಟಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಅವರ ಅಸಲಿ ಆಟ ಶುರುವಾಗುತ್ತದೆ.

ಬಿಜೆಪಿ ಅಪರೇಷನ್:ಗುಜರಾತ್ ಚುನಾವಣೆ ಗೆದ್ದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಮಿಷನ್ 150 ಸಾಧಿಸಲು ಹೊಸ ಕಾರ್ಯತಂತ್ರ ರೂಪಿಸಿದೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆಯಲು ಹೊಸ ಕಾರ್ಯತಂತ್ರ ರಚನೆ ಮಾಡಿದ್ದಾರೆ ಎನ್ನಲಾಗಿದ್ದು, ಹೊಸ ಕಾರ್ಯತಂತ್ರದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿರುವ ಮುರಳೀಧರ್ ರಾವ್ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಮುರಳೀಧರ್ ರಾವ್ ಅವರನ್ನು ಬದಲಾವಣೆ ಮಾಡಿ ಗುಜರಾತ್ ರಾಜ್ಯದ ಬಿಜೆಪಿ ಉಸ್ತುವಾರಿ ಕಾರ್ಯ ನಿರ್ವಹಿಸುತ್ತಿದ್ದ ಭೂಪೇಂದ್ರ ಯಾದವ್ ಅವರನ್ನು ನೇಮಿಸಲು ಅಮಿತ್‍ಶಾ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ ಇವರು ಚುನಾವಣೆ ಚಾಣಕ್ಯ ಎಂದೇ ಬಿಜೆಪಿ ವಲಯದಲ್ಲಿ ಹೆಸರು ಪಡೆದಿದ್ದಾರೆ. ಪ್ರಸ್ತುತ ರಾಜ್ಯ ಸಭಾ ಸದಸ್ಯರಾಗಿರುವ ಭೂಪೇಂದ್ರ ಯಾದವ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Facebook Comments

Sri Raghav

Admin