ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದಲ್ಲಿ ಮತ್ತೆ ಅಪರೇಷನ್ ಕಮಲ

ಈ ಸುದ್ದಿಯನ್ನು ಶೇರ್ ಮಾಡಿ

Operation-Kamala-BJP

ಬೆಂಗಳೂರು,ಡಿ.14-ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಗೆ ನಾಂದಿ ಹಾಡಲಿದೆ ಎಂದೇ ಹೇಳಲಾಗಿರುವ ಗುಜರಾತ್ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಮತ್ತೆ ಅಪರೇಷನ್ ಕಮಲ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅಲೆಯಿಂದ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಲವಾಗಿ ನಂಬಿರುವ ಆಡಳಿತರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ತೆರೆಮರೆಗೆ ಸರಿದಿರುವ ಹಲವು ಮುಖಂಡರು ಕಮಲ ಮುಡಿಗೇಡಿಗೆರಿಸಿಕೊಳ್ಳಲು ಮುಂದಾಗಿದ್ದಾರೆ.

ಇದನ್ನು ನೇರವಾಗಿ ಅಪರೇಷನ್ ಕಮಲ ಎನ್ನಲು ಸಾಧ್ಯವಿಲ್ಲವಾದರೂ, ಈ ಬಾರಿ ಯಾವುದೇ ಅಮಿಷ , ಆಸೆಗಳಿಲ್ಲದೆ ಬಿಜೆಪಿಗೆ ಸೇರಿಸಿಕೊಳ್ಳಲು ಈಗಾಗಲೇ ಎರಡು ಸುತ್ತಿನ ಮಾತುಕತೆಯನ್ನು ಖುದ್ದು ಪಕ್ಷದ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಬರುವವರಿಗೆ ಟಿಕೇಟ್‍ಖಾತರಿ ಇಲ್ಲಎಂದು ಮುಖಂಡರು ಹೇಳುತ್ತಿದ್ದರಾದರೂ, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕಾದರೆ ಕೆಲವರಿಗೆ ಟಿಕೆಟ್ ನೀಡುವ ಭರವಸೆ ನೀಡಲೇಬೇಕಾಗುತ್ತದೆ ಎಂದು ಬಿಎಸ್‍ವೈ ತಮ್ಮ ಆಪ್ತರಿಗೆ ಹೇಳಿದ್ದಾರೆ.

ನಾವು ಟಿಕೆಟ್ ನೀಡುವ ಬಗ್ಗೆ ಖಚಿತ ಭರವಸೆ ನೀಡದಿದ್ದರೆ, ಅಷ್ಟರೊಳಗೆ ಬೇರೊಂದು ಪಕ್ಷದವರು ಅಪರೇಷನ್ ನಡೆಸಬಹುದು. ಸಮೀಕ್ಷೆ ನಡೆಸಿ ಟಿಕೆಟ್ ನೀಡುವುದು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಪಕ್ಷಕ್ಕೆ ಬರುವವರೆಗೆ ಕೆಂಪು ರತ್ನ ಗಂಬಳಿ ಹಾಕಲು ಕಮಲ ಪಡೆ ಸಜ್ಜಾಗಿದೆ. ಪಕ್ಷಕ್ಕೆ ಬರುವವರಿಗೆಚುನಾವಣೆಯಲ್ಲಿ ಟಿಕೆಟ್ ಗ್ಯಾರಂಟಿ ನೀಡಬಾರದೆಂದು ಪಕ್ಷದ ವರಿಷ್ಠರು ಮುಖಂಡರಿಗೆ ಸೂಚಿಸಿದ್ದಾರೆ. ಆದರೆ ಬೇರೆ ಪಕ್ಷದವರು ಗಾಳ ಹಾಕಬಹುದೆಂಬ ಹಿನ್ನಲೆಯಲ್ಲಿ ಯಡಿಯೂರಪ್ಪತಮ್ಮ ಪರಿವರ್ತನಾ ರ್ಯಾಲಿಯಲ್ಲಿ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಯಾರ್ಯಾರಿಗೆ ಗಾಳ?
ಬಿಜೆಪಿ ನಡೆಸುತ್ತಿರುವ ಅಪರೇಷನ್ ಕಮಲದಲ್ಲಿ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದ ವಿರುದ್ದ ಒಳಗೊಳಗೆ ಕತ್ತಿ ಮಸಿಯುತ್ತಿರುವ ಕೆಲ ಹಿರಿಯ ಮತ್ತು ಕಿರಿಯ ಶಾಸಕರು ಪಕ್ಷದಿಂದಲೇ ಹೊರ ನಡೆಯಲು ತೀರ್ಮಾನಕ್ಕೆ ಬಂದಿದ್ದಾರೆ. ತಮ್ಮ ಸೇವಾ ಹಿರಿತನಕ್ಕೆ ಬೆಲೆಕೊಡದೆ, ಸಂಪುಟದಲ್ಲಿ ಸ್ಥಾನಮಾನ ನೀಡದೆ ನಾಲ್ಕೈದು ಬಾರಿ ಶಾಸಕರಾದರೂ ಸಚಿವ ಸ್ಥಾನ ನೀಡದೆ ಕಡೆಗಣಿಸಿರುವುದಕ್ಕೆ ಹಲ್ಲು ಮಸಿಯುತ್ತಿರುವ ಹೈದರಬಾದ್‍ಕರ್ನಾಟಕದ ಸುಮಾರು 7 ರಿಂದ 10 ಮಂದಿ ಶಾಸಕರು ಗುಜರಾತ್ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ.

