ಗೋವಿಂದರಾಜು ಮನೆಯಲ್ಲಿ ಸಿಕ್ಕ ಮಾಹಿತಿ ಬಹಿರಂಗಪಡಿಸುವಂತೆ ಸಿಬಿಐಗೆ ಯಡಿಯೂರಪ್ಪ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

yadiyurappa
ಕಲಬುರಗಿ,ಫೆ.22-ವಿಧಾನಪರಿಷತ್ ಸದಸ್ಯ ಗೋವಿಂದರಾಜು ನಿವಾಸದ ಮೇಲೆ ದಾಳಿ ನಡೆದ ವೇಳೆ ಸಿಕ್ಕಿ ಬಿದ್ದಿರುವ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸುವಂತೆ ಸಿಬಿಐಗೆ ಪತ್ರ ಬರೆಯಲಾಗುವುದು ಎಂದು ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಕಾಂಗ್ರೆಸ್ ವಿರುದ್ದ ನೇರವಾಗಿಯೇ ಸಮರ ಸಾರಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಹಗರಣ ನಡೆದಿದ್ದರೆ ನೀವೇ ಮುಖ್ಯಮಂತ್ರಿ. ನಿಮ್ಮ ಬಳಿ ಎಲ್ಲ ತನಿಖೆ ಸಂಸ್ಥೆಗಳಿವೆ. ದಾಖಲೆಗಳಿದ್ದರೆ ಬಹಿರಂಗಪಡಿಸಿ ನನ್ನನ್ನು ಬೆತ್ತಲು ಮಾಡಲಿ. ನಿಮ್ಮನ್ನು ಯಾವ ಕೈಗಳು ಕಟ್ಟಿ ಹಾಕಿವೆ ಎಂದು ಬಿಎಸ್‍ವೈ ಪ್ರಶ್ನಿಸಿದರು. ಕಾಂಗ್ರೆಸ್ ಹೈಕಮಾಂಡ್‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಸಾವಿರ ಕಪ್ಪ ಕಾಣಿಕೆ ನೀಡಿರುವುದು ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿಯಲ್ಲಿ ಉಲ್ಲೇಖವಾಗಿದೆ. ಇದರ ಮಾಹಿತಿ ನೀಡುವಂತೆ ಸಿಬಿಐಗೆ ನಮ್ಮ ಸಂಸದರಿಂದ ಪತ್ರ ಬರೆಯಲಾಗುವುದು. ಸತ್ಯಾಂಶ ಆಗಲಾದರೂ ಗೊತ್ತಾಗಲಿ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾನು ಈ ಹಿಂದೆ ಹೇಳಿದ ಎಲ್ಲ ಹೇಳಿಕೆಗೆ ಬದ್ಧನಾಗಿದ್ದೇನೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೈಕಮಾಂಡ್‍ಗೆ ಒಂದು ಸಾವಿರ ಕೋಟಿ ಕಪ್ಪ ಕಾಣಿಕೆ ನೀಡಿರುವುದು ಡೈರಿಯಲ್ಲಿ ಉಲ್ಲೇಖವಾಗಿದೆ. ಸ್ವತಃ ಗೋವಿಂದರಾಜು ಅವರೇ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ಸಿಗರು ನನ್ನ ಆರೋಪಕ್ಕೆ ಉತ್ತರ ನೀಡುವ ಬದಲು ನನ್ನನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಯಡಿಯೂರಪ್ಪ ಜಗ್ಗುವುದಿಲ್ಲ ಎಂದು ಗುಡುಗಿದರು.ಐಟಿ, ಇಡಿ ಹಾಗೂ ಸಿಬಿಐ ಅಧಿಕಾರಿಗಳಿಗೆ ಡೈರಿ ಸಿಕ್ಕಿದೆಯೇ ಇಲ್ಲ ಎಂಬುದನ್ನು ಗೋವಿಂದರಾಜು ಬಹಿರಂಗಪಡಿಸಬೇಕು. ನಾನು ಈಗಲೂ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ಎಐಸಿಸಿ ವರಿಷ್ಠರಿಗೆ ಒಂದು ಸಾವಿರ ಕೋಟಿ ಹಣ ನೀಡಿರುವುದು ನಿಜ. ನನ್ನ ಆರೋಪ ಸುಳ್ಳು ಎಂದಾದರೆ ಈಗಲೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಎಸೆದರು.

