ಗೃಹ ಬಂಧನದಲ್ಲಿ ಭಾರತದ ಹೆಮ್ಮೆಯ ಅಥ್ಲೀಟ್ ದೀಪಾ ಕರ್ಮಾಕರ್..!

ಈ ಸುದ್ದಿಯನ್ನು ಶೇರ್ ಮಾಡಿ

Deepa

ರಿಯೋ ಡಿ ಜನೈರೋ, ಆ.9- ರಿಯೋ ಒಲಿಂಪಿಕ್ಸ್ ನಲ್ಲಿ ದೇಶದ ಗೌರವವನ್ನು ಎತ್ತಿ ಹಿಡಿದಿರುವ ಭಾರತದ ಹೆಮ್ಮೆಯ ಅಥ್ಲೀಟ್ ದೀಪಾ ಕರ್ಮಾಕರ್ ಗೃಹ ಬಂಧನಕ್ಕೆ ಒಳಗಾಗಿದ್ದಾರೆ..!   ಆ.14ರ ರಾತ್ರಿ ವಾಲ್ಟ್ ಇತಿಹಾಸ ಸೃಷ್ಟಿಸಲು ಸಿದ್ದತೆ ನಡೆಸುತ್ತಿರುವ ದೀಪಾ ಅವರನ್ನು ಕೋಚ್ ಬಿಶ್ವೇಶ್ವರ್ ನಂದಿ ಒಲಿಂಪಿಕ್ ಕ್ರೀಡಾ ಗ್ರಾಮದಲ್ಲಿ ಗೃಹ ಬಂಧನದಲ್ಲಿ ಇಟ್ಟಿದ್ದಾರೆ.   ಈಶಾನ್ಯ ಭಾರತದ ತ್ರಿಪುರದ ರಾಜ್ಯದ ಅಗರ್ತಲದವರಾದ ದೀಪಾ ಕರ್ಮಾಕರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ ತವರೂರಿನಿಂದ 35,000 ಕಿಲೋಮೀಟರ್ ದೂರದಲ್ಲಿರುವ ದೀಪಾ ತಮ್ಮ ಪೋಷಕರನ್ನು ಹೊರತುಪಡಿಸಿ ಬೇರೆ ಯಾರಿಂದಲೂ ಹುಟ್ಟುಹಬ್ಬದ ಉಡುಗೊರೆ ಸ್ವೀಕರಿಸುವ ಸಾಧ್ಯತೆ ಇಲ್ಲ. ಭಾರತದ ಭರವಸೆಯ ತಾರೆಯ ಜೊತೆಗೆ ಇರುವುದು ಆಕೆಯ ತರಬೇತುದಾರ ನಂದಿ ಮತ್ತು ಭಾರತದ ಏಕೈಕ ಮಹಿಳಾ ವೇಟ್‍ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಮಾತ್ರ.

ನಾನು ಆಕೆಯ ಮೊಬೈಲ್‍ನಿಂದ ಸಿಮ್‍ನನ್ನು ತೆಗೆದುಹಾಕಿದ್ದೇನೆ. ಆಕೆಯ ತಂದೆ-ತಾಯಿ ಮಾತ್ರ ಆಕೆ ಜೊತೆ ಮಾತನಾಡಲು ಅವಕಾಶ ನೀಡಲಾಗಿದೆ. ಆಕೆ ಏಕಾಗ್ರತೆ ಕಳೆದುಕೊಳ್ಳುವುದು ಬೇಡ ಎಂಬ ಉದ್ದೇಶಕ್ಕಾಗಿ ಆಕೆಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಇಂದು ಆಕೆಯ ಜನ್ಮದಿನ. ನಾನು ನೀಡುವ ಅಲ್ಪ ವಿರಾಮದಲ್ಲಿ ಮಾತ್ರ ಆಕೆಯ ಪೋಷಕರ ಜೊತೆ ಮಾತನಾಡಲು ಅವಕಾಶ ನೀಡಿದ್ದೇನೆ ಎಂದು ಕಳೆದ 16 ವರ್ಷಗಳಿಂದ ದೀಪಾಗೆ ತರಬೇತಿ ನೀಡುತ್ತಿರುವ ಕೋಚ್ ನಂದಿ ಹೇಳಿದ್ದಾರೆ.  ಜಿಮ್ನಾಸ್ಟಿಕ್ ಒಂದು ಅಪಾಯಕಾರಿ ಕ್ರೀಡೆ. ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಡಬಲ್-ಫ್ರಂಟ್ ಸಮರ್‍ಸಾಲ್ಟ್ ಆದ ಪ್ರುಡುನೋವಾ ವಾಲ್ಟ್‍ನಲ್ಲಿ ವಿಶೇಷ ತರಬೇತಿ ಪಡೆದಿರುವ ದೀಪಾ ಪದಕ ಗೆದ್ದೇ ಗೆಲ್ಲುತ್ತಾಳೆ ಎಂಬ ಅಪರಿಮಿತ ವಿಶ್ವಾಸ ನನಗಿದೆ ಎಂದು ನಂದಿ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‍ನಲ್ಲಿ ಅರ್ಹತೆ ಪಡೆದ ಭಾರತದ ಪ್ರಥಮ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆ ಪಡೆದಿರುವ ದೀಪಾ ಜಿಮ್ನಾಸ್ಟಿಕ್‍ನ ತಮ್ಮ ಫೇವರೆಟ್ ವಾಲ್ಟ್ ವಿಭಾಗದಲ್ಲಿ ಫೈನಲ್‍ಗೆ ಅರ್ಹತೆ ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. ಭಾರತಾಂಬೆಯ ಹೆಮ್ಮೆಯ ಪುತ್ರಿಯಾಗಿರುವ ದೀಪಾ ರಿಯೋದಲ್ಲಿ ದೇಶದ ಗೌರವವನ್ನು ಬೆಳಗಿಸಲಿ ಎಂಬುದೇ ಪ್ರತಿಯೊಬ್ಬ ಭಾರತೀಯರ ಹಾರೈಕೆಯಾಗಿದೆ.

Facebook Comments

Sri Raghav

Admin