ವಲಸೆ ಬಂದವರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡಿ, ತಮಗೆ ಮೂಲೆಗುಂಪು ಮಾಡಿರುವ ಸಿದ್ದರಾಮಯ್ಯ ಧೋರಣೆಗೆ ಬೇಸತ್ತು, ತತ್ವ ಸಿದ್ದಾಂತಗಳಿಗೆ ವಿರುದ್ದವಾಗಿದ್ದರೂ ಬಿಜೆಪಿ ಸೇರಿ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಶಾಸಕರು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಪ್ರಮುಖವಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಎಂ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುವ ಕಲಬುರಗಿ ಹಾಗೂ ಯಾದಗೀರ್ ಜಿಲ್ಲೆಯನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಅಪರೇಷನ್ ಕಮಲಕ್ಕೆ ಕೈ ಹಾಕಿದೆ. ಈ ಎರಡು ಜಿಲ್ಲೆಯಲ್ಲೇ ಸುಮಾರು 4ರಿಂದ 5 ಮಂದಿ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಇಬ್ಬರು ಶಾಸಕರನ್ನು ಬಿಜೆಪಿ ಸೆಳೆಯಲು ಹರಸಾಹಸ ನಡೆಸಿದೆ. ಈ ಹಿಂದೆ ಬಿಜೆಪಿಯಲ್ಲೇ ಇದ್ದು ಪ್ರಾದೇಶಿಕ ಪಕ್ಷ ಸೇರಿದ್ದ ಶಾಸಕರೊಬ್ಬರನ್ನು ಪುನಃ ಮಾತೃ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ. ಆದರೆ ಈ ಶಾಸಕರುಕಾದು ನೋಡುವತಂತ್ರಕ್ಕೆ ಮೊರೆಹೋಗಿದ್ದಾರೆ. ಇದೇ ಜಿಲ್ಲೆಯ ಮತ್ತೊಬ್ಬ ಶಾಸಕರಿಗೂ ಬಲೆ ಬೀಸಲಾಗಿದೆ. ಮಧ್ಯ ಕರ್ನಾಟಕದ ದಾವಣೆಗರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಜಿಲ್ಲೆಗಳಲ್ಲೂ ಅನ್ಯ ಪಕ್ಷದವರನ್ನು ಸೇರಿಸಿಕೊಳ್ಳಲು ಯಡಿಯೂರಪ್ಪ ಮುಂದಾಗಿದ್ದಾರೆ.

ಸಂಘಟನೆ ಕೊರತೆ ಇರುವ ದಕ್ಷಿನ ಕರ್ನಾಟಕಕ್ಕೆ ವಿಶೇಷ ಗಮನ ಹರಿಸಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಕೆಲವು ನಾಯಕರಿಗೆ ಪಕ್ಷಕ್ಕೆ ಬರುವಂತೆ ಆಹ್ವಾನಕೊಟ್ಟಿದ್ದಾರೆ. ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಶಾಸಕ ಸಿ.ಪಿ ಯೋಗೀಶ್ವರ್ ಮೂಲಕ ಈ ಭಾಗದಲ್ಲಿ ತಮ್ಮ ಪಕ್ಷವನ್ನು ಬಲಪಡಿಸಲು ಕಮಲ ಪಡೆ ಮುಂದಾಗಿದೆ. ಮುಂಬೈ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲೂ ಭಾರೀ ಮಟ್ಟದ ಅಪರೇಷನ್ ಕಮಲ ನಡೆಯಲಿದೆ ಎಂದು ಹೇಳಲಾಗಿದೆ.

ಮೋದಿ ಭಯ:
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕುವರೆ ವರ್ಷಗಳಲ್ಲಿ ಭ್ರಷ್ಟಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನಡೆಸಿರುವುದಾಗಿ ಹೇಳುತ್ತಿದ್ದರೂ, ಶಾಸಕರಿಗೆ ನರೇಂದ್ರ ಮೋದಿ ಭಯ ಕಾಡುತ್ತಿದೆ. ಕರ್ನಾಟಕದ ಮತದಾರರು ಮೋದಿ ಮಾತಿಗೆ ಮರಳಾಗುವುದಿಲ್ಲ ಎಂದು ವಿವಿಧ ಪಕ್ಷಗಳ ಮುಖಂಡರು ಹೇಳುತ್ತಿದ್ದಾರೆ. ಈ ಮೊದಲು ನಗರ ಪ್ರದೇಶಗಳಲ್ಲಿ ಮಾತ್ರ ಮೋದಿ ಮೋಡಿ ಇದೆ ಎಂದು ಹೇಳಲಾಗಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೋದಿ ಹೆಸರು ಗ್ರಾಮೀಣ ಭಾಗದಲ್ಲೂ ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ವಿರೋಧ ಪಕ್ಷಗಳು ನಿದ್ದೆಗಡೆವಂತೆ ಮಾಡಿದೆ. ನಾಳೆ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಮೋದಿ ಮಾತಿಗೆ ಮರಳಾಗಿ ಕಮಲಕ್ಕೆ ಜೈ ಎಂದರೆ ನಮ್ಮ ರಾಜಕೀಯ ಗತಿಯೇನು ಎಂಬ ಪ್ರಶ್ನೆ ಬಹತೇಕ ಶಾಸಕರನ್ನು ಕಾಡುತ್ತಿದ್ದು, ಇದಲ್ಲರ ನಡುವೆ ಐಟಿ ದಾಳಿ ಕೆಲವರಿಗೆ ಬಿಚ್ಚಿ ಬೀಳುವಂತೆ ಮಾಡಿದೆ.

Facebook Comments

Sri Raghav

Admin