ಸತ್ಯ ಅರಿವಾಯ್ತಾಲ್ಲ ಬಿಡಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು 25ರಂದು ಫ್ರೀಡಂ ಪಾರ್ಕ್‍ನಲ್ಲಿ ಸತ್ಯಮೇವ ಜಯತೆ ಹೆಸರಿನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಖಂಡರಿಗೆ ಈಗಲಾದರೂ ಸತ್ಯದ ಅರಿವಾಗಿರುವುದು ಸಂತಸ ತಂದಿದೆ ಎಂದು ಲೇವಡಿ ಮಾಡಿದರು. ಮುಖ್ಯಮಂತ್ರಿ ಸೇರಿದಂತೆ ಅನೇಕರು ನಾನು ಮಾಡಿರುವ ಆರೋಪಕ್ಕೆ ಜನತೆ ಮುಂದೆ ಸತ್ಯ ಹೇಳಲಿ. ಗೋವಿಂದರಾಜು ನಿವಾಸದಲ್ಲಿ ಸಿಕ್ಕಿರುವ ಡೈರಿಯಲ್ಲಿ ಯಾರ ಯಾರ ಹೆಸರುಗಳಿವೆ, ಎಷ್ಟು ಹಣ ಸಂದಾಯವಾಗಿದೆ ಎಂಬುದು ಮುಖ್ಯಮಂತ್ರಿಗೆ ಗೊತ್ತು. ನನ್ನ ಆರೋಪ ಸುಳ್ಳಾದರೆ ಈಗಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಸಿದ್ದ ಎಂದರು.

ಕಾದುನೋಡಿ:

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಿಂದ ಬೇಸತ್ತಿರುವ ಕೆಲವು ಕಾಂಗ್ರೆಸ್ ನಾಯಕರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು. ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ , ಮಾಜಿ ಸಚಿವ ಕುಮಾರ್ ಬಂಗಾರಪ್ಪ ಪಕ್ಷ ಸೇರ್ಪಡೆ ಕುರಿತಂತೆ ಕಾದು ನೋಡಿ ಎಂದು ಇನ್ನಷ್ಟು ಕುತೂಹಲ ಕೆರಳಿಸಿದರು. ಕುಮಾರ್ ಬಂಗಾರಪ್ಪ ನನ್ನನ್ನು ಎರಡು ಬಾರಿ ಭೇಟಿ ಮಾಡಿದ್ದಾರೆ. ಅವರು ಬಿಜೆಪಿ ಸೇರ್ಪಡೆಯಾಗುವುದು ಬಹುತೇಕ ಖಚಿತ ಎಂದರು.

ಬಹಿರಂಗಪಡಿಸಿ:

ನೀವು ಮುಖ್ಯಮಂತ್ರಿಯಾಗಿದ್ದ ವೇಳೆ ಹೈಕಮಾಂಡ್‍ಗೆ ಚೆಕ್ ಮೂಲಕ ಹಣ ನೀಡಿದ್ದೇರೆಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಅವರ ಬಳಿ ದಾಖಲೆಗಳಿದ್ದರೆ ಬಹಿರಂಗಪಡಿಸಲಿ, ನಾನು ಯಾರೊಬ್ಬರಿಗೂ ಹಣ ನೀಡಿಲ್ಲ. ದಾಖಲೆಗಳಿದ್ದರೆ ಸಾರ್ವಜನಿಕರೆದುರು ಬಿಡುಗಡೆ ಮಾಡಲು ಏಕೆ ವಿಳಂಬ ಎಂದು ಪ್ರಶ್ನಿಸಿದರು.  ಬಿಬಿಎಂಪಿಯಲ್ಲಿ ನಡೆದಿರುವ ತೆರಿಗೆ ಸೋರಿಕೆ ಹಗರಣವು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೈ ಕೆಳಗೆ ನಡೆದಿದೆ. ಮೂರುವರೆ ಸಾವಿರ ಕೋಟಿ ಲೂಟಿ ನಡೆದಿದ್ದು , ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದರು. ರಾಜ್ಯದಲ್ಲಿ ಬರಗಾಲ ಆವರಿಸಿರುವುದರಿಂದ ಪ್ರತಿಭಟನೆ ನಡೆಸುವ ಬದಲು ರೈತರಿಗೆ ಸಂಕಷ್ಟಗಳಿಗೆ ಧಾವಿಸಬೇಕು. ಸಹಕಾರಿ ಸಂಘಗಳಿಂದ ಪಡೆದಿರುವ ರೈತರ ಸಾಲಮನ್ನಾ ಮಾಡಬೇಕು, ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುವಂತೆ ಪ್ರಧಾನಿಗೆ ಒತ್ತಡ ಹೇರುತ್ತೇವೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin