ಗುಣಮಟ್ಟದ ಚಾಲಕರ ನೇಮಕಾತಿಗೆ ಆದ್ಯತೆ : ಸಚಿವ ರಾಮಲಿಂಗರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ramalinga--reddy

ಚಿಕ್ಕಮಗಳೂರು, ಸೆ.20- ಅಪಘಾತ ಕಡಿಮೆ ಮಾಡಲು ಗುಣಮಟ್ಟದ ಚಾಲಕರ ಅವಶ್ಯವಿರುವ ಹಿನ್ನೆಲೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು. ತಾಲ್ಲೂಕಿನ ತೇಗೂರು ಗ್ರಾಪಂನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನೂತನವಾಗಿ ನಿರ್ಮಿಸಿದರುವ ಚಾಲಕರ ಮತ್ತು ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಕಳಸಾಪುರ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಸಾರಿಗೆ ನಿಗಮ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ನಷ್ಟದಲ್ಲಿದ್ದರೂ ಸಹ ಮುನ್ನಡೆಸಸಲಾಗುತ್ತಿದೆ. ಆದರೆ ಖಾಸಗಿ ಸಂಸ್ಥೆಗಳು ಲಾಭ ಬಂದರಷ್ಟೆ ಬಸ್‍ಗಳನ್ನು ಓಡಿಸುತ್ತವೆ ಎಂದರು. ರಾಜ್ಯದಲ್ಲಿ ಒಟ್ಟು 7 ತರಬೇತಿ ಕೇಂದ್ರಗಳಿವೆ, ಚಿಕ್ಕಮಗಳೂರಿನಲ್ಲಿ 8ನೇ ತರಬೇತಿ ಕೇಂದ್ರ ಸ್ಥಾಪಿಸಲಾಗಿದ್ದು, 8 ನೇ ತರಗತಿ ಓದಿದವರಿಗೆ ಮಾತ್ರ ತರಬೇತಿ ನೀಡಬೇಕೆಂಬ ನಿಯಮದಿಂದಾಗಿ ಚಾಲಕರ ಕೊರತೆ ಉದ್ಭವಿಸಿದೆ ಹಾಗಾಗಿ ವಿದ್ಯಾರ್ಹತೆ ಸಡಿಲಗೊಳಿಸುವ ಚಿಂತನೆಯನ್ನು ಸರ್ಕಾರ ನಡೆಸಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ, ಪ್ರಯಾಣಿಕರ ಸುರಕ್ಷತೆ ಮುಖ್ಯವಾಗಿದೆ. ಇದಕ್ಕೆ ಪೂರಕವಾಗಿ ಚಾಲಕರ ತರಬೇತಿ ಹಾಗೂ ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆಯಲಾಗಿದೆ. ಮಲೆನಾಡು ಭಾಗದಲ್ಲಿ ಮೂಡಿಗೆರೆ ಡಿಪೋಗೆ ಹೊಸಬಸ್ಸುಗಳನ್ನು ನೀಡಬೇಕು ಎಂದರು. ಶಾಸಕ ಸಿ.ಟಿ. ರವಿ ಮಾತನಾಡಿ, ಈ ಹಿಂದೆ ತರಬೇತಿಗಾಗಿ ಹಾಸನಕ್ಕೆ ಹೋಗಬೇಕಿತ್ತು, ಆದರೆ ನಗರದಲ್ಲಿ ತರಬೇತಿ ಕೇಂದ್ರ ಮಾಡಿರುವುದು ಅನುಕೂಲವಾಗಿದೆ ಎಂದರು.
ವಾರದ ಕೊನೆಯ ದಿನಗಳಲ್ಲಿ ಜಿಲ್ಲೆಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದು, ಇವರ ಅನುಕೂಲತೆಗೆ ಹೆಚ್ಚುವರಿ ಡಿಲೆಕ್ಸ್ ಬಸ್ಸುಗಳನ್ನು ಬಿಡಬೇಕು, ವರ್ಷದಲ್ಲಿ ಎರಡು ಬಾರಿ ಸಾರಿಗೆ ಅದಾಲತ್ ನಡೆಸಬೇಕು ಎಂದರು. ಜಿ.ಪಂ. ಸದಸ್ಯೆ ಪ್ರೇಮ ಮಂಜುನಾಥ್, ತೇಗೂರು ಗ್ರಾ.ಪಂ ಅಧ್ಯಕ್ಷೆ ಚಂದ್ರಮ್ಮ, ಕಳಸಪುರ ಗ್ರಾ.ಪಂ ಅಧ್ಯಕ್ಷೆ ಎಸ್.ಡಿ ಶಶಿಕಲಾ ಲೋಕೇಶ್, ತಾ.ಪಂ. ಸದಸ್ಯೆ ಕುಸುಮ ದೊಡ್ಡೇಗೌಡ, ತಾ.ಪಂ. ಅಧ್ಯಕ್ಷ ಈ.ಮಹೇಶ್, ಗ್ರಾ.ಪಂ. ಸದಸ್ಯರಗಳಾದ ಜಯಣ್ಣ, ಚಂದ್ರ, ನರೇಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin