ಗೋವಾ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

CM-Ssi

ಬೆಂಗಳೂರು, ಜ.30- ಮಹದಾಯಿ ವಿಷಯದಲ್ಲಿ ನಿರ್ಣಯ ಕೈಗೊಳ್ಳಲು ಗೋವಾ ಸ್ಪೀಕರ್ ಯಾರು ಎಂದು ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋವಾ ಈ ವಿಚಾರದಲ್ಲಿ ಅನಗತ್ಯ ಕ್ಯಾತೆ ತೆಗೆಯುತ್ತಿದೆ ಎಂದು ಗುಡುಗಿದ್ದಾರೆ. ವಿಧಾನಸೌಧ, ವಿಕಾಸಸೌಧದ ನಡುವಿರುವ ಮಹಾತ್ಮಗಾಂಧೀಜಿ ಪ್ರತಿಮೆಗೆ ಸರ್ವೋದಯದ ದಿನದ ಅಂಗವಾಗಿ ಪುಷ್ಪನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಹದಾಯಿ ವಿಷಯದಲ್ಲಿ ನಿರ್ಣಯ ಕೈಗೊಳ್ಳಲು ನ್ಯಾಯಾಧೀಕರಣವಿದೆ. ನ್ಯಾಯಾಲಯವೂ ಇದೆ. ಒಂದು ರಾಜ್ಯಕ್ಕೆ ಕದ್ದು ಬಂದು ನೋಡಿಕೊಂಡು ಹೋದವರಿಗೆ ಉತ್ತರ ಕೊಡಬೇಕಾಗಿಲ್ಲ. ಅನಗತ್ಯ ಕ್ಯಾತೆ ತೆಗೆಯುವುದೇ ಅವರಿಗೆ ಹವ್ಯಾಸವಾಗಿದೆ ಎಂದು ಕಿಡಿಕಾರಿದರು.

ಮಹದಾಯಿಯ 45 ಟಿಎಂಸಿ ಅಡಿ ನೀರು ನಮ್ಮ ರಾಜ್ಯದಲ್ಲೇ ಉತ್ಪತ್ತಿಯಾಗುತ್ತದೆ. ಅಂದರೆ ಮಳೆಯಿಂದಾಗಿ ಈ ನೀರು ನದಿ ಸೇರುತ್ತದೆ. ಅಲ್ಲದೆ 200 ಟಿಎಂಸಿ ಅಡಿ ನೀರು ಸಮುದ್ರದ ಪಾಲಾಗುತ್ತಿದೆ. ಇದನ್ನು ಗೋವಾ ಅಥವಾ ಮಹಾರಾಷ್ಟ್ರ ಬಳಸಿಕೊಳ್ಳುತ್ತಿಲ್ಲ.ಹಾಗಿದ್ದೂ ಸಹ ನಮ್ಮ ಪಾಲೀನ ನೀರಿನ ಹಕ್ಕಿಗಾಗಿ ಕೇಳುತ್ತಿರುವ 7.56 ಟಿಎಂಸಿ ನೀರನ್ನು ಕೊಡುತ್ತಿಲ್ಲ ಎಂದು ಹರಿಹಾಯ್ದರು.

ಮಹದಾಯಿ ನದಿ ಪಾತ್ರದಲ್ಲಿ ನಿಯಮ ಉಲ್ಲಂಘಿಸಿ ಕಾಲುವೆ ನಿರ್ಮಿಸಿಲ್ಲ. ಗೋವಾ ರಾಜ್ಯದ ಯಾವುದೇ ನಿರ್ಣಯ ನಮಗೆ ಸಂಬಂಧಪಡುವುದಿಲ್ಲ. ಮಹದಾಯಿ ವಿವಾದ ನ್ಯಾಯಾಧೀಕರಣದ ಮುಂದಿದ್ದು, ವಿಚಾರಣೆ ಹಂತದಲ್ಲಿದೆ. ಫೆ.6ರಿಂದ ವಿಚಾರಣೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಮಹದಾಯಿ ನದಿ ಪಾತ್ರದ ಕಣಕುಂಬಿಗೆ ಕದ್ದು ಬಂದಿದ್ದಾರೆ. ಹೇಳಿ ಬಂದಿದ್ದರೆ ಶಿಷ್ಟಾಚಾರದ ಪ್ರಕಾರ ವ್ಯವಸ್ಥೆ ಮಾಡುತ್ತಿದ್ದೆವು. ಒಂದು ರಾಜ್ಯದವರು ಮತ್ತೊಂದು ರಾಜ್ಯಕ್ಕೆ ಹೋಗುವಾಗ ಹೇಳಿ ಹೋಗುವ ಸೌಜನ್ಯ ಇರಬೇಕು. ಆದರೆ, ಕದ್ದು ಬಂದಿರುವುದನ್ನು ತಾವು ಖಂಡಿಸುತ್ತೇವೆ ಎಂದರು.

ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರ ಹತ್ಯೆಯನ್ನು ಸಮರ್ಥಿಸುತ್ತಿರುವುದು ದೊಡ್ಡ ದುರಂತ. ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ಗೋಡ್ಸೆ ಪರಿವಾರದವರೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರು ಮತೀಯವಾದಿಗಳು ಎಂದು ಹೇಳಿದರು. ಮಹಾತ್ಮಗಾಂಧೀಜಿ ಜೀನವನದುದ್ದಕ್ಕೂ ಸತ್ಯ, ಅಹಿಂಸೆಯನ್ನು ಅಳವಡಿಸಿಕೊಂಡು ಬದುಕಿದರು. ದೇಶದಲ್ಲಿ ಎಲ್ಲೇ ಕೋಮು ಸಂಘರ್ಷಗಳು ಉಂಟಾದರೂ ಸಾಂತ್ವನ ಹೇಳುತ್ತಿದ್ದರು. ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸುತ್ತಿದ್ದರು. ಅವರ ಕೋಮಸೌಹಾರ್ದತಾ ದೃಷ್ಟಿ ಇಂದಿಗೂ ಪ್ರಸ್ತುತವಾಗಿದೆ. ಜಾತ್ಯಾತೀತತೆಯನ್ನು ಎತ್ತಿಹಿಡಿದಿದ್ದರು ಎಂದು ವಿವರಿಸಿದರು.

ಅವರ ತತ್ವಾದರ್ಶಗಳನ್ನು ಅನುಸರಿಸಬೇಕು. ಅದರಿಂದ ಸೌಹಾರ್ದ ವಾತಾವರಣ ನೆಲಸಲಿದೆ ಎಂದು ಹೇಳಿದರು. ಗಾಂಧೀಜಿಯವರು ಹುತಾತ್ಮರಾದ ದಿನವನ್ನು ಸರ್ವೋದಯ ದಿನ ಎಂದು ಆಚರಿಸಿ ಗಾಂಧೀಜಿ ಅವರಿಗೆ ಗೌರವ ಸಲ್ಲಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಎಚ್.ಆಂಜನೇಯ, ವಿಧಾನಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ವಿಜಯ್‍ಭಾಸ್ಕರ್ ಮತ್ತಿತರರಿದ್ದರು.

Facebook Comments

Sri Raghav

Admin