ಗೃಹಿಣಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ ಪೊಲೀಸರ ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

huna
ಹುಣಸೂರು, ಡಿ.9- ಗೃಹಿಣಿಯನ್ನು ಕೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ತಾಲೂಕಿನ ಹೊಸಕೋಟೆ ಗ್ರಾಮದ ಜ್ಯೋತಿ (28) ಕೊಲೆಯಾದ ಗೃಹಿಣಿ. ಹುಣಸೂರು ತಾಲೂಕಿನ ಹಿರೇನಹಳ್ಳಿ ಗ್ರಾಮದ ರಾಮಕೃಷ್ಣ ಎಂಬುವರೊಂದಿಗೆ ಜ್ಯೋತಿಯ ವಿವಾಹವಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ. ಈ ಕುಟುಂಬ ಮಂಜುನಾಥ ಬಡಾವಣೆಯಲ್ಲಿ ವಾಸವಾಗಿದೆ. ರಾಮಕೃಷ್ಣ ಇಂಡಸ್ ಎಂಬ ಮಾರ್ಕೆಟಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಎರಡು ವರ್ಷಗಳ ಹಿಂದೆ ಇದೇ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದ ಪ್ರವೀಣ್ ಎಂಬಾತನ ಪರಿಚಯವಾಗಿದೆ. ಪ್ರವೀಣ್ ಸಹ ಪಟ್ಟಣದ ನರಸಿಂಹಸ್ವಾಮಿ ಬಡಾವಣೆಯಲ್ಲಿ ವಾಸವಾಗಿದ್ದಾನೆ.

ಪ್ರವೀಣ್ ಹಾಗೂ ರಾಮಕೃಷ್ಣ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಆಗಾಗ್ಗೆ ಪ್ರವೀಣ್ ರಾಮಕೃಷ್ಣ ಮನೆಗೆ ಬಂದು ಹೋಗುತ್ತಿದ್ದನು.  ಈ ಸಂದರ್ಭದಲ್ಲಿ ಜ್ಯೋತಿಯ ಪರಿಚಯವಾಗಿದೆ. ರಾಮಕೃಷ್ಣ ಹೊರಗೆ ಹೋದಾಗ ಪ್ರವೀಣ್ ಈತನ ಮನೆಗೆ ಬರುತ್ತಿದ್ದನು. ಈತನ ವರ್ತನೆಯನ್ನು ಪತಿ ರಾಮಕೃಷ್ಣಗೆ ಜ್ಯೋತಿ ತಿಳಿಸಿದ್ದಳು. ಇದೇ ವಿಚಾರವಾಗಿ ಕೆಲ ತಿಂಗಳ ಹಿಂದೆ ಪ್ರವೀಣ್ ಹಾಗೂ ರಾಮಕೃಷ್ಣ ನಡುವೆ ಜಗಳವೂ ಸಹ ನಡೆದಿತ್ತು ಎನ್ನಲಾಗಿದೆ.  ಆಗಾಗ್ಗೆ ಮನೆಗೆ ಬರುತ್ತಿದ್ದುದನ್ನು ಸಹಿಸದ ಜ್ಯೋತಿ ನಿನ್ನೆ ಸಂಜೆ ಪ್ರವೀಣ್ ಮನೆಗೆ ಹೋಗಿ ನೀನು ಮನೆಗೆ ಬರುವುದರಿಂದ ನನ್ನನ್ನು ನೆರೆಹೊರೆಯವರು ಅನುಮಾನದಿಂದ ನೋಡುತ್ತಾರೆ. ನಮ್ಮ ಮನೆಗೆ ಬರಬೇಡ ಎಂದು ಎಚ್ಚರಿಕೆ ನೀಡಿ ಮನೆಗೆ ಹಿಂದಿರುಗಿದ್ದಳು. ಇದರಿಂದ ಕುಪಿತಗೊಂಡ ಪ್ರವೀಣ್ ಮುಂಜಾನೆಯೇ ಎದ್ದು ಜ್ಯೋತಿ ಮನೆ ಬಳಿ ತೆರಳಿದ್ದು, ರಾಮಕೃಷ್ಣ ಹೊರಗೆ ಹೋಗುವುದನ್ನೇ ಕಾದು ನಂತರ ಮನೆಗೆ ಹೋಗಿ ನಿನ್ನ ಜತೆ ಮಾತನಾಡಬೇಕೆಂದು ಮನೆಯ ಮಹಡಿ ಮೇಲೆ ಜ್ಯೋತಿಯನ್ನು ಕರೆದೊಯ್ದಿದ್ದಾನೆ.

ನೀನು ನನ್ನ ಮನೆ ಬಳಿ ಬಂದು ಏಕೆ ಗಲಾಟೆ ಮಾಡಿದೆ ಎಂದು ಆಕೆಯೊಂದಿಗೆ ಜಗಳವಾಡುತ್ತಿದ್ದಾಗ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದಾಗ ಮಹಡಿಯ ಮೇಲಿದ್ದ ಹಗ್ಗದಿಂದ ಆಕೆಯ ಕುತ್ತಿಗೆ ಬಿಗಿದಿದ್ದಾನೆ. ಜ್ಯೋತಿ ಉಸಿರುಗಟ್ಟಿ ಮೃತಪಟ್ಟಿದ್ದು, ಇದನ್ನು ಕಂಡ ಪ್ರವೀಣ್ ಗಾಬರಿಯಾಗಿ ತಕ್ಷಣ ಪಟ್ಟಣದ ಪ್ರಶಾಂತ್ ಲಾಡ್ಜ್‍ನ ಮೇಲ್ಮಹಡಿಗೆ ತೆರಳಿ ತಂದೆಗೆ ದೂರವಾಣಿ ಕರೆ ಮಾಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾನೆ. ತಕ್ಷಣ ಈತನ ತಂದೆ ಸ್ಥಳಕ್ಕೆ ತೆರಳಿ ಪ್ರವೀಣ್‍ನನ್ನು ಮನವೊಲಿಸಿ ಕರೆತರುವಷ್ಟರಲ್ಲಿ ಸುದ್ದಿ ತಿಳಿದ ಡಿವೈಎಸ್‍ಪಿ ಭಾಸ್ಕರ್, ಇನ್ಸ್‍ಪೆಕ್ಟರ್ ಪೂವಯ್ಯ ಭೇಟಿ ನೀಡಿ ಪ್ರವೀಣ್‍ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin